ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

CM Siddaramaiah: ಮಳೆಗಾಲದೊಳಗೆ ಕೆರೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಿ: ಸಿಎಂ ಸೂಚನೆ

CM Siddaramaiah: ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಸಿಎಂ ಮಾತನಾಡಿದ್ದಾರೆ. ರಾಜ್ಯದಲ್ಲಿ 30 ಸಾವಿರ ಕೆರೆಗಳ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ ಈಗಾಗಲೇ ಪೂರ್ಣಗೊಳಿಸಿದೆ. ಉಳಿದಿರುವ 10,754 ಕೆರೆಗಳ ಸಮೀಕ್ಷೆ ಕಾರ್ಯವನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು: ಕೆರೆ ಒತ್ತುವರಿ ತೆರವು ಕಾರ್ಯ ಬಾಕಿಯಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮಳೆಗಾಲದ ಒಳಗಾಗಿ ಕೆರೆ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಕೆರೆಗಳ ಸಂರಕ್ಷಣೆ ಕಾರ್ಯವನ್ನು ನರೇಗಾ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಸಿಎಂ ಮಾತನಾಡಿ, ರಾಜ್ಯದಲ್ಲಿ ಒಟ್ಟು 40,998 ಕೆರೆಗಳಿದ್ದು, ಇವುಗಳ ಪೈಕಿ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 26,365 ಕೆರೆಗಳು, ಸಣ್ಣ ನೀರಾವರಿಯಲ್ಲಿ 3,247, ಬಿಬಿಎಂಪಿ ವ್ಯಾಪ್ತಿಯಲ್ಲಿ 117 ಕೆರೆಗಳಿವೆ. ರಾಜ್ಯದಲ್ಲಿ 30 ಸಾವಿರ ಕೆರೆಗಳ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ ಈಗಾಗಲೇ ಪೂರ್ಣಗೊಳಿಸಿದೆ. ಉಳಿದಿರುವ 10,754 ಕೆರೆಗಳ ಸಮೀಕ್ಷೆ ಕಾರ್ಯವನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಮೀನುಗಾರಿಕಾ ಇಲಾಖೆ ವತಿಯಿಂದ ಎಲ್ಲಾ ಕೆರೆಗಳಿಗೆ ಮೀನು ಮರಿಗಳನ್ನು ಬಿಡುವ ಕಾರ್ಯ ಮಾಡಿದರೆ ಆದಾಯ ಗಳಿಸಲು ಸಾಧ್ಯವಿದೆ. ನಗರ ಪ್ರದೇಶದ ಕೆರೆಗಳು ಮಾತ್ರವಲ್ಲದೆ, ರಾಜ್ಯದ ಎಲ್ಲಾ ಕೆರೆಗಳ ಮಾಲಿನ್ಯದ ಮಟ್ಟವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲಿಸಿ ನಿಯಮಿತವಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯ ಮುಖ್ಯಾಂಶಗಳು:

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ 8.92 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಇದರಲ್ಲಿ 421 ಏತ ನೀರಾವರಿ ಯೋಜನೆಗಳ 94315 ಹೆಕ್ಟೇರ್‌, 3778 ಕೆರೆಗಳ 437086 ಹೆಕ್ಟೇರ್‌ ಅಚ್ಚುಕಟ್ಟು ಸೇರಿದೆ. ಪ್ರಸ್ತುತ ವರ್ಷ ಇಲಾಖೆಗೆ ರೂ.1577 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ರೂ.1468.17 ಕೋಟಿ ವೆಚ್ಚ ಮಾಡಲಾಗಿದೆ. ಪ್ರಸ್ತುತ ವರ್ಷ 9449 ಹೆಕ್ಟೇರ್‌ ಹೊಸ ಅಚ್ಚುಕಟ್ಟು ಸೃಷ್ಟಿಸಲಾಗಿದೆ.

ಪ್ರಸ್ತುತ ಹಣಕಾಸು ಸಾಲಿನಲ್ಲಿ ಒಟ್ಟು ರೂ.1112.59 ಕೋಟಿ ವೆಚ್ಚದಲ್ಲಿ 17 ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಕಾಮಗಾರಿಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಇದರಿಂದಾಗಿ 5989.64 ಹೆಕ್ಟೇರ್‌ ಅಚ್ಚುಕಟ್ಟು ಸೃಜನೆಯಾಗಲಿದೆ.

ಕೆಸಿ ವ್ಯಾಲಿ 1 ನೇ ಹಂತದಲ್ಲಿ ರೂ.1342 ಕೋಟಿ ವೆಚ್ಚದಲ್ಲಿ 145 ಕೆರೆಗಳನ್ನು ತುಂಬಿಸುವ ಯೋಜನೆ ಪೂರ್ಣಗೊಳಿಸಲಾಗಿದೆ. ಯೋಜನೆಯಡಿ ಬಿಡಬ್ಲುಎಸ್‌ಎಸ್‌ಬಿ 440 ಎಂಎಲ್‌ಡಿ ಸಂಸ್ಕರಿಸಿದ ನೀರನ್ನು ಒದಗಿಸಬೇಕಾಗಿದ್ದು, ಪ್ರಸ್ತುತ 265 ಎಂಎಲ್‌ಡಿ ಒದಗಿಸುತ್ತಿದೆ. ಪೂರ್ಣ ಪ್ರಮಾಣದ ನೀರು ಪೂರೈಕೆಗೆ ಅಗತ್ಯವಿರುವ ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯವನ್ನು ಈ ವರ್ಷದ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು. ಕೆಸಿ ವ್ಯಾಲಿ 2ನೇ ಹಂತದಲ್ಲಿ ರೂ.446 ಕೋಟಿ ವೆಚ್ಚದಲ್ಲಿ 272 ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇದುವರೆಗೆ 32 ಕೆರೆಗಳನ್ನು ತುಂಬಿಸಲಾಗಿದೆ.

ಪ್ರಸ್ತುತ ಒಟ್ಟು 1300 ಎಂಎಲ್‌ಡಿ ನೀರನ್ನು ಬೆಂಗಳೂರು ನಗರದಲ್ಲಿ ಸಂಸ್ಕರಿಸಲಾಗುತ್ತಿದೆ. ಹೊಸದಾಗಿ 583 ಎಂಎಲ್‌ಡಿ ನೀರು ಸಂಸ್ಕರಿಸಲು ಪೂರಕವಾಗಿ ಹೊಸ ಎಸ್‌ಟಿಪಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

ಕೆಸಿ ವ್ಯಾಲಿ, ಹೆಚ್‌ಎನ್‌ ವ್ಯಾಲಿ, ವೃಷಭಾವತಿ, ಹೊಸಕೋಟೆ, ಆನೆಕಲ್‌ ಯೋಜನೆಗಳಡಿ ಸಣ್ಣ ನೀರಾವರಿ ಇಲಾಖೆ ಕೆರೆಗಳನ್ನು ತುಂಬಿಸಲು ಅಗತ್ಯವಿರುವ ಸಂಪೂರ್ಣ ಪ್ರಮಾಣದ ನೀರನ್ನು ಒದಗಿಸಲು ಬಿಡಬ್ಲುಎಸ್‌ಎಸ್‌ಬಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ವಿಜ್ಞಾನ ತಂತ್ರಜ್ಞಾನ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯ ಮುಖ್ಯಾಂಶಗಳು:

ಪ್ರಸ್ತುತ ವರ್ಷ ರಾಜ್ಯದಲ್ಲಿ ಒಟ್ಟು 9 ತಾರಾಲಯಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, 5 ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ ಒಂದು ತಿಂಗಳ ಕಾಲ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವ ಆಯೋಜನೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಡಾ.ಎಚ್.ನರಸಿಂಹಯ್ಯ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರದ ಸ್ಥಾಪನೆಗೆ ಈಗಾಗಲೇ 132 ಎಕರೆ ಜಾಗ ಹಂಚಿಕೆಯಾಗಿದ್ದು, ಸದರಿ ಜಾಗವನ್ನು ಆದಷ್ಟು ಬೇಗನೆ ಇಲಾಖೆಯ ಸುಪರ್ದಿಗೆ ಪಡೆಯಲು ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರದಲ್ಲಿ ವಿಜ್ಞಾನ ನಗರ ಸ್ಥಾಪನೆಗೆ ಹಂಚಿಕೆ ಮಾಡಲಾದ 25ಎಕರೆ ಭೂಮಿಯನ್ನು ಇಲಾಖೆಗೆ ಪಡೆಯಲು ಕ್ರಮ ಕೈಗೊಳ್ಳಬೇಕು.

ಈ ಸುದ್ದಿಯನ್ನೂ ಓದಿ | CM Siddaramaiah: ಕಂದಾಯ ನ್ಯಾಯಾಲಯಗಳಲ್ಲಿ ಸಮರೋಪಾದಿಯಲ್ಲಿ ಪ್ರಕರಣಗಳ ವಿಲೇವಾರಿ: ಸಿಎಂ ಫುಲ್‌ ಖುಷ್

ರಾಮನಗರದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಜಮೀನು ಪಡೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಆಕಾಶ ಕಾಯಗಳ ಬಗ್ಗೆ ಆಸಕ್ತಿ ಮೂಡಿಸಲು 833 ವಸತಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ದೂರದರ್ಶಕ ಒದಗಿಸಲಾಗುವುದು. ಬೆಂಗಳೂರಿನಲ್ಲಿ ಕ್ವಾಂಟಮ್ ಸಮ್ಮೇಳನ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.