Varshita Murder Case: ಯುವತಿಯನ್ನು ಕೊಂದು ಸುಟ್ಟು ಹಾಕಿದ ಕ್ರೂರಿ ಸೆರೆ, ಕ್ಯಾನ್ಸರ್ 3ನೇ ಹಂತದಲ್ಲಿರುವ ಆರೋಪಿ
Chitradurga: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕ ಚೇತನ್ ವರ್ಷಿತಾ ಜತೆ ಸಂಪರ್ಕದಲ್ಲಿದ್ದ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬೇರೊಬ್ಬನ ಜೊತೆ ವರ್ಷಿತಾ ಸಂಬಂಧ ಬೆಳೆಸಿದ್ದಕ್ಕಾಗಿ ಕೋಪಗೊಂಡು ಕೊಲೆ ಮಾಡಿದ್ದೇನೆ ಎಂದಿದ್ದಾನೆ.

ಮೃತ ವರ್ಷಿತಾ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರ ಬಳಿ ಪತ್ತೆಯಾದ ಅಪ್ರಾಪ್ತ ಯುವತಿಯ ಶವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಲೆ ಆರೋಪಿ ಚೇತನ್ ಎಂಬಾತನನ್ನು ಬಂಧಿಸಲಾಗಿದ್ದು, ಇವನಿಗೆ ಕ್ಯಾನ್ಸರ್ (Cancer) ಕಾಯಿಲೆ ಮೂರನೇ ಹಂತದಲ್ಲಿದೆ ಎಂದು ಗೊತ್ತಾಗಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಕೋವೇರಹಟ್ಟಿ ಮೂಲದ ವರ್ಷಿತಾ(19) ಬರ್ಬರವಾಗಿ ಹತ್ಯೆಗೊಳಗಾಗಿದ್ದ (Varshita Murder Case) ಯುವತಿ. ಚಿತ್ರದುರ್ಗ (Chitradurga News) ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕ ಚೇತನ್ ವರ್ಷಿತಾ ಜತೆ ಸಂಪರ್ಕದಲ್ಲಿದ್ದ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬೇರೊಬ್ಬನ ಜೊತೆ ವರ್ಷಿತಾ ಸಂಬಂಧ ಬೆಳೆಸಿದ್ದಕ್ಕಾಗಿ ಕೋಪಗೊಂಡು ಕೊಲೆ ಮಾಡಿದ್ದೇನೆ ಎಂದಿರುವ ಚೇತನ್, ಗೋನೂರು ಬಳಿ ಕರೆದೊಯ್ದು ಹೊಡೆದಾಗ ನೆಲಕ್ಕೆ ಬಿದ್ದು ಸಾವನ್ನಪ್ಪಿದಳು. ಬಳಿಕ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದಾಗಿ ಹೇಳಿದ್ದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ
ಚಿತ್ರದುರ್ಗ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿದ್ದ ವರ್ಷಿತಾಳ ಶವ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನಿನ್ನೆ ಸಂಜೆ ಪತ್ತೆ ಆಗಿತ್ತು. ಅತ್ಯಾಚಾರ ಎಸಗಿ ಕೊಲೆಗೈದು ಬೆಂಕಿ ಹಚ್ಚಿರುವುದಾಗಿ ಶಂಕಿಸಲಾಗಿತ್ತು. ಎಸ್ಸಿ, ಎಸ್ಟಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವರ್ಷಿತಾ ಇರುತ್ತಿದ್ದಳು. ಆಗಸ್ಟ್ 14ರಂದು ಊರಿಗೆ ಹೋಗಲು ರಜೆ ಕೋರಿ ಹಾಸ್ಟೆಲ್ ವಾರ್ಡನ್ಗೆ ಲೀವ್ ಲೆಟರ್ ನೀಡಿದ್ದಳು. ಅದೇ ದಿನ ಹಾಸ್ಟೆಲ್ನಿಂದ ವರ್ಷಿತಾ ತನ್ನ ಫೋನ್ನಲ್ಲಿ ಮಾತನಾಡುತ್ತಾ ಕಾಲೇಜು ಯೂನಿಫಾರ್ಮ್ನಲ್ಲಿ ಸಹಪಾಠಿ ಜತೆ ತೆರಳಿದ್ದಳು.
ಮಗಳನ್ನು ಕಳೆದುಕೊಂಡ ವರ್ಷಿತಾ ಪೋಷಕರು ಕಣ್ಣೀರು ಹಾಕಿದ್ದು, ವರ್ಷಿತಾ ಸಾವಿಗೆ ನ್ಯಾಯ ಕೊಡಿಸುವಂತೆ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಆಕ್ರಂದಿಸಿದರು. ಚೇತನ್ ನಮ್ಮ ಪುತ್ರಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು. ಮೃತ ವರ್ಷಿತಾ ತಾಯಿ ಜ್ಯೋತಿ ತಿಪ್ಪೇಸ್ವಾಮಿ ಹೇಳಿಕೆ ನೀಡಿದ್ದು, ಮೊನ್ನೆ ರಾತ್ರಿ ಕರೆ ಮಾಡಿದಾಗ ಮಗಳು ಅಮ್ಮ ಅಂದಳು ಅಷ್ಟೇ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿ ಸಂಪರ್ಕಕ್ಕೆ ಸಿಕ್ಕಿಲ್ಲ. ನಿನ್ನೆ ಬೆಳಗ್ಗೆ ಹಾಸ್ಟೆಲ್ ಬಳಿಗೆ ಭೇಟಿ ಮಾಡಲು ನಾನು ಬಂದಿದ್ದೆ. ಆದರೂ ಸಿಗಲಿಲ್ಲ. ಬಳಿಕ ಐಮಂಗಲ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದೆವು. ನಿನ್ನೆ ಸಂಜೆ ವೇಳೆಗೆ ವರ್ಷಿತಾ ಕೊಲೆ ಆಗಿರುವ ವಿಚಾರ ತಿಳಿಸಿದರು. ಚಿತ್ರದುರ್ಗದ ಚೇತನ್ ಫೋನ್ ಮಾಡಿ ಕರೆದೊಯ್ದು ನನ್ನ ಪುತ್ರಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.
ಹಾಸ್ಟೆಲ್ನ ಕೆಲ ಹುಡುಗಿಯರು ಚೇತನ್ ಹೆಸರು ಹೇಳಿದರು. ಹಾಸ್ಟೆಲ್ ಬಳಿಗೆ ಬಾ ಎಂದು ಚೇತನ್ಗೆ ಕರೆ ಮಾಡಿದರೆ ಬರಲಿಲ್ಲ. ವರ್ಷಿತಾಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ತಾಯಿ ಜ್ಯೋತಿ ಆಗ್ರಹಿಸಿದರು. ತಂದೆ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿದ್ದು, ಮೊನ್ನೆ ಫೋನ್ ಸ್ವಿಚ್ ಆಫ್ ಆದಾಗ ನಾಪತ್ತೆ ದೂರು ನೀಡಿದ್ದೆವು. ಹಾಸ್ಟೆಲ್ ಸಿಬ್ಬಂದಿ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅವರು ಕಾಳಜಿ ವಹಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಚೇತನ್ ವರ್ಷಿತಾಳೊಂದಿಗೆ ಫೋನಲ್ಲಿ ಮಾತಾಡುತ್ತಿದ್ದ. ಚುಡಾಯಿಸುತ್ತಿದ್ದ, ಆಕೆಯೊಂದಿಗೆ ಓಡಾಡುತ್ತಿದ್ದನಂತೆ. ನಮಗೆ ವರ್ಷಿತಾಳ ಸಾವಿಗೆ ನ್ಯಾಯ ಬೇಕು. ನ್ಯಾಯ ಸಿಗುವವರೆಗೆ ನಾವು ಮೃತದೇಹ ತೆಗೆದುಕೊಂಡು ಹೋಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷಿತಾ ಸಂಬಂಧಿ ಪ್ರವೀಣ್ ಎಂಬವರು ಮಾತನಾಡಿದ್ದು, ಇಂತಹ ಮಳೆಗಾಲದಲ್ಲೂ ವಿದ್ಯಾರ್ಥಿನಿಯ ದೇಹ ಸುಟ್ಟು ಹಾಕಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎಂದೆನಿಸುತ್ತದೆ. ಪೊಲೀಸರು ಪ್ರಕರಣ ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Murder case: ಚಿತ್ರದುರ್ಗದಲ್ಲಿ ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಂದು ಸುಟ್ಟು ಹಾಕಿದ ದುರುಳರು