DA Hike 2025: ಕೇಂದ್ರ ಸರ್ಕಾರಿ ನೌಕರರಿಗೆ ಯುಗಾದಿ ಗಿಫ್ಟ್! ತುಟ್ಟಿಭತ್ಯೆಯಲ್ಲಿ ಶೇ.2ರಷ್ಟು ಹೆಚ್ಚಳ
DA Hike 2025: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ಸಿಕ್ಕಿದ್ದು, ತುಟ್ಟಿಭತ್ಯೆಯಲ್ಲಿ ಶೇ.2ರಷ್ಟು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಕಳೆದ ಜುಲೈನಲ್ಲಿ ಡಿಎ ಹೆಚ್ಚಳ ಮಾಡಲಾಗಿತ್ತು. ಆಗ ಇದನ್ನು 50% ರಿಂದ 53% ಕ್ಕೆ ಹೆಚ್ಚಿಸಲಾಗಿತ್ತು.


ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಯುಗಾದಿಗೆ ಗುಡ್‌ನ್ಯೂಸ್ ನೀಡಿದೆ. ತುಟ್ಟಿಭತ್ಯೆಯಲ್ಲಿ(DA Hike 2025) ಶೇ. 2 ರಷ್ಟು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದ್ದು, ಈ ಪರಿಷ್ಕರಣೆಯೊಂದಿಗೆ, ತುಟ್ಟಿಭತ್ಯೆ ಶೇ. 53 ರಿಂದ 55 ಕ್ಕೆ ಏರಿಕೆಯಾಗಲಿದೆ. ಇದು ನೇರವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ವೇತನಕ್ಕೆ ಮತ್ತಷ್ಟು ಬೂಸ್ಟ್ ನೀಡಲಿದೆ. ಕಳೆದ ಜುಲೈನಲ್ಲಿ ಡಿಎ ಹೆಚ್ಚಳ ಮಾಡಲಾಗಿತ್ತು. ಆಗ ಇದನ್ನು 50% ರಿಂದ 53% ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಡಿಎ ಹೆಚ್ಚಳವಾಗಿದ್ದು, ಸರ್ಕಾರಿ ನೌಕರರಿಗೆ ಬಂಪರ್ ಲಾಟರಿ ಸಿಕ್ಕಂತಾಗಿದೆ.
ಡಿಎ ಅಥವಾ ತುಟ್ಟಿಭತ್ಯೆ ಎಂದರೇನು?
ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು ಸರ್ಕಾರಿ ನೌಕರರಿಗೆ ನೀಡಲಾದ ಜೀವನ ವೆಚ್ಚ ಇದಾಗಿದೆ. ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವು ಮೂಲ ವೇತನಗಳನ್ನು ಪರಿಷ್ಕರಿಸುತ್ತದೆ. ಇದೇ ಸಂದರ್ಭದಲ್ಲಿ ತುಟ್ಟಿ ಭತ್ಯೆ ಹಣದುಬ್ಬರವನ್ನು ನಿರ್ವಹಿಸಲು ಸರ್ಕಾರಿ ನೌಕರರಿಗೆ ಸಹಾಯ ಮಾಡುತ್ತದೆ. ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ: ಕೇಂದ್ರ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ
ತುಟ್ಟಿಭತ್ಯೆ ಹೆಚ್ಚಳ ಹೇಗೆ ಮಾಡಲಾಗುತ್ತದೆ?
ಹಣದುಬ್ಬರವನ್ನು ನೋಡಿಕೊಂಡು ತುಟ್ಟಿ ಭತ್ಯೆ ಹೆಚ್ಚಳವನ್ನು ನಿಗದಿ ಮಾಡಲಾಗುತ್ತದೆ. ಡಿಎ ದರವನ್ನು ಜನವರಿ ಮತ್ತು ಡಿಸೆಂಬರ್ ತಿಂಗಳ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಕೈಗಾರಿಕಾ ಕಾರ್ಮಿಕರು)-AICPA (IW) ಆಧಾರದ ಮೇಲೆ ಲೆಕ್ಕಾಚಾರ ಮಾಡಿ ನಿಗದಿ ಮಾಡಲಾಗುತ್ತದೆ. ಲೆಕ್ಕಹಾಕಲಾಗುತ್ತದೆ. AICPA (IW) ಸೂಚ್ಯಂಕ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಲೆಕ್ಕಾಚಾರ ಮಾಡಲು ಮಾನದಂಡವಾಗಿ ತೆಗೆದುಕೊಳ್ಳಲಾದ ಸೂಚ್ಯಂಕವಾಗಿದೆ. ಹಣಕಾಸು ಸಚಿವಾಲಯದ ಕಾರ್ಮಿಕ ಬ್ಯೂರೋ ನಿಯಂತ್ರಿಸುವ ಈ ಸೂಚ್ಯಂಕವು ಕೇಂದ್ರ ಮತ್ತು ರಾಜ್ಯಗಳಿಗೆ ಮಾಸಿಕ ಡಿಎ ಬಗ್ಗೆ ವರದಿ ನೀಡುತ್ತದೆ.
ಯಾರಿಗೆಲ್ಲಾ ಲಾಭ?
ಡಿಎ ಹೆಚ್ಚಳ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಈ ಹಿಂದೆ, ಹೋಳಿ ಹಬ್ಬದ ಮುಂಚೆ ಕೇಂದ್ರ ಸರ್ಕಾರವು ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಹಲವು ಮಾಧ್ಯಮ ವರದಿಗಳ ಪ್ರಕಾರ, ಶೇಕಡಾ 2 ರಷ್ಟು ಹೆಚ್ಚಳದ ನಿರೀಕ್ಷೆ ಇತ್ತು. ಈ ಹೆಚ್ಚಳವು ಹಣದುಬ್ಬರದ ಒತ್ತಡ ಎದುರಿಸಲು ಸಹಾಯ ಮಾಡುವ ಜೊತೆಗೆ ಅವರ ಮಾಸಿಕ ಆದಾಯವನ್ನು ಹೆಚ್ಚಿಸಿ, ಆರ್ಥಿಕ ಸ್ಥಿರತೆ ಮತ್ತು ಪರಿಹಾರ ಒದಗಿಸುತ್ತದೆ.