BS Yediyurappa: ಮಾಜಿ ಸಿಎಂ ಯಡಿಯೂರಪ್ಪಗೆ ರಿಲೀಫ್; ಪೋಕ್ಸೋ ಪ್ರಕರಣದ ಆದೇಶ ಕಾಯ್ದಿರಿಸಿದ ಹೈಕೋರ್ಟ್
BS Yediyurappa: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಿದೆ. ಪೋಕ್ಸೋ ಪ್ರಕರಣ ರದ್ದುಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಜತೆಗೆ ಖುದ್ದು ಹಾಜರಿಗೆ ನೀಡಿದ್ದ ವಿನಾಯತಿಯನ್ನು ವಿಸ್ತರಿಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು, ಜ. 17, 2025: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣ (POCSO case) ರದ್ದುಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ (Karnataka High Court) ಆದೇಶವನ್ನು ಕಾಯ್ದಿರಿಸಿದೆ.
ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆದೇಶ ಕಾಯ್ದಿರಿಸಿತು. ಇದೇ ವೇಳೆ ಯಡಿಯೂರಪ್ಪ ಖುದ್ದು ಹಾಜರಿಗೆ ನೀಡಿದ್ದ ವಿನಾಯತಿಯನ್ನು ವಿಸ್ತರಿಸಿದೆ. ಆ ಮೂಲಕ ಬಿಜೆಪಿ ನಾಯಕರೂ ಆಗಿರುವ ಮಾಜಿ ಸಿಎಂಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಏನಿದು ಪ್ರಕರಣ?
ತಮ್ಮ ಮಗಳ ಮೇಲಿನ ದೌರ್ಜನ್ಯ ಒರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಮಾಡುವಂತೆ ಮನವಿ ಸಲ್ಲಿಸಿದ್ದ ಸಂತ್ರಸ್ತ ಬಾಲಕಿಯ ತಾಯಿ ನೀಡಿದ್ದ ದೂರಿನ ಪ್ರಕಾರ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯಿದೆ 2012ರ ಕಲಂ 8ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ, ಭಾರತೀಯ ದಂಡ ಸಂಹಿತೆ 1860ರ (ಐಪಿಸಿ) ಕಲಂ 354 (ಎ)ರ ಅಡಿಯಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದೆ. ಅವರ ಸಹಚರರಾದ ಇತರ ಮೂವರ ವಿರುದ್ಧ ಐಪಿಸಿ ಕಲಂ 204 ಮತ್ತು 214ರಡಿ ಕ್ರಮವಾಗಿ ಸಾಕ್ಷ್ಯ ನಾಶಪಡಿಸಲು ಮತ್ತು ಉಡುಗೊರೆಗಳನ್ನು ನೀಡಲು ಮುಂದಾದ ಅಪರಾಧಗಳಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.