Dharmasthala Case: ಚಿನ್ನಯ್ಯನ 25 ವಿಡಿಯೋ ಮಾಡಿದ ಬುರುಡೆ ಗ್ಯಾಂಗ್, ಧರ್ಮಸ್ಥಳದ ವಿರುದ್ಧ ಭಾರಿ ಷಡ್ಯಂತ್ರ ಬಯಲು
Mask man: ಮಾಸ್ಕ್ಮ್ಯಾನ್ ಚಿನ್ನಯ್ಯ ಬಂಧನವಾದರೆ ಯಾವ ವಿಡಿಯೋ ಬಿಡುಗಡೆ ಮಾಡಬೇಕು, ಚಿನ್ನಯ್ಯ ಓಡಿ ಹೋದರೆ ಯಾವ ವಿಡಿಯೋ, ಚಿನ್ನಯ್ಯ ಮೃತಪಟ್ಟರೆ ಯಾವ ವಿಡಿಯೋ, ಈ ರೀತಿ ಪ್ರತಿಯೊಂದು ಸಂದರ್ಭಕ್ಕೂ ಗ್ಯಾಂಗ್ ಪ್ರತ್ಯೇಕ ವಿಡಿಯೋ ತಯಾರಿಸಿಕೊಂಡಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.


ಮಂಗಳೂರು: ಧರ್ಮಸ್ಥಳ (Dharmasthala Case) ಆಸುಪಾಸಿನಲ್ಲಿ ನೂರಾರು ಶವ ಹೂಳಲಾಗಿತ್ತು ಎಂದು ಹೇಳಿಕೊಂಡು ಬಂದು ಎಸ್‌ಐಟಿ (SIT) ತನಿಖೆಗೆ ಕಾರಣನಾಗಿ, ಕೊನೆಗೆ ಎಸ್‌ಐಟಿಯಿಂದಲೇ ಬಂಧಿತನಾಗಿರುವ ಮಾಸ್ಕ್ಮ್ಯಾನ್ ಚಿನ್ನಯ್ಯ (Mask man chinnayya) ವಿಚಾರಣೆ ವೇಳೆ ಒಂದೊಂದೇ ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಿದ್ದಾನೆ. ‘ಬುರುಡೆ ಗ್ಯಾಂಗ್’ ಚಿನ್ನಯ್ಯನನ್ನು ಬಳಸಿಕೊಂಡು 25ಕ್ಕೂ ಹೆಚ್ಚು ವಿಡಿಯೋಗಳನ್ನು ಚಿತ್ರೀಕರಿಸಿದ್ದು ಅವುಗಳನ್ನು ಧರ್ಮಸ್ಥಳ ವಿರುದ್ಧ ಒಂದೊಂದಾಗಿ ಬಿಡಲು ಪ್ಲಾನ್ ಮಾಡಿತ್ತು. ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಮನೆಯಲ್ಲೇ ಇದನ್ನೆಲ್ಲ ಶೂಟ್ ಮಾಡಲಾಗಿತ್ತು ಎಂದು ಗೊತ್ತಾಗಿದೆ.
ಚಿನ್ನಯ್ಯನ ವಿಚಾರವಾಗಿ ಈ ಕುಖ್ಯಾತ ಗ್ಯಾಂಗ್ ಏನೇನು ಪ್ಲಾನ್ ಮಾಡಿತ್ತು ಎಂಬುದು ತಿಳಿದುಬಂದಿದೆ. ಚಿನ್ನಯ್ಯ ಎಸ್ಐಟಿಗೆ ನೀಡಿದ ಹೇಳಿಕೆ ಪ್ರಕಾರ, ಅವುಗಳನ್ನು ಸಂದರ್ಶನ ಶೈಲಿಯಲ್ಲಿ ಹಾಗೂ ವಿಭಿನ್ನ ಮಾದರಿಯಲ್ಲಿ ಸಿದ್ಧಪಡಿಸಲಾಗಿತ್ತು. ಗ್ಯಾಂಗ್‌ಗೆ ಸೇರಿದ ಪ್ರತಿಯೊಬ್ಬರ ಚಟುವಟಿಕೆ, ಪ್ರಕರಣ ಬೆಳವಣಿಗೆ ಹಾಗೂ ಭವಿಷ್ಯದಲ್ಲಿ ಸಂಭವಿಸಬಹುದಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಯಾವ ವಿಡಿಯೋ ಬಿಡುಗಡೆ ಮಾಡಬೇಕು ಎಂಬುದರ ಕುರಿತು ಗ್ಯಾಂಗ್ ಯೋಜನೆ ರೂಪಿಸಿಕೊಂಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಮಾಸ್ಕ್ಮ್ಯಾನ್ ಚಿನ್ನಯ್ಯ ಬಂಧನವಾದರೆ ಯಾವ ವಿಡಿಯೋ ಬಿಡುಗಡೆ ಮಾಡಬೇಕು, ಚಿನ್ನಯ್ಯ ಓಡಿ ಹೋದರೆ ಯಾವ ವಿಡಿಯೋ, ಚಿನ್ನಯ್ಯ ಮೃತಪಟ್ಟರೆ ಯಾವ ವಿಡಿಯೋ, ಈ ರೀತಿ ಪ್ರತಿಯೊಂದು ಸಂದರ್ಭಕ್ಕೂ ಗ್ಯಾಂಗ್ ಪ್ರತ್ಯೇಕ ವಿಡಿಯೋ ತಯಾರಿಸಿಕೊಂಡಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಇಷ್ಟೇ ಅಲ್ಲದೆ, ಯುವತಿಯ ಅತ್ಯಾಚಾರ ಪ್ರಕರಣ ಮುನ್ನೆಲೆಗೆ ಬಂದರೆ ಅದಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲು ವಿಶೇಷ ವಿಡಿಯೋ ಸಿದ್ದಪಡಿಸಲಾಗಿತ್ತು. ಯಾರು ಯಾರ ಹೆಸರು ಬರುತ್ತದೆಯೋ, ಆ ಸಂದರ್ಭದಲ್ಲಿ ಪ್ರತ್ಯೇಕ ವಿಡಿಯೋಗಳನ್ನು ಪ್ರಸಾರ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಚಿನ್ನಯ್ಯ ಎಸ್ಐಟಿ ಬಳಿ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಈ ಮೂಲಕ ಧರ್ಮಸ್ಥಳ ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದ್ದು, ‘ಬುರುಡೆ’ ಗ್ಯಾಂಗ್‌ನ ಕಾರ್ಯವೈಖರಿ ಒಂದೊಂದಾಗಿ ಬಹಿರಂಗವಾಗುತ್ತಿದೆ.
ಮಂಗಳವಾರವಷ್ಟೇ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರನ ಮನೆಗಳಿಗೆ ತೆರಳಿದ್ದ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನ ಮೊಬೈಲ್ ವಶಪಡಿಸಿಕೊಂಡಿದ್ದರು. ಚಿನ್ನಯ್ಯ ಒಟ್ಟು ಹತ್ತು ದಿನ ಎಸ್ಐಟಿ ವಶದಲ್ಲಿರಲಿದ್ದು, ಇಂದು ಕೂಡ ವಿಚಾರಣೆ ನಡೆಯಲಿದೆ. ಮಂಗಳವಾರ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆದಿತ್ತು. ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ಸುಜಾತಾ ಭಟ್ ಸಹ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: Mahesh shetty timarodi: ಮಹೇಶ್ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ; ಚಿನ್ನಯ್ಯನ ಮೊಬೈಲ್ ವಶಕ್ಕೆ