ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಚಾಂಪಿಯನ್ಸ್‌ ಟ್ರೋಫಿ ಕೊಹ್ಲಿ, ರೋಹಿತ್‌, ಜಡೇಜಾಗೆ ಕೊನೆಯ ಐಸಿಸಿ ಟೂರ್ನಿ?: ಆಕಾಶ್‌ ಚೋಪ್ರಾ

Akash chopra on Virat Kohli-Rohit Sharma's Future: ಪಾಕಿಸ್ತಾನದ ಆತಿಥ್ಯದಲ್ಲಿ ಫೆಬ್ರವರಿ 19 ರಂದು ಆರಂಭವಾಗುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಸಜ್ಜಾಗುತ್ತಿದೆ. ಈ ಟೂರ್ನಿಯು ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ರವೀಂದ್ರ ಜಡೇಜಾಗೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಮಾಜಿ ಕ್ರಿಕೆಟಿಗ ಆಕಾಶ ಚೋಪ್ರಾ ತಿಳಿಸಿದ್ದಾರೆ.

ಕೊಹ್ಲಿ, ರೋಹಿತ್‌, ಜಡೇಜಾರ ಭವಿಷ್ಯದ ಬಗ್ಗೆ ಆಕಾಶ್‌ ಚೋಪ್ರಾ ಹೇಳಿಕೆ!

ಕೊಹ್ಲಿ, ರೋಹಿತ್‌, ಜಡೇಜಾ ಬಗ್ಗೆ ಆಕಾಶ್‌ ಚೋಪ್ರಾ ಮಾತನಾಡಿದ್ದಾರೆ.

Profile Ramesh Kote Feb 15, 2025 4:52 PM

ನವದೆಹಲಿ: ಭಾರತ ತಂಡದ ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit Sharma) ಅವರ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ ಹಾಗೂ ಇವರಿಂದ ಸ್ಥಿರ ಪ್ರದರ್ಶನದ ಕೊರತೆ ಕಾಡುತ್ತಿದೆ. ಇದರ ನಡುವೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಕೊಹ್ಲಿ, ರೋಹಿತ್‌ ಹಾಗೂ ರವೀಂದ್ರ ಜಡೇಜಾ ಅವರ ವೃತ್ತಿ ಜೀವನಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ, ಈ ಮೂವರ ಆಟಗಾರರ ಪಾಲಿಗೆ ಚಾಂಪಿಯನ್ಸ್‌ ಟ್ರೋಫಿ ಕೊನೆಯ ಐಸಿಸಿ ಟೂರ್ನಿಯಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ರವೀಂದ್ರ ಜಡೇಜಾ ಟಿ20ಐ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಇದೀಗ ಒಡಿಐ ಹಾಗೂ ಟೆಸ್ಟ್‌ ಕಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ಕಳೆದ ಟೆಸ್ಟ್‌ ಸರಣಿ ಹಾಗೂ ಇಂಗ್ಲೆಂಡ್‌ ವಿರುದ್ಧ ಕಳೆದ ಏಕದಿನ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಅಂತಾರಾಷ್ಟ್ರೀಯ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅತ್ಯಧಿಕ ಸಿಕ್ಸರ್‌, ಬೌಂಡರಿ ಸಿಡಿಸಿದ ಬ್ಯಾಟರ್‌ಗಳು

ಚಾಂಪಿಯನ್ಸ್‌ ಟ್ರೋಫಿ ಈ ಮೂವರಿಗೆ ಕೊನೆಯ ಐಸಿಸಿ ಟೂರ್ನಿ?

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರ ಐಸಿಸಿ ಟೂರ್ನಿಗಳ ವೃತ್ತಿ ಜೀವನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಈ ಮೂವರು ಉತ್ತಮ ಪ್ರದರ್ಶನ ತೋರಬೇಕಾಗಿದೆ. ಈ ಮೂವರು ಆಟಗಾರರ ವಯಸ್ಸು ಹಾಗೂ ಅವರ ಪ್ರದರ್ಶನವನ್ನು ನೋಡಿದರೆ, 2027ರ ಏಕದಿನ ವಿಶ್ವಕಪ್‌ ಟೂರ್ನಿ ಅವರ ಪಾಲಿಗೆ ಕಠಿಣ ಎಂದು ಹೇಳಿದ್ದಾರೆ.

"ಕೆಲವೇ ದಿನಗಳಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ ಇದಾದ ಬಳಿಕ, ಈ ವರ್ಷ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ನಡೆಯಲಿದೆ. ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆದಿಲ್ಲ. ಹಾಗಾಗಿ, ಅವರು ಆಡುವುದಿಲ್ಲ. ಅದರಂತೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರು ಆಡುತ್ತಿಲ್ಲ. ಇನ್ನು ಮುಂದಿನ ವರ್ಷ ಟಿ20 ವಿಶ್ವಕಪ್‌ ನಡೆಯಲಿದೆ. ಆದರೆ, ಟಿ20ಐ ಕ್ರಿಕೆಟ್‌ಗೆ ಈ ಮೂವರು ವಿದಾಯ ಹೇಳಿದ್ದಾರೆ ಹಾಗೂ ಈ ಟೂರ್ನಿಯಲ್ಲಿ ಇವರು ಆಡುವುದಿಲ್ಲ. 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಇನ್ನೂ ಹೆಚ್ಚಿನ ಅವಧಿ ಇದೆ. 2027ಕ್ಕೆ ಪ್ರಪಂಚ ತುಂಬಾ ವಿಭಿನ್ನವಾಗಿ ಕಾಣಲಿದೆ. ಹಾಗಾಗಿ ಚಾಂಪಿಯನ್ಸ್‌ ಟ್ರೋಫಿ ನಮಗೆ ಕೊನೆಯ ಐಸಿಸಿ ಟೂರ್ನಿ ಎಂದು ಇವರು ಭಾವಿಸಬಹುದು," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಸುರೇಶ್‌ ರೈನಾ!

ಕೊಹ್ಲಿ, ರೋಹಿತ್‌, ಜಡೇಜಾ ಭಾರತಕ್ಕೆ ಕೀ ಆಟಗಾರರು

ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾಗೆ ಇದೀಗ 36 ವರ್ಷ ವಯಸ್ಸು ಹಾಗೂ ರೋಹಿತ್‌ ಶರ್ಮಾಗೆ 37 ವರ್ಷ ವಯಸ್ಸು. ಇವರು ಕಳೆದ ಒಂದು ದಶಕದಿಂದ ಭಾರತ ತಂಡಕ್ಕೆ ಪ್ರಮುಖ ಆಧಾರ ಸ್ಥಂಭಗಳಾಗಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಇವರ ಕೊಡುಗೆ ಅದ್ಭುತವಾಗಿದೆ. ಆದರೆ, ಇತ್ತೀಚೆಗೆ ಇವರ ಟೆಸ್ಟ್‌ ಕ್ರಿಕೆಟ್‌ನಲ್ಲಿನ ಪ್ರದರ್ಶನ ಸ್ವಲ್ಪ ಮಟ್ಟಿಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂಗ್ಲೆಂಡ್‌ ವಿರುದ್ದ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಬಳಿಕ ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ, ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದೆ.

ವಿರಾಟ್‌ ಕೊಹ್ಲಿ ಐಸಿಸಿ ಟೂರ್ನಿಗಳಲ್ಲಿನ ಪ್ರದರ್ಶನವನ್ನು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ ಹಾಗೂ ಇವರು ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಆಧಾರ ಸ್ಥಂಭವಾಗಿದ್ದಾರೆ. ರೋಹಿತ್‌ ಶರ್ಮಾ ತಮ್ಮ ನಾಯಕತ್ವದಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಗೆದ್ದಿದ್ದಾರೆ. ಇನ್ನು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಭಾರತಕ್ಕೆ ರವೀಂದ್ರ ಜಡೇಜಾ ಪ್ರಮುಖ ಅಸ್ತ್ರವಾಗಿದ್ದಾರೆ.