2ನೇ ಪತ್ನಿಗೆ ಕಿರುಕುಳ, ಕೊಲೆ ಬೆದರಿಕೆ; ಜೈ ಭೀಮ್ ಚಳವಳಿ ರಾಜ್ಯಾಧ್ಯಕ್ಷ ಶಿವಶಂಕರ್ ವಿರುದ್ಧ ಎಫ್‌ಐಆರ್
Nelamangala News: ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬಂದರೆ ಸರಿ, ಇಲ್ಲದಿದ್ದರೆ ನಾನು ಬೇರೆಯವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೊಡೆದು ಬೈಯುತ್ತಿದ್ದಾನೆ. ಹೀಗಾಗಿ ಗಂಡ ಶಿವಶಂಕರ್ ಕಿರುಕುಳ ನೀಡುತ್ತಿದ್ದಾನೆ ಎಂದು 2ನೇ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ನೆಲಮಂಗಲ: ಎರಡನೇ ಪತ್ನಿಗೆ ಕಿರುಕುಳ, ಕೊಲೆ ಬೆದರಿಕೆ ಆರೋಪದಡಿ ಕರ್ನಾಟಕ ಜೈ ಭೀಮ್ ಚಳವಳಿ ರಾಜ್ಯಾಧ್ಯಕ್ಷ ಶಿವಶಂಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2ನೇ ಪತ್ನಿ ಲಕ್ಷ್ಮೀದೇವಿ ಎಂಬುವವರು ನೀಡಿದ ದೂರಿನ ಮೇರೆಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆಯಾದಾಗ ನಿನ್ನ ತವರು ಮನೆಯಿಂದ ಏನೂ ಕೊಟ್ಟಿಲ್ಲ, ಹಣವನ್ನು ತೆಗೆದುಕೊಂಡು ಬಾ, ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ನನ್ನ ಗಂಡ ಶಿವಶಂಕರ್ ಕಿರುಕುಳ ನೀಡುತ್ತಿದ್ದಾನೆ ಎಂದು 2ನೇ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2ನೇ ಪತ್ನಿ ದೂರಿನ ಅನ್ವಯ ಪತಿ ಶಿವಶಂಕರ್, ಆತನ ಗೆಳತಿ ಲಾವಣ್ಯ, ಲಾವಣ್ಯಳ ಸಂಬಂಧಿಕರಾದ ಯೋಗಾನಂದ, ಬಸವರಾಜು, ಮತ್ತು ಶಿವಶಂಕರ್ ಮೊದಲನೇ ಹೆಂಡತಿ ಮಗ ಸಾಗರ್, ಸಚಿತ್ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೊದಲನೇ ಹೆಂಡತಿ ಮುನಿರತ್ನಮ್ಮ ಇದ್ದರೂ ಕೂಡ ನನಗೆ ಮೋಸ ಮಾಡಿ ಶಿವಶಂಕರ್ ನನ್ನ ಜತೆ 2ನೇ ಮದುವೆಯಾಗಿದ್ದಾನೆ. ಮೊದಲ ಹೆಂಡತಿಗೆ ಮೂವರು ಮಕ್ಕಳಿದ್ದು, ನನಗೆ ಒಬ್ಬ ಮಗನಿದ್ದಾನೆ. ಮೊದಲ ಹೆಂಡತಿ ನನ್ನ ಗಂಡನ ಕಿರುಕುಳದಿಂದ ಮನೆ ತೊರೆದಿದ್ದರು. ಆಗಿನಿಂದ ನಾಲ್ವರು ಮಕ್ಕಳನ್ನು ನಾನೇ ಬೆಳೆಸುತ್ತಿದ್ದೇನೆ.
ಈ ಸುದ್ದಿಯನ್ನೂ ಓದಿ | Road Accident: ಹೇಮಾವತಿ ನಾಲೆಗೆ ಉರುಳಿದ ಕಾರು, ಇಬ್ಬರು ಸಾವು, ಇಬ್ಬರು ನೀರುಪಾಲು
ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬಂದರೆ ಸರಿ, ಇಲ್ಲದಿದ್ದರೆ, ನಾನು ಬೇರೆಯವರನ್ನು ಕರೆದುಕೊಂಡು ಬರುತ್ತೇನೆ ಎಂದು ನನ್ನ ಗಂಡ ಹೊಡೆದು ಬೈಯುತ್ತಿದ್ದ. ನಾನು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೆ. ಇತ್ತೀಚೆಗೆ ತುರುವೇಕೆರೆ ಬಳಿಯ ಬಾಣಸಂದ್ರದ ಲಾವಣ್ಯ ಎಂಬಾಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಲಕ್ಷ್ಮೀದೇವಿ ಆರೋಪಿಸಿದ್ದಾರೆ.