ಬೆಂಗಳೂರು: ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಾಂತಿ (Pronab Mohanty) ಅವರು ಧರ್ಮಸ್ಥಳದ ನಿಗೂಢ ಸಾವುಗಳ ಪ್ರಕರಣದ (Dharmasthala Burials Case) ತನಿಖೆ ನಡೆಸುತ್ತಿರುವಾಗಲೇ ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ದೂರಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನೇತೃತ್ವವನ್ನು ಪ್ರಣಬ್ ಮೊಹಂತಿ ವಹಿಸಿದ್ದಾರೆ. ಈ ಸಂಬಂಧ ತನಿಖೆ ಚುರುಕುಗೊಂಡಿರುವಾಗಲೇ ಪ್ರಣಬ್ ಮೊಹಾಂತಿ ಅವರು ಸಿಬಿಐ ಮತ್ತು ಎನ್ಐಎನಂತಹ ಸಂಸ್ಥೆಗಳ ಮಹಾನಿರ್ದೇಶಕರಾಗುವ ಅರ್ಹತೆ ಪಡೆದಿದ್ದಾರೆ.
ಈ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಒಂದು ವೇಳೆ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಅಯ್ಕೆಯಾದರೆ ಎಸ್‌ಐಟಿಗೆ ಬೇರೆ ಅಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಚರ್ಚಿಸುತ್ತೇವೆ. ಕೇಂದ್ರ ಸೇವೆಗೆ ವರ್ಗಾವಣೆಗೊಂಡರೂ ಎಸ್ಐಟಿ ತನಿಖೆಯನ್ನು ಮುಂದುವರಿಸಲು ಅವಕಾಶವಿದೆಯೇ ಎಂಬುದನ್ನು ಕೂಡ ಪರಿಶೀಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿಯು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ದೇಶಾದ್ಯಂತ 35 ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದಿಂದ ಸ್ಥಾನ ಪಡೆದ ಏಕೈಕ ಅಧಿಕಾರಿ ಪ್ರಣಬ್ ಮೊಹಂತಿ ಆಗಿದ್ದಾರೆ. ಈ ಹಿಂದೆಯೂ ಅವರು ಸ್ವಲ್ಪ ಸಮಯ ಕೇಂದ್ರ ಸೇವೆಯಲ್ಲಿದ್ದರು. ಇದೀಗ ಮತ್ತೆ ಕೇಂದ್ರ ಸೇವೆಗೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯಂತಹ ಕೇಂದ್ರ ತನಿಖಾ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗಳಿಗೆ ಅವರು ಅರ್ಹರಾಗಿದ್ದಾರೆ.
ಧರ್ಮಸ್ಥಳ ಪ್ರಕರಣದ ಎಸ್ಐಟಿ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿ ಅವರು ಜುಲೈ 30ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ವ್ಯಕ್ತಿಯೋರ್ವ ಹೂತಿಟ್ಟಿರುವ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಧರ್ಮಸ್ಥಳ ಪ್ರಕರಣದ ಶವಗಳ ಶೋಧ ಕಾರ್ಯ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ. ಕೇಂದ್ರ ಸರ್ಕಾರ 35 ಐಪಿಎಸ್ ಅಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಕೇಂದ್ರ ಸೇವೆಗೆ ಅರ್ಹತೆ ಪಡೆದವರ ಪಟ್ಟಿಯಲ್ಲಿ ಮೊಹಾಂತಿ ಒಬ್ಬರಾಗಿದ್ದಾರೆ. ಸದ್ಯ ಅವರು ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಕೇಂದ್ರ ಸೇವೆಗೆ ಹೋಗುತ್ತಾರಾ ಇಲ್ಲವಾ ಎಂಬುದು ಪ್ರಾಮುಖ್ಯತೆ ಪಡೆದುಕೊಂಡಿದೆ.
ಇದನ್ನೂ ಓದಿ: Dharmasthala: "ಧರ್ಮಸ್ಥಳದ ಮೊದಲ ಐದೂ ಸ್ಥಳಗಳಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ": ಅಧಿಕೃತ ಮಾಹಿತಿ ನೀಡಿದ ಪ್ರಣಬ್ ಮೊಹಾಂತಿ