ಬೆಂಗಳೂರು, ಮಾ. 03: "ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಆಂಧ್ರಪ್ರದೇಶ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಈ ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ ಭೂಸ್ವಾಧೀನ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಈ ಹಿಂದೆ ಆಗಿರುವ ಆದೇಶದ ಪ್ರಕಾರ ನಡೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಆಗ್ರಹಿಸಿದರು.
ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು.
"ಆಲಮಟ್ಟಿ ಅಣೆಕಟ್ಟುವಿನ 519 ಮೀ. ನಿಂದ 524 ಮೀ.ಗೆ ಎತ್ತರ ಮಾಡಿಕೊಳ್ಳಲು ಖಡಾಖಂಡಿತವಾಗಿ ಅವಕಾಶ ನೀಡಬಾರದು ಮತ್ತು ಗೆಜೆಟ್ ನೋಟಿಫಿಕೇಶನ್ ಮಾಡಬಾರದು ಎಂದು ಆಂಧ್ರಪ್ರದೇಶ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸರ್ಕಾರ ಈ ವಿಚಾರವಾಗಿ ಮಧ್ಯಪ್ರವೇಶ ಮಾಡುವುದು ಒಳ್ಳೆಯದಲ್ಲ ಎಂದು ಮನವಿ ಮಾಡುತ್ತೇನೆ" ಎಂದು ಹೇಳಿದರು.
"16.09.2025 ರಂದು ಕ್ಯಾಬಿನೆಟ್ ಸಭೆ ಮೂಲಕ 1.33 ಲಕ್ಷ ಎಕರೆ ಭೂಮಿಯನ್ನು ಒಂದೇ ಬಾರಿಗೆ ಸ್ವಾಧೀನ ಪಡಿಸಿಕೊಳ್ಳುವುದು ಎಂದು ತೀರ್ಮಾನಿಸಲಾಗಿದ್ದು. 70 ಸಾವಿರ ಕೋಟಿ ಹಣವನ್ನು ಮೂರು ಹಂತದಲ್ಲಿ ನಿಗದಿ ಮಾಡಿಕೊಳ್ಳಲು ಹೊರಟಿದ್ದೆವು. ಎಕರೆಗೆ 35- 40 ಲಕ್ಷ ಪರಿಹಾರ ನಿಗದಿ ಮಾಡಿದ್ದೆವು. ಭೂಸ್ವಾಧೀನವನ್ನು ಆಂಧ್ರಪ್ರದೇಶ ಸರ್ಕಾರ ಪ್ರಶ್ನಿಸಿದೆ" ಎಂದರು.
ಇಬ್ಬರೂ ಸೇರಿ ತೀರ್ಮಾನ ಮಾಡಬೇಕು, ಖರ್ಚು ಮಾಡಬೇಕು
"ಆಂಧ್ರಪ್ರದೇಶದವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಕಳೆದ 12 ವರ್ಷದಿಂದ ಈ ವಿಚಾರವಾಗಿ ನೋಟಿಫಿಕೇಷನ್ ಮಾಡಿ ಎಂದು ಒತ್ತಡ ಹೇರುತ್ತಲೇ ಇದ್ದೇವೆ. 30.12.2010 ರಲ್ಲಿ ಈ ಬಗ್ಗೆ ತೀರ್ಮಾನವಾಗಿತ್ತು. 177 ಟಿಎಂಸಿಯಿಂದ 330 ಟಿಎಂಸಿ ನೀರು ಬಳಕೆಗೆ ಅವಕಾಶ ನೀಡಲಾಗಿತ್ತು. ಕೆಲವರು ನ್ಯಾಯಾಲಯಕ್ಕೂ ಹೋಗಿದ್ದರು" ಎಂದರು.
"ನವಿಲೆ ಸಮತೋಲಿತ ಅಣೆಕಟ್ಟು ಕಟ್ಟಿ ನಮ್ಮ ಪಾಲಿನ 30 ಟಿಎಂಸಿ ನೀರನ್ನು ಕೊಳ್ಳಬೇಕು ಎಂದು ಬೋರ್ಡ್ ಮುಂದೆ ತಿಳಿಸಿದ್ದೇವೆ. ಆದರೆ ಅಲ್ಲಿ ಈ ವಿಚಾರವನ್ನು ತೆಗೆದುಕೊಳ್ಳುತ್ತಿಲ್ಲ ಹಾಗೂ ಆಂಧ್ರ ಪ್ರದೇಶದವರು ಈ ಸಭೆಗೆ ಬರುತ್ತಿಲ್ಲ. ಇಬ್ಬರೂ ಸೇರಿ ತೀರ್ಮಾನ ಮಾಡಬೇಕು, ಖರ್ಚು ಮಾಡಬೇಕು. ನಮ್ಮ ನೀರು ಅವರಿಗೆ ಹರಿದು ಹೋಗುತ್ತಿದೆ" ಎಂದರು.
ಕೇಂದ್ರ ಸಚಿವರನ್ನು ಭೇಟಿ ಮಾಡುವೆ, ಸಂಸದರು ಒತ್ತಡ ಹಾಕಲಿ
"ಮಾ. 10 ರಿಂದ ಲೋಕಸಭೆ ಕಲಾಪ ಆರಂಭವಾಗಲಿವೆ. ಅಲ್ಲಿ ನಮ್ಮ ರಾಜ್ಯದ ಸಂಸದರುಗಳು ಪ್ರಧಾನಿಯವರು, ಜಲಶಕ್ತಿ ಸಚಿವರ ಮೇಲೆ ಒತ್ತಡ ಹೇರಬೇಕು. ಎಲ್ಲಾ ಜನನಾಯಕರು ಹಾಗೂ ಸಂಸದರುಗಳು ಸೇರಿ ರಾಜ್ಯದ ಹಿತವನ್ನು ಕಾಪಾಡಲೇಬೇಕು. ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀ. ಹೆಚ್ಚಳ ಮಾಡಲು, ರೈತರ ಹಿತ ಕಾಪಾಡಬೇಕು. ಎಲ್ಲಾ ದಾಖಲೆಗಳನ್ನು ಸಂಸದರಿಗೆ ತಲುಪಿಸಲಾಗುವುದು. ನಾವುಗಳು ಸುಮ್ಮನೆ ಕುಳಿತುಕೊಂಡರೆ ರಾಜ್ಯದ ಹಿತಕ್ಕೆ ಧಕ್ಕೆಯಾಗುತ್ತದೆ" ಎಂದು ತಿಳಿಸಿದರು.
"ಬಜೆಟ್ ಅಧಿವೇಶನದ ಮಧ್ಯೆಯೇ ಒಂದೆರಡು ದಿನ ಸಮಯ ಮಾಡಿಕೊಂಡು ದೆಹಲಿಗೆ ಹೋಗಿ ಕೇಂದ್ರ ಭೇಟಿ ಮಾಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೂ ತರುತ್ತೇನೆ. ಜಲಶಕ್ತಿ ಸಚಿವರ ಮೇಲೆ ರಾಜಕೀಯ ಒತ್ತಡವಿದೆ. ಒಮ್ಮೆ ಮಹಾರಾಷ್ಟ್ರ ಹಾಗೂ ಆಂಧ್ರದಿಂದ ಬಂದಿದೆ. ಅವರು ಸಮಯ ನೀಡಿದ ಮೇಲೆ ದೆಹಲಿಗೆ ಹೋಗಿದ್ದೆವು. ಅಲ್ಲಿಗೆ ತಲುಪಿದ ಮೇಲೆ ಸಭೆ ಮುಂದೂಡಲಾಗಿದೆ ಎಂದು ಸಂದೇಶ ನೀಡಿದರು" ಎಂದರು.
"ಆಂಧ್ರ ಪ್ರದೇಶಕ್ಕೆ ಅವರ ಪಾಲಿನ ನೀರು ಹೋಗುತ್ತಿದೆ. ಈಗಾಗಲೇ ಆಗಿರುವ ತೀರ್ಮಾನದ ಮೇಲೆ ಅವರು ಹೀಗೆ ಏಕೆ ಮಾಡುತ್ತಿದ್ದಾರೆ ತಿಳಿಯದು. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅನುಭವಿ ರಾಜಕಾರಣಿ. ಅವರು ಹೀಗೇಕೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ತುಂಗಭದ್ರಾ ವಿಚಾರವಾಗಿಯೂ ಅವರು ಮಾತುಕತೆಗೆ ಬರುತ್ತಿಲ್ಲ. 30 ಟಿಎಂಸಿಯಷ್ಟು ತುಂಗಭದ್ರಾ ನದಿ ನೀರು ನಮಗೆ ನಷ್ಟವಾಗುತ್ತಿದೆ. ಅದನ್ನು ಸರಿದೂಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಇದು ಸಹ ಸಾಧ್ಯವಾಗುತ್ತಿಲ್ಲ" ಎಂದು ಬೇಸರಿಸಿದರು.
ಅನುಷ್ಠಾನ ಮಾಡಲು ಮಹಾರಾಷ್ಟ್ರ, ಆಂಧ್ರ ಬಿಡುತ್ತಿಲ್ಲ
"ಭೂಸ್ವಾಧೀನಕ್ಕೆ 70 ಸಾವಿರ ಕೋಟಿ ಖರ್ಚಾಗಲಿದೆ. ಅದಕ್ಕಾಗಿ ಮೂರು ಹಂತಗಳಲ್ಲಿ ಪ್ರತಿ ವರ್ಷ 20 ಸಾವಿರ ಕೋಟಿ ಹಣ ಮೀಸಲಿಟ್ಟು ಯೋಜನೆ ಪೂರ್ಣಗೊಳಿಸಲು ನಾವು ತೀರ್ಮಾನ ಮಾಡಿದ್ದೆವು. ಇದಕ್ಕೆ ಅಡ್ಡ ಬರಲಾಗುತ್ತಿದೆ. ಭೂಸ್ವಾಧೀನ ಪಡಿಸಿಕೊಂಡು ಈಗಾಗಲೇ ಕೆಲಸ ಪ್ರಾರಂಭ ಮಾಡಲಾಗಿದೆ ಎಂದು ಸೆಕ್ರೆಟರಿಯೇಟ್ ಆಪ್ ವಾಟರ್ ರಿಸೋರ್ಸ್ ಡಿಪಾರ್ಟ್ಮೆಂಟ್‌ಗೆ ಸವಿವರವಾದ ಪತ್ರವನ್ನು ಅವರು ಬರೆದಿದ್ದಾರೆ. ಈ ಬಗ್ಗೆ ನಮ್ಮ ಪ್ರತಿಕ್ರಿಯೆ ಕೇಳಿ ಈ ತಿಂಗಳಲ್ಲಿ ಕೇಂದ್ರ ಸರ್ಕಾರ ಪತ್ರವನ್ನು ಕಳುಹಿಸಿಕೊಟ್ಟಿದೆ. ಇದನ್ನು ನಾನು ಪರಿಶೀಲನೆ ನಡೆಸಿದ್ದೇನೆ" ಎಂದರು.
"ಭೂಸ್ವಾಧೀನ ವೆಚ್ಚ ಹೆಚ್ಚಾಗಿದೆ ಎಂದು ನಾವು ಸ್ವಾಧೀನಕ್ಕೆ ಮುಂದಾಗಿದ್ದೇವೆ. ವ್ಯಾಜ್ಯಗಳನ್ನು ಕಡಿಮೆ ಮಾಡೊಕೊಳ್ಳಬೇಕು ಹಾಗೂ ಕಷ್ಟವೋ ಸುಖವೋ ಎಂದು ಸಾಲ ಮಾಡುತ್ತೇವೋ ಅಥವಾ ಏನಾದರೂ ಮಾಡುತ್ತೇವೋ ನಮಗೆ ಸೇರಿದ ವಿಚಾರ. ಒಟ್ಟಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದು ಮುಂದಾಗಿದ್ದೇವೆ. ಏಕೆಂದರೆ ಈ ಹಿಂದಿನ ಬೊಮ್ಮಾಯಿ ಅವರ ಸರ್ಕಾರದ ವೇಳೆ ರೈತರು ಭೂ ಪರಿಹಾರ ಸಾಕಾಗುವುದಿಲ್ಲ ಎಂದು ತಿಳಿಸಿದ್ದರು. 8-9 ಲಕ್ಷ ಇದ್ದ ಕಡೆ 1 ರಿಂದ 10 ಕೋಟಿವರೆಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯದಿಂದ ಆದೇಶ ತಂದಿದ್ದಾರೆ" ಎಂದು ಹೇಳಿದರು.
"ಅನುಮೋದನೆ ಸಿಕ್ಕಿರುವುದನ್ನು ಅನುಷ್ಠಾನಗೊಳಿಸಲು ಮಹಾರಾಷ್ಟ್ರ, ಆಂಧ್ರ ಬಿಡುತ್ತಿಲ್ಲ. ನಾವು ನಮ್ಮ ಜಾಗದಲ್ಲಿ ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ಮಾಡುತ್ತಿಲ್ಲ" ಎಂದರು.
20 ಸಾವಿರ ಕೋಟಿ ಹಣವನ್ನು ಯೋಜನೆಗೆ ಖರ್ಚು ಮಾಡಿದ್ದೇವೆ
"ಈಗಾಗಲೇ ನಾವು 20 ಸಾವಿರ ಕೋಟಿ ಹಣವನ್ನು ಯೋಜನೆಗೆ ಖರ್ಚು ಮಾಡಿದ್ದೇವೆ. ಈಗಾಗಲೇ ಅನೇಕ ಕೆಲಸಗಳನ್ನು ಮಾಡಿದ್ದೇವೆ. ಬೊಮ್ಮಾಯಿ ಅವರ ಕಾಲ ಸೇರಿದಂತೆ ನಮ್ಮ ಕಾಲದಲ್ಲಿಯೂ ಅನೇಕ ಕೆಲಸ ಮಾಡಿದ್ದೇವೆ" ಎಂದರು.
"ದೇವರ ದಯೆಯಿಂದ ಸುಂದರೇಶ್ ಅನ್ನುವವರು ರಾಜ್ಯದ ಹಿತಕ್ಕೆ ಧಕ್ಕೆಯಾಗದಂತೆ ತೀರ್ಪು ನೀಡಿದರು. ಲಿಮಿಟೇಶನ್ ಆರ್ಡರ್ ಗಳನ್ನು ನಿಗದಿತ ಸಮಯದ ಒಳಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮರುಪರಿಶೀಲನೆ ಮಾಡಿ ಮತ್ತೊಂದು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ" ಎಂದು ತಿಳಿಸಿದರು.
"ಈ ಹಿಂದೆ ಅಣೆಕಟ್ಟು ಪ್ರಾರಂಭ ಮಾಡಿದಾಗ ಭೂ ಪರಿಹಾರ 2 ಸಾವಿರವಿತ್ತು. ಈಗ 40 ಲಕ್ಷವಿದೆ. ಉದಯಪುರ ಜಲಶಕ್ತಿ ಸಮಾವೇಶದಲ್ಲಿ ಮೂರು ರಾಜ್ಯಗಳ ಸಚಿವರು ಸೇರಿದ್ದೆವು. ಆದರೆ ಆಂಧ್ರಪ್ರದೇಶದ ಸಚಿವರು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸದೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಈ ಹಿಂದೆ ಆದೇಶ ಬಂದಾಗ ನಮ್ಮ ರಾಜ್ಯದವರು ಸುಪ್ರೀಂಕೋರ್ಟ್ ಗೆ ಹೋಗಿದ್ದೇ ತಪ್ಪಾಯಿತು. ಅಂದು ಈ ತೀರ್ಮಾನವನ್ನು ಯಾರು ಮಾಡಿದರೊ ಗೊತ್ತಿಲ್ಲ. ನ್ಯಾಯಲಯಕ್ಕೆ ಹೋದರೆ ನಾವೇ ನಮ್ಮ ಕೈಯನ್ನು ಮೊಸಳೆ ಬಾಯಿಗೆ ನೀಡಿದಂತೆ"ಎಂದರು.
ಭೂಸ್ವಾಧೀನಕ್ಕೆ ಅನುಮತಿ ನೀಡಲಾಗಿದೆಯೇ ಎಂದು ಕೇಳಿದಾಗ, "ಕ್ಯಾಬಿನೆಟ್ ಅಲ್ಲಿ ಈ ಬಗ್ಗೆ ತೀರ್ಮಾನ ಮಾಡಿದ್ದೇವೆ. ಈ ಬಜೆಟ್ ಅಲ್ಲಿಯೂ ಈ ಬಗ್ಗೆ ಹಣ ಮೀಸಲಿಡಲು ಸಿದ್ಧತೆ ಮಾಡಿದ್ದೇವೆ" ಎಂದರು.
ಭೂಸ್ವಾಧೀನಕ್ಕೆ ಏನೂ ತೊಂದರೆ ಇಲ್ಲವಲ್ಲ ಎಂದು ಕೇಳಿದಾಗ, "ಅಕಸ್ಮಾತ್ ಏನಾದರೂ ಕೇಂದ್ರ ಸರ್ಕಾರ ಯೋಜನೆ ಮಾಡಬಾರದು ಎಂದು ಪತ್ರ ಬರೆಯುವ ಮುಂಚಿತವಾಗಿ ನಾವು ಮರು ಪ್ರತಿಕ್ರಿಯೆ ನೀಡುತ್ತಿದ್ದೇವೆ. ಅವರು ಪತ್ರ ನೀಡಿದರು ಎಂದರೆ ಅದನ್ನು ತೆಗೆದುಕೊಂಡು ಬೇರೆಯವರು ಮತ್ತೆ ನ್ಯಾಯಲಯಕ್ಕೆ ತೆರಳುತ್ತಾರೆ" ಎಂದರು.
ಮೂರು ರಾಜ್ಯಗಳು ತಕರಾರು ಮಾಡುತ್ತಿವೆಯೇ ಎಂದು ಕೇಳಿದಾಗ, "ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮೂರು ರಾಜ್ಯಗಳು ಏಕೆ ಹೀಗೆ ಮಾಡುತ್ತಿವೆ ಎಂದು ತಿಳಿಯುತ್ತಿಲ್ಲ" ಎಂದರು.
ಟ್ರಿಬ್ಯೂನಲ್ ಆದೇಶ ನೀಡಿರುವುದನ್ನು ರಾಜ್ಯ ಸರ್ಕಾರ ಪಾಲಿಸಬಹುದಲ್ಲವೇ ಎಂದು ಕೇಳಿದಾಗ, "ನ್ಯಾಯಲಯದ ಮೂಲಕ ಹೋದರೆ ಏನೂ ಆಗುವುದಿಲ್ಲ. ಮಹಾರಾಷ್ಟ್ರದವರು ತಕರಾರು ಮಾಡಿದ್ದರು. ಅವರು ನಮ್ಮಲ್ಲಿ ಪ್ರವಾಹವಾಗುತ್ತದೆ ಎಂದಿದ್ದರು. ಕೇಂದ್ರ ಸರ್ಕಾರದ ಸಮಿತಿ 524 ಮೀ. ಹೆಚ್ಚಳ ಮಾಡಿದರೂ ಪ್ರವಾಹ ಆಗುವುದಿಲ್ಲ ಎಂದು ವರದಿ ನೀಡಿದೆ. ಸುಪ್ರೀಂಕೋರ್ಟ್ ನಿಂದ ಯಾವುದೇ ತರಹದ ತಡೆಯಾಜ್ಞೆಗಳು ಇಲ್ಲ. ಆದರೂ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
ಸರ್ವಪಕ್ಷ ನಿಯೋಗದೊಂದಿಗೆ ಹೋಗಲು ತಯಾರಿ
ದೆಹಲಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವಿರಾ ಎಂದು ಕೇಳಿದಾಗ, "ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇದರ ಪರಿಹಾರಕ್ಕೆ ಸರ್ವಪಕ್ಷ ನಿಯೋಗವನ್ನೇ ಕರೆದುಕೊಂಡು ಹೋಗಬೇಕು" ಎಂದರು.
ಚಂದ್ರಬಾಬು ನಾಯ್ಡು ಅವರು ತಮ್ಮ ಸ್ನೇಹಿತರು ಎಂದಾಗ, "ವೈಯಕ್ತಿಕ ಸಂಬಂಧ ಬೇರೆ, ರಾಜಕೀಯ ಸಂಬಂಧ ಬೇರೆ" ಎಂದರು. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂದಾಗ, "ಯಾರೇ ಇದ್ದರು ರಾಜ್ಯದ ಹಿತ ಮುಖ್ಯ" ಎಂದರು.
ಈ ವಿಚಾರದಲ್ಲಿ ದೇವೇಗೌಡರ ಸಲಹೆ ಪಡೆಯಬಹುದಲ್ಲವೇ ಎಂದಾಗ, "ಅವರ ಆರೋಗ್ಯ ಸರಿಯಿಲ್ಲ. ಅದನ್ನು ಕಾಪಾಡಿಕೊಳ್ಳಬೇಕು. ಅವರ ಕಡೆ ಹೋರಾಟ ಏನು ಮಾಡಬೇಕೊ ಮಾಡಲಿ” ಎಂದು ತಿಳಿಸಿದರು.