ವಾಷಿಂಗ್ಟನ್: ಇಂದು ಅಮೆರಿಕ ಅಧ್ಯಕ್ಷ(America President)ರಾಗಿ ಡೊನಾಲ್ಡ್ ಟ್ರಂಪ್(Donald Trump Inauguration) ಪ್ರಮಾಣವಚನ ಸ್ವೀಕರಿಸಲಿದ್ದು, ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ದೇಶ -ವಿದೇಶಗಳಿಂದ ಗಣ್ಯಾತಿಗಣ್ಯರು ಟ್ರಂಪ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಾಷಿಂಗ್ಟನ್‌ನಲ್ಲಿ ಜಮಾಯಿಸಿದ್ದಾರೆ.
47ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣವಚನ
ಟ್ರಂಪ್ ಇಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಾಷಿಂಗ್ಟನ್‌ನಲ್ಲಿ ತೀವ್ರ ಶೀತ ವಾತಾವರಣ ಇರುವುದರಿಂದ ಈ ಬಾರಿ ಒಳಾಂಗಣ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ 47 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 1985 ರ ನಂತರ ಅಧ್ಯಕ್ಷೀಯ ಪದಗ್ರಹಣ ಸಮಾರಂಭವನ್ನು ಒಳಾಂಗಣಕ್ಕೆ ಸ್ಥಳಾಂತರಿಸುತ್ತಿರುವುದು ಇದೇ ಮೊದಲು.
ಈ ಸುದ್ದಿಯನ್ನೂ ಓದಿ: Donald Trump : ಡೊನಾಲ್ಡ್ ಟ್ರಂಪ್ ಪದಗ್ರಹಣ;ಔತಣಕೂಟದಲ್ಲಿ ಪಾಲ್ಗೊಂಡ ಮುಖೇಶ್ ಅಂಬಾನಿ ದಂಪತಿ
ಭಾರತವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿನಿಧಿಸಲಿದ್ದಾರೆ. ಎಲೋನ್ ಮಸ್ಕ್, ಜೆಫ್ ಬೆಜೋಸ್, ಮಾರ್ಕ್ ಜುಕರ್‌ಬರ್ಗ್, ಸ್ಯಾಮ್ ಆಲ್ಟ್‌ಮನ್, ಬರಾಕ್ ಒಬಾಮಾ, ಕಮಲಾ ಹ್ಯಾರಿಸ್, ಹಿಲರಿ ಕ್ಲಿಂಟನ್, ಟಿಮ್ ಕುಕ್ ಮತ್ತು ಸುಂದರ್ ಪಿಚೈ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮವು ಸಾಂಪ್ರದಾಯಿಕ ಚರ್ಚ್ ಸೇವೆಯೊಂದಿಗೆ ಪ್ರಾರಂಭವಾಗುತ್ತದೆ, ನಂತರ ಶ್ವೇತಭವನದಲ್ಲಿ ಚಹಾ ಕೂಟ ನಡೆಯಲಿದೆ ಮತ್ತು ನಂತರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕ್ಯಾಪಿಟಲ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಡೊನಾಲ್ಡ್ ಟ್ರಂಪ್ ತಮ್ಮ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ನಂತರ ಅಧ್ಯಕ್ಷ ಜೋ ಬಿಡೆನ್‌ಗೆ ವಿದಾಯ ಹೇಳಲಿದ್ದಾರೆ.
ಟ್ರಂಪ್ ಆಹ್ವಾನದ ಮೇರೆಗೆ ದೇಶದ ಉದ್ಯಮ ದಿಗ್ಗಜ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಅಮೆರಿಕ ತಲುಪಿದ್ದಾರೆ. ನಿನ್ನೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗಿಯಾದ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಡೊನಾಲ್ಡ್ ಟ್ರಂಪ್ ಜೊತೆ ಫೊಟೋಗೆ ಫೋಸ್ ಕೊಟ್ಟರು. ಇನ್ನು ಇವರ ಜೊತೆ ಅಮೆಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.