ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೂರ್ನಾಲ್ಕು ವರ್ಷಗಳಲ್ಲಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉಚಿತ ಆಸ್ಪತ್ರೆ ನಿರ್ಮಾಣ: ಶ್ರೀ ಮಧುಸೂದನ ಸಾಯಿ ಭರವಸೆ

ಗದಗ ನಗರದಲ್ಲಿ ಶುಕ್ರವಾರ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿದ್ದಾರೆ. ಆಸ್ಪತ್ರೆ ನಿರ್ವಹಣೆಗೆ ಅಗತ್ಯವಿರುವ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಲಭ್ಯವಾದ ಬಳಿಕ ಉಚಿತ ಆಸ್ಪತ್ರೆ ನಿರ್ಮಾಣದ ಯೋಜನೆಯನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು ಎಂದು ಸದ್ಗುರು ತಿಳಿಸಿದ್ದಾರೆ.

ಗದಗ: ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉಚಿತ ಆಸ್ಪತ್ರೆ ನಿರ್ಮಾಣದ ಯೋಜನೆ ಜಾರಿಗೊಳಿಸಲು ಇನ್ನೂ ಮೂರ್ನಾಲ್ಕು ವರ್ಷಗಳ ಕಾಲಾವಕಾಶ ಬೇಕಾಗಬಹುದು. ಹತ್ತು ವರ್ಷ ಸಮಯ ಕೊಡಿ. ಕರ್ನಾಟವನ್ನು ಬದಲಿಸುತ್ತೇನೆ ಎಂದು "ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್" ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ (Sri Madhusudan Sai) ಹೇಳಿದರು. ನಗರದಲ್ಲಿ ಶುಕ್ರವಾರ (ಆ.21) ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ವಿದುಷಿ ಸಂಗೀತಾ ಕಟ್ಟಿ ಕೇಳಿದ ಪ್ರಶ್ನೆಗಳಿಗೆ ಸದ್ಗುರು ಉತ್ತರಿಸಿದರು.

ಆಸ್ಪತ್ರೆ ನಿರ್ವಹಣೆಗೆ ಅಗತ್ಯವಿರುವ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಲಭ್ಯವಾದ ಬಳಿಕ ಯೋಜನೆಯನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು. ಮೊದಲ ಹಂತದಲ್ಲಿ ವೆಲ್‌ನೆಸ್ ಕೇಂದ್ರಗಳನ್ನು ಆರಂಭಿಸಿ, ಬಳಿಕ 50 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲಾಗುವುದು. ನಮ್ಮ ವಿದ್ಯಾರ್ಥಿಗಳೇ ವೈದ್ಯಕೀಯ ಸಿಬ್ಬಂದಿಯಾಗಿ ಸೇವೆಗೆ ಬಂದ ಬಳಿಕ ದೊಡ್ಡ ಆಸ್ಪತ್ರೆ ನಿರ್ಮಾಣದ ಯೋಜನೆಗೆ ವೇಗ ನೀಡಲಾಗುವುದು. ಪ್ರತಿ ತಾಲೂಕಿನಲ್ಲೂ ಇಂತಹ ಕೇಂದ್ರಗಳನ್ನು ನಿರ್ಮಿಸುವ ಆಶಯವಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಅಭಿಪ್ರಾಯಪಟ್ಟರು.

Sri Madhusudan Sai (4)

ತಂತ್ರಜ್ಞಾನವು ಮಾಹಿತಿ ಮತ್ತು ಜ್ಞಾನವನ್ನು ನೀಡಬಹುದೇ ಹೊರತು, ವ್ಯಕ್ತಿಯಲ್ಲಿ ನಿಜವಾದ ಪರಿವರ್ತನೆ ತರಲು ಸಾಧ್ಯವಿಲ್ಲ. ನಮ್ಮ ದೇಶದ ಗುರುಶಿಷ್ಯ ಪರಂಪರೆಯು ಜ್ಞಾನ ಮತ್ತು ಸಂಸ್ಕಾರವನ್ನೇ ಆಧರಿಸಿದೆ. ಗುರುವಿನ ಸಾನ್ನಿಧ್ಯಕ್ಕೆ ಪರ್ಯಾಯವಿಲ್ಲ. ಪುಸ್ತಕಗಳು ಮತ್ತು ತಾಂತ್ರಿಕ ಸಾಧನಗಳ ಮೂಲಕ ಕಲಿಯಬಹುದಾದರೂ, ಗುರುವಿನ ಸಾನ್ನಿಧ್ಯದಲ್ಲಿದ್ದಾಗ ವ್ಯಕ್ತಿಯೊಳಗಿನ ಶಕ್ತಿ ಜಾಗೃತವಾಗುತ್ತದೆ. ಕೋವಿಡ್ ಅವಧಿಯಲ್ಲಿ ಆನ್‌ಲೈನ್ ತಂತ್ರಜ್ಞಾನದ ಮೂಲಕ ನೀಡಿದ ಶಿಕ್ಷಣ ಅಷ್ಟಾಗಿ ಫಲ ನೀಡಲಿಲ್ಲ. ಶಿಕ್ಷಣದಲ್ಲಿ ಗುರುವಿನ ಮಾರ್ಗದರ್ಶನ ಮತ್ತು ಸಾನ್ನಿಧ್ಯವು ವ್ಯಕ್ತಿಯ ಸಮಗ್ರ ಪರಿವರ್ತನೆಗೆ ಕಾರಣವಾಗುತ್ತವೆ ಎಂದು ಪ್ರತಿಪಾದಿಸಿದರು.

Sri Madhusudan Sai (3)

ಅಧ್ಯಾತ್ಮದಲ್ಲಿ ನಾದಕ್ಕೆ ಮಹತ್ವವಿದೆ. ಶಬ್ದವೇ ಸೃಷ್ಟಿಯ ಮೂಲ ಎಂದು ಹೇಳಲಾಗಿದೆ. ಪಂಚಭೂತಗಳಿಂದ ಪಂಚೇಂದ್ರಿಯಗಳು ರೂಪುಗೊಂಡಿವೆ. ಮನುಷ್ಯನ ಮನಸ್ಸಿನ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಧ್ವನಿಯು ಹೊಂದಿದೆ. ಮಾತು ಸಂಗೀತವಾಗಿ, ರಾಗ-ತಾಳದೊಂದಿಗೆ ಅಭಿವ್ಯಕ್ತವಾದಾಗ ಹೃದಯವನ್ನು ಸ್ಪರ್ಶಿಸುತ್ತದೆ. ಸಂಗೀತದ ಪ್ರಕಾರ ಯಾವುದೇ ಆಗಿರಲಿ, ಅದರಲ್ಲಿ ಪ್ರೇಮ, ಭಕ್ತಿ ಮತ್ತು ಅರ್ಪಣಾಭಾವ ಇದ್ದರೆ ಅದು ಮನಸ್ಸಿಗೆ ತಲುಪುತ್ತದೆ. ಹೃದಯದಿಂದ ಹೊರಹೊಮ್ಮಿದ ಸಂಗೀತವು ನಿಜವಾದ ಸ್ಪಂದನೆ ಮೂಡಿಸುತ್ತದೆ ಎಂದು ಹೇಳಿದರು.

Sri Madhusudan Sai (5)

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, ಮಾನವನ ಅಂತರಂಗದ ತುಡಿತಕ್ಕೆ ಭೌತಿಕ ಸುಖ, ಸಂಪತ್ತು ಅಥವಾ ಕೀರ್ತಿ ತೃಪ್ತಿ ನೀಡಲಾರದು. ನಿಸ್ವಾರ್ಥ ಸೇವೆಯಿಂದ ಜೀವಕಾರುಣ್ಯ ಅರಳಿ, ಮನುಷ್ಯನು ಪರಮಾತ್ಮನ ಸನ್ನಿಧಾನವನ್ನು ಸೇರುವ ದಾರಿಯನ್ನು ಕಂಡುಕೊಳ್ಳುತ್ತಾನೆ" ಎಂದು ಹೇಳಿದರು.

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮೂರನೇ ವರ್ಷದ ಲೈಫ್ ಸೈನ್ಸ್ ವಿದ್ಯಾರ್ಥಿನಿ ಸೃಷ್ಟಿ ಪಲ್ಲೆ ಮಾತನಾಡಿ, "ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಶ್ರೀ ಸತ್ಯ ಸಾಯಿ ವಾಣಿ ನಿಕೇತನಂನಿಂದ ನನ್ನ ಶೈಕ್ಷಣಿಕ ಪಯಣ ಆರಂಭವಾಯಿತು. ಇಂದು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೇನೆ. ಇಲ್ಲಿ ಲೌಕಿಕ ಶಿಕ್ಷಣದೊಂದಿಗೆ ಸಂಸ್ಕಾರ, ನಿಸ್ವಾರ್ಥ ಸೇವೆ ಮತ್ತು ಪರೋಪಕಾರದ ಮೌಲ್ಯಗಳನ್ನು ಕಲಿತಿದ್ದೇನೆ. ಪ್ರತಿಭೆಗೆ ತಕ್ಕ ಅವಕಾಶ ಕಲ್ಪಿಸುವ ಈ ಶಿಕ್ಷಣ ವ್ಯವಸ್ಥೆ ಸಮಾಜಮುಖಿ ಬದುಕಿಗೆ ಪ್ರೇರಣೆ ನೀಡಿದೆ" ಎಂದು ಹೇಳಿದರು.

Sri Madhusudan Sai (1)

ಶ್ರೀ ಸತ್ಯ ಸಾಯಿ ವಾಣಿ ನಿಕೇತನಂ ಗುರುಕುಲದ ಗೌರವಾಧ್ಯಕ್ಷ ಬಿ.ಎಸ್. ಗೋಣಿ ಮಾತನಾಡಿ, "ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರು 1968ರಲ್ಲಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಗದಗ ಜಿಲ್ಲೆಯು ಕುಮಾರವ್ಯಾಸರ ತಪೋಭೂಮಿ ಎನಿಸಿದೆ. ಅನ್ನ, ಅಕ್ಷರ, ಆರೋಗ್ಯದ ತ್ರಿವಿಧ ದಾಸೋಹದ ಮೂಲಕ ಪ್ರೇಮಸಾಯಿಯ ಸೇವಾಕಾರ್ಯ ಮುಂದುವರಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಇಲ್ಲಿಗೆ ಆಗಮಿಸಿರುವ ಸಂತಸದ ಸಂಗತಿ" ಎಂದು ನುಡಿದರು.

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವೇದಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ "ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ" ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಸಾಯಿ ಸಿಂಫನಿ ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.

ರಾಜಕಾರಿಣಿಗಳ ಮನಸ್ಸು ಬದಲಾಗಬೇಕು: ಡಿ.ಆರ್.ಪಾಟೀಲ

Sri Madhusudan Sai (2)

ರಾಜಕಾರಿಣಿಗಳು ನಿಸ್ವಾರ್ಥ ಸೇವೆಗೆ ಮನಸ್ಸು ಮಾಡಿದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು. ಇದು ಸಾಧ್ಯವಾಗಲು ರಾಜಕೀಯದಲ್ಲಿರುವವರ ಮನಸ್ಸು ಬದಲಾಗಬೇಕು ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಕರ್ನಾಟಕ ಪರಿವರ್ತಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಹೋಗುವವರು ಅಧಿಕಾರ ಹೇಗೆ ನಡೆಸಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಿಮ್ಮಿಂದ ತರಬೇತಿ ಪಡೆಯಬೇಕಾದ ಅಗತ್ಯವಿದೆ. ರಾಜಕಾರಿಣಿಗಳು ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.