Roopa Gururaj Column: ಕೃಷ್ಣ ಸೇವಿಸಿದ ಕಡಲೆಕಾಯಿಯ ಲೆಕ್ಕ
ಕಡಿಮೆ ಅಡುಗೆ ಮಾಡಿ, ಸೈನಿಕರಿಗೆ ಸಾಕಷ್ಟು ಆಹಾರವಿಲ್ಲದಿದ್ದರೆ, ಅದು ಮತ್ತೆ ನ್ಯಾಯಯುತವಾದು ದಲ್ಲ, ಆದರೆ ಉಡುಪಿ ಅರಸ ಅದೆಷ್ಟು ನೈಪುಣ್ಯತೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದ ಎಂದರೆ ಒಂದು ದಿನವೂ ಯಾರಿಗೂ ಆಹಾರ ಕಡಿಮೆಯಾಗುತ್ತಿರಲಿಲ್ಲ, ಹಾಗೆಂದು ಒಂದು ದಿನವೂ ಮಾಡಿದ ಅಡಿಗೆ ಪೋಲಾಗುತ್ತಲೂ ಇರಲಿಲ್ಲ.
![Kadale kai](https://cdn-vishwavani-prod.hindverse.com/media/images/Kadale_kai.max-1280x720.jpg)
![ರೂಪಾ ಗುರುರಾಜ್](https://cdn-vishwavani-prod.hindverse.com/media/images/Roopa-G.2e16d0ba.fill-100x100.jpg)
ಒಂದೊಳ್ಳೆ ಮಾತು
ರೂಪ ಗುರುರಾಜ್
ಮಹಾಭಾರತದ ಯುದ್ಧದಲ್ಲಿ ಪಾಂಡವ, ಕೌರವರ ಯಾವುದೇ ಪಕ್ಷಕ್ಕೆ ಹೋಗದೆ ಉಳಿದವನು ಉಡುಪಿಯ ಅರಸ ಮಾತ್ರ. ಆತ, ಕೃಷ್ಣನಿಗೆ ‘ಎಲ್ಲರೂ ಯುದ್ಧಕ್ಕೆ ಹೋಗುತ್ತಾರೆ. ಯುದ್ಧ ಮಾಡು ವವರಿಗೆ ಆಹಾರ ಅತ್ಯಗತ್ಯ. ಕುರುಕ್ಷೇತ್ರ ಯುದ್ಧಕ್ಕೆ ನಾನೇ ಭೋಜನದ ವ್ಯವಸ್ಥೆ ಮಾಡುತ್ತೇನೆ’ ಎಂದು ಎರಡು ಪಕ್ಷದ ಸೈನಿಕರಿಗೆ ಆಹಾರವನ್ನು ತಯಾರಿಸಿ ಬಡಿಸುತ್ತಿದ್ದ. ಕುರುಕ್ಷೇತ್ರ ಯುದ್ಧ 18 ದಿನಗಳವರೆಗೆ ನಡೆಯಿತು. ಪ್ರತಿ ದಿನ ಸಾವಿರಾರು ಜನರು ಸಾಯುತ್ತಿದ್ದರು. ಊಟೋಪಚಾರ ನಿರ್ವಹಣೆಯೇ ದೊಡ್ಡ ಸವಾಲಾ ಗಿತ್ತು. ಇಂತಹ ಸಮಯದಲ್ಲಿ ಒಂದು ಜಿಜ್ಞಾಸೆ ಕೂಡ ಇತ್ತು. ಅದೇ ಸಂಖ್ಯೆಯ ಯೋಧರಿಗೆ ಅಡುಗೆ ಮಾಡುವುದನ್ನು ಮುಂದುವರಿಸಿದರೆ, ಬಹಳಷ್ಟು ಆಹಾರವು ವ್ಯರ್ಥವಾಗುತ್ತದೆ.
ಕಡಿಮೆ ಅಡುಗೆ ಮಾಡಿ, ಸೈನಿಕರಿಗೆ ಸಾಕಷ್ಟು ಆಹಾರವಿಲ್ಲದಿದ್ದರೆ, ಅದು ಮತ್ತೆ ನ್ಯಾಯಯುತ ವಾದುದಲ್ಲ, ಆದರೆ ಉಡುಪಿ ಅರಸ ಅದೆಷ್ಟು ನೈಪುಣ್ಯತೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದ ಎಂದರೆ ಒಂದು ದಿನವೂ ಯಾರಿಗೂ ಆಹಾರ ಕಡಿಮೆಯಾಗುತ್ತಿರಲಿಲ್ಲ, ಹಾಗೆಂದು ಒಂದು ದಿನವೂ ಮಾಡಿದ ಅಡಿಗೆ ಪೋಲಾಗುತ್ತಲೂ ಇರಲಿಲ್ಲ.
ಇದನ್ನೂ ಓದಿ: Roopa Gururaj Column: ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ ?
ಪ್ರತಿ ದಿನ ಎಷ್ಟು ಜನರು ಸಾಯುತ್ತಾರೆ ಎಂದು ಯಾರಿಗೂ ತಿಳಿದಿರದ ಕಾರಣ ಅವರು ನಿಖರವಾದ ಆಹಾರವನ್ನು ಹೇಗೆ ಬೇಯಿಸುತ್ತಾರೆ ಎಂದು ಎಲ್ಲರೂ ಆಶ್ಚರ್ಯಚಕಿತರಾದರು. ಯುದ್ಧ ದಿನದ ಲೆಕ್ಕಾಚಾರಗಳು ತಿಳಿಯುತ್ತಿದ್ದದ್ದು ಮಧ್ಯರಾತ್ರಿಯ ಮೇಲೆಯೇ, ಆದರೆ ಅಷ್ಟು ಹೊತ್ತಿಗೆ ಅಡುಗೆಯ ಸಮಯ ಮೀರಿರುತ್ತಿತ್ತು. ಖಂಡಿತವಾಗಿ ಆ ದಿನ ಎಷ್ಟು ಜನರು ಸತ್ತರು ಎಂದು ಅಡುಗೆ ಮಾಡು ವವರಿಗೆ ತಿಳಿದಿರುತ್ತಿರಲಿಲ್ಲ, ಆದರೆ ಪ್ರತಿದಿನ, ಅವರು ಉಳಿದ ಸೈನಿಕರಿಗೆ ಅಗತ್ಯವಾದ ಆಹಾರ ವನ್ನು ನಿಖರವಾಗಿ ಮಾಡಿ ಹಾಕುತ್ತಿದ್ದರು.
ಇದನ್ನು ಹೇಗೆ ನಿಭಾಯಿಸಿದಿರಿ ಎಂದು ಯಾರೋ ಉಡುಪಿ ಅರಸರನ್ನು ಕೇಳಿದಾಗ, ‘ಪ್ರತಿದಿನ ಬೇಯಿಸಿದ ಕಡಲೆಕಾಯಿ ತಿನ್ನಲು ಕೃಷ್ಣನಿಗೆ ಇಷ್ಟ. ನಾನು ಅವುಗಳನ್ನು ಸಿಪ್ಪೆ ತೆಗೆದು ಬಟ್ಟಲಿನಲ್ಲಿ ಅವನಿಗಾಗಿ ಸೇವಿಸಲು ಇಡುತ್ತೇನೆ. ಅವನು ಕೆಲವೇ ಕಡಲೆಕಾಯಿಗಳನ್ನು ತಿನ್ನುತ್ತಾನೆ. ನಂತರ, ಅವನು ಎಷ್ಟು ತಿಂದಿದ್ದಾನೆಂದು ನೋಡಲು ನಾನು ಲೆಕ್ಕ ಹಾಕುತ್ತೇನೆ. ಅವನು 10 ಕಡಲೆಕಾಯಿ ಗಳನ್ನು ತಿಂದಿದ್ದರೆ, ನಾಳೆ 10000 ಜನರು ಸಾಯುತ್ತಾರೆ ಎಂದು ಅರ್ಥೈಸಿಕೊಳ್ಳುತ್ತಿದ್ದೆ.
ಆದ್ದರಿಂದ ನಾನು ಮರುದಿನದ ಆಹಾರವನ್ನು 10000 ಜನರಿಗೆ ಕಡಿಮೆ ಮಾಡಿಸುತ್ತಿದ್ದೆ. ಪ್ರತಿದಿನ, ನಾನು ಈ ಕಡಲೆಕಾಯಿಗಳನ್ನು ಎಣಿಸುತ್ತಾ ಅದಕ್ಕೆ ತಕ್ಕಂತೆ ಅಡುಗೆ ವ್ಯವಸ್ಥೆ ಮಾಡುತ್ತಿದ್ದೆ. ಕೃಷ್ಣ ನ ಕೃಪಾಕಟಾಕ್ಷದಿಂದ ಎಂದಿಗೂ ಆಹಾರದ ಕೊರತೆ ಕಾಡಲಿಲ್ಲ ಅಥವಾ ಪೋಲಾಗಲಿಲ್ಲ ಎಂದ ಉಡುಪಿಯ ಅರಸ ಕೈ ಮುಗಿಯುತ್ತಾನೆ.
ಕಥಸಾರಾಂಶ ಅದಷ್ಟೇ ಅಲ್ಲ , ಆರಂಭ ಮತ್ತು ಅಂತ್ಯ ತಿಳಿದಿದ್ದರೂ, ಇನ್ನೂ ಆಟವಾಡಬೇಕು ಇದೇ ಜಗದ ನಿಯಮ. ಇದನ್ನೇ ಕೃಷ್ಣ ಪಾಲಿಸಿದ್ದು. ನಾಳಿನ ಭವಿಷ್ಯ ಅವನಿಗೆ ಗೊತ್ತಿದ್ದರೂ ಕೂಡ ಅವನು ಇಂದು ಸಮಚಿತ್ತನಾಗಿ ಮತ್ತೆ ಯುದ್ಧದ ತಯಾರಿಯಲ್ಲಿ ತೊಡಗುತ್ತಿದ್ದ ಮತ್ತು ಎಲ್ಲರನ್ನೂ ಧರ್ಮದಿಂದ ಯುದ್ಧ ಮಾಡಲು ಪ್ರೇರೇಪಿಸುತ್ತಿದ್ದ.
ಸಾಮಾನ್ಯ ಜನರಾಗಿ ನಾವು ಭವಿಷ್ಯವನ್ನು ಅರಿಯುವ ಪ್ರಯತ್ನ ಮಾಡುತ್ತೇವೆ, ಕೆಲವೊಮ್ಮೆ ತಿಳಿದುಕೊಳ್ಳುತ್ತೇವೆ ಸಹ. ಆದರೆ ನಾಳೆ ಮರಣ ಎಂದು ಗೊತ್ತಾದರೆ ಇಂದಿನ ಬದುಕಿನಲ್ಲಿ ಉತ್ಸಾಹ ವೇ ಇರುವುದಿಲ್ಲ. ಹೇಗಿದ್ದರೂ ಸಾಯುತ್ತೇವೆ ಎನ್ನುವ ಒಂದು ವೈರಾಗ್ಯ ಮೂಡಿಬಿಡುತ್ತದೆ. ಆದರೆ ಶ್ರೀಕೃಷ್ಣ ಪರಮಾತ್ಮ ಎಲ್ಲ ಭವಿಷ್ಯ ಗೊತ್ತಿದ್ದರೂ ಕೂಡ ಇಂದಿನ ಈ ಕ್ಷಣದಲ್ಲಿ ಬದುಕುತ್ತಿದ್ದ ಅಂತೆಯೇ ಅದನ್ನೇ ತನ್ನ ಭಕ್ತರಿಗೂ ಬೋಧಿಸಿದ.
ಕಳೆದ ನಿನ್ನೆಗಳನ್ನು ಮರೆತು ಬಿಡೋಣ, ಅವುಗಳ ಭಾರವನ್ನು ಹೊತ್ತು ಪ್ರಯೋಜನವಿಲ್ಲ. ಇನ್ನು ನಾಳೆಗಳ ಬಗ್ಗೆ ಅನಗತ್ಯವಾಗಿ ಚಿಂತಿಸಿ ಕೂಡ ನಾವು ಸಾಧಿಸಬೇಕಾದದ್ದು ಏನೂ ಇಲ್ಲ. ಇಂದಿನ ಈ ಕ್ಷಣವನ್ನು ನಾವು ಬದುಕಲರಿತಾಗ ಮಾತ್ರ ನಮ್ಮ ಬದುಕಿಗೊಂದು ಅರ್ಥ, ಅದೇ ಜೀವನದ ಸಾರ ಕೂಡ.