ಚಿತ್ರದುರ್ಗ: ಲಾರಿಗೆ ಕಾರು ಡಿಕ್ಕಿಯಾಗಿ ಐವರು ದುರ್ಮರಣ ಹೊಂದಿರುವ ಭೀಕರ ಘಟನೆ (Chitradurga Accident) ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಭಾನುವಾರ ನಡೆದಿದೆ. ಬೆಂಗಳೂರು ಮೂಲದ ಬಿಎಂಟಿಸಿ ನಿವೃತ್ತ ನೌಕರ ಶಾಂತಮೂರ್ತಿ(60), ವಿದ್ಯಾರಣ್ಯಪುರದ ರುದ್ರಸ್ವಾಮಿ(52), ಬೆಂಗಳೂರು ಉತ್ತರದ ಈರಣ್ಣ ಬಡಾವಣೆಯ ಮಲ್ಲಿಕಾರ್ಜುನ(50) ಸೇರಿ ಐವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ಅಪಘಾತ ನಡೆದಿದೆ. ಕಾರಿನಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಪ್ರಸಾದ ಪತ್ತೆಯಾಗಿದೆ. ಹೀಗಾಗಿ ಅವರು ಕಾರಿನಲ್ಲಿ ಸವದತ್ತಿಯ ರೇಣುಕಾ ಯಲ್ಲಮ್ಮ ದೇಗುಲಕ್ಕೆ ಹೋಗಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ.
ಬೆಂಗಳೂರು ಮೂಲದ ಇನ್ನೋವಾ ಕಾರು, ತಮಿಳುನಾಡು ಪಾಸಿಂಗ್ ಇರುವ ಲಾರಿ ಹಿಂಬದಿಗೆ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಪೃತಪಟ್ಟಿದ್ದಾರೆ. ಗುದ್ದಿದ ರಭಸಕ್ಕೆ ಇನ್ನೋವಾ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಈ ಸುದ್ದಿಯನ್ನೂ ಓದಿ | Chhaava Movie: 'ಛಾವಾ' ಎಫೆಕ್ಟ್! ನಿಧಿಗಾಗಿ ರಾತ್ರೋರಾತ್ರಿ ಭೂಮಿ ಅಗೆದ ಗ್ರಾಮಸ್ಥರು
ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ಹಾಲು ತರಲು ಹೋಗಿದ್ದ ವ್ಯಕ್ತಿ ಬಲಿ
ತುಮಕೂರು: ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ (Bike wheeling) ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ತುಮಕೂರು ನಗರದ ಟೂಡಾ ಕಚೇರಿ ಬಳಿ ಶನಿವಾರ ಬೆಳಗ್ಗೆ ಜರುಗಿದೆ. ಹೇಮಾದ್ರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ಟಿ. ತಿಪ್ಪೇಸ್ವಾಮಿ ಮೃತ ವ್ಯಕ್ತಿ. ಶನಿವಾರ ಬೆಳಗ್ಗೆ ಮನೆಗೆ ಹಾಲು ತರಲೆಂದು ಬಂದಿದ್ದ ವೇಳೆ ವ್ಹೀಲಿಂಗ್ ಮಾಡಿಕೊಂಡು ಬಂದ ಪುಂಡರ ಬೈಕ್, ತಿಪ್ಪೇಸ್ವಾಮಿ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯಾದ ಪರಿಣಾಮ ತಿಪ್ಪೇಸ್ವಾಮಿ ಅವರ ತಲೆ ಮತ್ತು ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ. ಈ ಕುರಿತು ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.