Daali Dhananjaya: ನಟ ಧನಂಜಯ-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭ ಕೋರಿದ ಅಂಚೆ ಇಲಾಖೆ
Daali Dhananjaya: ಧನಂಜಯ ಅವರು ಸರಳವಾದ ಪೋಸ್ಟ್ ಕಾರ್ಡ್ ಮಾದರಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಸ್ವತಃ ವಧು-ವರರು ಆಪ್ತವಾಗಿ ಪತ್ರ ಬರೆದಿರುವ ರೀತಿಯ ಸಾಲುಗಳು ಇದ್ದಿದ್ದರಿಂದ ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆ ಭಾರತೀಯ ಅಂಚೆ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಡಾಲಿ-ಧನ್ಯತಾ ವಿವಾಹಕ್ಕೆ ವಿಶೇಷ 12 ಸ್ಟ್ಯಾಂಪ್ ನೀಡಿ ಶುಭಾಶಯ ಕೋರಿದೆ.
![ನಟ ಧನಂಜಯ-ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿದ ಅಂಚೆ ಇಲಾಖೆ](https://cdn-vishwavani-prod.hindverse.com/media/original_images/Daali_Dhananjaya_4.jpg)
![Profile](https://vishwavani.news/static/img/user.png)
ಮೈಸೂರು: ಫೆಬ್ರವರಿ 16ರಂದು ವಿವಾಹ ಹಿನ್ನೆಲೆಯಲ್ಲಿ ನಟ ಧನಂಜಯ-ಧನ್ಯತಾ ಅವರ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಈಗಾಗಲೇ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರನ್ನು ಭೇಟಿಯಾಗಿ ನಟ ಡಾಲಿ (Daali Dhananjaya) ಮದುವೆ ಆಮಂತ್ರಣ ನೀಡಿದ್ದಾರೆ. ಇದೀಗ ಇವರ ಇನ್ ಲ್ಯಾಂಡ್ ಲೆಟರ್ ಮಾದರಿ ಲಗ್ನ ಪತ್ರಿಕೆಗೆ ಭಾರತೀಯ ಅಂಚೆ ಇಲಾಖೆ ಫಿದಾ ಆಗಿದ್ದು, ಧನಂಜಯ ಧನ್ಯತಾ ಮದುವೆಗೆ ವಿಶೇಷ ಸ್ಟ್ಯಾಂಪ್ ನೀಡಿ ಶುಭಾಶಯ ತಿಳಿಸಿದೆ. ವೆಡ್ಡಿಂಗ್ ವಿಷ್ ಹಾಗೂ ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷ ಸ್ಟ್ಯಾಂಪ್ ಅನ್ನು ಮೈಸೂರು ಅಂಚೆ ವಿಭಾಗ ಅಧಿಕಾರಿಗಳು ಧನಂಜಯ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಧನಂಜಯ ಅವರು ಸರಳವಾದ ಪೋಸ್ಟ್ ಕಾರ್ಡ್ ಮಾದರಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಸ್ವತಃ ವಧು-ವರರು ಆಪ್ತವಾಗಿ ಪತ್ರ ಬರೆದಿರುವ ರೀತಿಯ ಸಾಲುಗಳು ಇದ್ದಿದ್ದರಿಂದ ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆ ಭಾರತೀಯ ಅಂಚೆ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಡಾಲಿ-ಧನ್ಯತಾ ವಿವಾಹಕ್ಕೆ ವಿಶೇಷ 12 ಸ್ಟ್ಯಾಂಪ್ ನೀಡಿ ಶುಭಾಶಯ ಕೋರಿದೆ.
![Daali Dhananjaya (3)](https://cdn-vishwavani-prod.hindverse.com/media/images/Daali_Dhananjaya_3.width-800.jpg)
ಮದುಮಗ ಧನಂಜಯರನ್ನು ಮೈಸೂರು ಅಂಚೆ ಇಲಾಖೆ ಅಧಿಕಾರಿಗಳಿ ಭೇಟಿಯಾಗಿ ವಿಶೇಷ ಸ್ಟ್ಯಾಂಪ್‌ಗಳನ್ನು ನೀಡಿದ್ದಾರೆ. ಈ ಸ್ಟ್ಯಾಂಪ್‌ನಲ್ಲಿ ಧನಂಜಯ-ಧನ್ಯತಾ ಪೋಟೋ ಬಳಸಿ ಶುಭಾಶಯ ಕೋರಲಾಗಿದೆ. ಇನ್ ಲ್ಯಾಂಡ್ ಲೆಟರ್ ಮಾದರಿ ಆಮಂತ್ರಣದಿಂದ ಜನರಿಗೆ ನೀವು ಮಾದರಿಯಾಗಿದ್ದೀರಿ. ನಿಮ್ಮ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೆಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ ಲ್ಯಾಂಡ್ ಲೆಟರ್ ಕೇಳಿ ಪಡೆಯುತ್ತಿದ್ದಾರೆ. ಮದುವೆ ಲಗ್ನ ಪತ್ರಿಕೆ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು ಎಂದ ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಂಚೆ ಇಲಾಖೆ ಉಡುಗೊರೆ ಕಂಡು ಧನಂಜಯ-ಧನ್ಯತಾ ಸಂತಸ ವ್ಯಕ್ತ ಪಡಿಸಿದ್ದಾರೆ.
ಹುಟ್ಟೂರಿನಲ್ಲಿ ಮದುವೆ ಶಾಸ್ತ್ರ
ನಟ ಡಾಲಿ ಧನಂಜಯ್ ಅವರ ಹುಟ್ಟೂರಾದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಮನೆ ದೇವರಾದ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ನಟ ಭಾಗಿಯಾಗಿ, ಮನೆಗೆ ಉತ್ಸವ ಮೂರ್ತಿಯನ್ನು ತಂದು ಪೂಜೆ ಸಲ್ಲಿಸಿ, ಕೆಂಡ ಹಾಯುವ ಸಂಪ್ರದಾಯವನ್ನು ಡಾಲಿ ಪೂರೈಸಿದ್ದಾರೆ.
ನಟ ಡಾಲಿ ಧನಂಜಯ ಮೂಲತಃ ಹಾಸನ ಜಿಲ್ಲೆಯ, ಅರಸೀಕೆರೆ ತಾಲೂಕಿನ ಕಾಳೇಹಳ್ಳಿ ಗ್ರಾಮದವರು. ವಿದ್ಯಾಭ್ಯಾಸ ಹಾಗೂ ಅವರ ಚಿತ್ರರಂಗದ ಪಯಣ ಆರಂಭವಾಗಿದ್ದು ಮೈಸೂರಿನಲ್ಲಿ. ಈಗ ಅವರ ಅದ್ಧೂರಿ ಮದುವೆ ಸಹ ಮೈಸೂರಿನಲ್ಲೇ ನಡೆಯಲಿದೆ.
ಈ ಸುದ್ದಿಯನ್ನೂ ಓದಿ | Daali Dhananjaya: ಅಲ್ಲು ಅರ್ಜುನ್, ರಶ್ಮಿಕಾ ಸೇರಿ ಪುಷ್ಪ-2 ಟೀಂನ ಪ್ರಮುಖರಿಗೆ ಮದುವೆ ಆಮಂತ್ರಣ ನೀಡಿದ ನಟ ಡಾಲಿ
ಮೈಸೂರಿನಲ್ಲಿ ಫೆ.15 ಮತ್ತು ಫೆ.16 ರಂದು ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹ ನೆರವೇರಲಿದೆ. ಅಭಿಮಾನಿಗಳಿಗೆ ಮುಕ್ತ ಅವಕಾಶವಿದ್ದು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಸೇರಿದಂತೆ ಹಲವಾರು ಪ್ರಮುಖರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.