Hindenburg Research: ಅದಾನಿ ಗ್ರೂಪ್‌ಗೆ ಹಿಂಡೆನ್‌ಬರ್ಗ್ ಮಾಡಿದ ವಂಚನೆ ಹೇಗಿತ್ತು?
Hindenburg Research: ಅದಾನಿ ಗ್ರೂಪ್ ವಿರುದ್ಧ ಯಾವುದೇ ಸಾಕ್ಷಾಧಾರಗಳು ಇಲ್ಲದೆಯೇ ಪುಟಗಟ್ಟಲೆ ಆರೋಪಗಳನ್ನು ಹರಿಯಲು ಬಿಟ್ಟು, ತನ್ನ ದುರ್ಲಾಭ ಮಾಡಿಕೊಂಡ ಅಮೆರಿಕದ ಮೂಲದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಇದೀಗ ಸ್ಥಗಿತಗೊಂಡಿದೆ. ಹಾಗಾದರೆ ಈ ಸಂಸ್ಥೆ ನಡೆಸಿದ ವಂಚನೆ ಏನು? ಇದು ಹೇಗೆ ಅದಾನಿ ಗ್ರೂಪ್ ವಿರುದ್ದ ಕಾರ್ಯಾಚರಿಸಿತು? ಇಲ್ಲಿದೆ ವಿವರ.
ನವದೆಹಲಿ, ಜ. 15, 2025: ಅದಾನಿ ಗ್ರೂಪ್ (Adani Group) ವಿರುದ್ಧ ಯಾವುದೇ ಸಾಕ್ಷಾಧಾರಗಳು ಇಲ್ಲದೆಯೇ ಪುಟಗಟ್ಟಲೆ ಆರೋಪಗಳನ್ನು ಹರಿಯಲು ಬಿಟ್ಟು, ತನ್ನ ದುರ್ಲಾಭ ಮಾಡಿಕೊಂಡ ಅಮೆರಿಕದ ಮೂಲದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ (Hindenburg Research) ಇದೀಗ ಸ್ಥಗಿತವಾಗಿದೆ.
ಅದಾನಿ ಗ್ರೂಪ್‌ಗೆ ಕಳಂಕ ಹಚ್ಚಿದ್ದಲ್ಲದೆ, ಅದರ ಷೇರುಗಳು ಭಾರಿ ಕುಸಿಯುವಂತೆ ಮಾಡಿದ್ದ ಹಿಂಡೆನ್‌ಬರ್ಗ್‌ನ ನೇಟ್ ಅಂಡರ್ಸನ್ (Nate Anderson), ಯಾವುದೇ ನಿರ್ದಿಷ್ಟ ಕಾರಣವನ್ನು ಸ್ಪಷ್ಟಪಡಿಸದೆಯೇ ಬಾಗಿಲು ಮುಚ್ಚಿದ್ದಾರೆ.
ಇದು ಸಹಜವಾಗಿಯೇ ಹಿಂಡೆನ್‌ಬರ್ಗ್ ತನಿಖೆಗೆ ಹೆದರಿಕೊಂಡಿತೇ ಎಂಬ ಸಂಶಯ ಮೂಡಿಸಿದೆ. " ಕಂಪನಿ ತನ್ನ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿದೆ. ಹೀಗಾಗಿ ಮುಚ್ಚಲಾಗುತ್ತದೆʼʼ ಎಂದು ನೇಟ್ ಅಂಡರ್ಸನ್ ಚುಟುಕಾಗಿ ಹೇಳಿದ್ದಾರೆ. ಹಾಗಾದರೆ ಅದಾನಿ ಗ್ರೂಪ್ ಕಂಪನಿಗಳ ವಿರುದ್ಧ ಇಲ್ಲಸಲ್ಲದ ಕಥೆಗಳನ್ನು ಕಟ್ಟಿ ಅದರ ಲಕ್ಷಾಂತರ ಷೇರುದಾರರಿಗೆ, ಸ್ವತಃ ಅದಾನಿಯವರಿಗೆ ಉಂಟು ಮಾಡಿದ್ದ ನಷ್ಟಕ್ಕೆ ಹೊಣೆ ಯಾರು? ಪಲಾಯನವಾದಿ ನೇಟ್ ಅಂಡರ್ಸನ್ ಈ ಪ್ರಶ್ನೆಗೆ ಉತ್ತರಿಸಬೇಕಾಗಿದೆ. 2023ರ ಜನವರಿಯಲ್ಲಿ ಹಿಂಡೆನ್ ಬರ್ಗ್, ಅದಾನಿ ಗ್ರೂಪ್ ವಿರುದ್ಧ ಪ್ರಕಟಿಸಿದ ವರದಿಯ ಬಳಿಕ ಅದಾನಿ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ ಬರೋಬ್ಬರಿ 150 ಶತಕೋಟಿ ಡಾಲರ್ ನಷ್ಟವಾಗಿತ್ತು. ಅಂದರೆ 12 ಲಕ್ಷ ಕೋಟಿ ರೂ.ಗೂ ಹೆಚ್ಚು.
ಹಾಗಾದರೆ ಏನಿದು ಶಾರ್ಟ್ ಸೆಲ್ಲಿಂಗ್? ಇದರ ಮೂಲಕ ಲಾಭ ಗಳಿಸುವುದು ಹೇಗೆ? ಹಿಂಡೆನ್ ಬರ್ಗ್ ಕೂಡ ಅದಾನಿ ಷೇರುಗಳ ದರ ಕುಸಿಯುವಂತೆ ಮಾಡಿಕೊಂಡು ಎಷ್ಟು ಲಾಭ ಗಳಿಸಿರಬಹುದು? ನೋಡೋಣ.
ಮೊದಲಿಗೆ ಶಾರ್ಟ್ ಸೆಲ್ಲಿಂಗ್ ಎಂದರೇನು ಎಂದು ತಿಳಿಯೋಣ. ಆಗ ಹಿಂಡೆನ್ ಬರ್ಗ್ ಎಂಥಾ ಗೇಮ್ ಆಡಿದೆ ಎಂಬುದು ಮನನವಾಗಬಹುದು. ಶಾರ್ಟ್ ಸೆಲ್ಲಿಂಗ್ ಎಂದರೆ, ಒಂದು ಸ್ಟಾಕ್ ಟ್ರೇಡಿಂಗ್ ಸ್ಟ್ರಾಟಜಿ. ಇಲ್ಲಿ ಹೂಡಿಕೆದಾರನೊಬ್ಬ ಷೇರುಗಳನ್ನು ಭವಿಷ್ಯದಲ್ಲಿ ಅದರ ಕಡಿಮೆಯಾಗಲಿದೆ ಎಂದು ಆಲೋಚಿಸಿಕೊಂಡು, ಬ್ರೋಕರ್‌ನಿಂದ ಸಾಲದ ರೂಪದಲ್ಲಿ ತೆಗೆದುಕೊಳ್ಳುತ್ತಾನೆ. ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಮಾರುತ್ತಾನೆ. ಷೇರು ದರ ಕುಸಿದಾಗ, ಕಡಿಮೆ ದರಕ್ಕೆ ಅದೇ ಷೇರುಗಳನ್ನು ಖರೀದಿಸುತ್ತಾನೆ. ಹಾಗೂ ಸಾಲವಾಗಿ ಪಡೆದಿದ್ದ ಷೇರುಗಳನ್ನು ಬ್ರೋಕರ್‌ಗೆ ಹಿಂತಿರುಗಿಸುತ್ತಾನೆ. ಆಗ ಷೇರುಗಳ ದರ ಕಡಿಮೆಯಾಗಿರುವುದರಿಂದ, ಸಾಲದ ಷೇರುಗಳ ದರದಲ್ಲಿ ಉಂಟಾಗಿರುವ ವ್ಯತ್ಯಾಸವೇ ಶಾರ್ಟ್ ಸೆಲ್ಲರ್‌ಗೆ ಸಿಗುವ ಲಾಭವಾಗುತ್ತದೆ. ಒಂದು ವೇಳೆ ಷೇರುಗಳ ದರ ಏರಿದ್ದರೆ ಮಾತ್ರ ಶಾರ್ಟ್ ಸೆಲ್ಲರ್‌ಗೆ ನಷ್ಟವಾಗುತ್ತದೆ.
ಈಗೊಂದು ಉದಾಹರಣೆ ನೋಡೋಣ: ಎಬಿಸಿ ಎಂಬ ಕಂಪನಿಯ ಪ್ರತಿ ಷೇರಿನ ದರ 50 ರೂಪಾಯಿ ಎಂದಿಟ್ಟುಕೊಳ್ಳಿ. ನೀವು 100 ಷೇರುಗಳನ್ನು ಸಾಲವಾಗಿ ಪಡೆಯುತ್ತೀರಿ. ಬಳಿಕ 5,000 ರೂ.ಗೆ ಮಾರುತ್ತೀರಿ. ಮುಂದೊಮ್ಮೆ ಷೇರಿನ ದರ 25 ರೂಪಾಯಿಗೆ ಕುಸಿಯುತ್ತದೆ. ಆಗ ನೀವು 100 ಷೇರುಗಳಮ್ಮು ಮತ್ತೆ ಖರೀದಿಸುತ್ತೀರಿ. ಅದನ್ನು ಸಾಲ ನೀಡಿದವರಿಗೆ ಹಿಂತಿರುಗಿಸುತ್ತೀರಿ. ಆಗ ನಿಮ್ಮ ಕೈಯಲ್ಲಿ 5000-2,500 = 2,500 ರೂ. ಉಳಿಯುತ್ತದೆ. ಅದು ನಿಮಗೆ ಸಿಗುವ ಲಾಭ.
ಬ್ಲೂಮ್ ಬರ್ಗ್ ವರದಿಯ ಪ್ರಕಾರ ಹಿಂಡೆನ್ ಬರ್ಗ್ ಸಂಸ್ಥೆಯು, ಅದಾನಿ ಗ್ರೂಪ್ ವಿರುದ್ಧದ ಶಾರ್ಟ್ ಸೆಲ್ಲಿಂಗ್ ಮೂಲಕ 4 ದಶಲಕ್ಷ ಡಾಲರ್ ಲಾಭ ಗಳಿಸಿದೆ. ಇದು ನಿಜವೇ ಆಗಿದ್ದರೆ ಅಂಥ ದೊಡ್ಡ ಲಾಭವೇನೂ ಅಲ್ಲ, ಆದರೆ ಅದಾನಿ ಷೇರು ಹೂಡಿಕೆದಾರರಿಗೆ ಆಗ ಉಂಟಾಗಿದ್ದ ನಷ್ಟ ದೊಡ್ಡದು.
ಹಿಂಡೆನ್ ಬರ್ಗ್ ವರದಿ ಪ್ರಕಟವಾದ ಬೆನ್ನಲ್ಲೇ ಅದಾನಿ ಗ್ರೂಪ್, ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿತ್ತು. ಹೀಗಿದ್ದರೂ, ಷೇರು ಮಾರುಕಟ್ಟೆ ಅತಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿತ್ತು. ಹೀಗಾಗಿ ಅದಾನಿ ಗ್ರೂಪ್ ಷೇರುಗಳು ತೀವ್ರ ಕುಸಿದಿತ್ತು. ಕೆಲ ತಿಂಗಳುಗಳ ಬಳಿಕ ಅದಾನಿ ಗ್ರೂಪ್ ಷೇರುಗಳು ಚೇತರಿಸಿತು ಎಂಬ ಪ್ರಶ್ನೆ ಬೇರೆ. ಆದರೆ 2023ರುದ್ದಕ್ಕೂ ಅದಾನಿ ಕಂಪನಿಗಳ ಹಣಕಾಸು ಸ್ಥಿತಿಗತಿಗಳ ಮೇಲೆ ಇದು ನಕಾರಾತ್ಮಕ ಪ್ರಭಾವ ಬೀರಿತ್ತು.
ನೇಟ್ ಅಂಡರ್ಸನ್ ಹೇಳುವಂತೆ ಈತನದ್ದು 11 ಮಂದಿಯ ತಂಡ. ಅವರೆಲ್ಲ ವಿನಯವಂತರಂತೆ. ಆದರೆ ಕೆಲಸದ ವಿಚಾರಕ್ಕೆ ಬಂದರೆ ರಕ್ಕಸರಂತೆ. ಅವರದ್ದು ವಿಶ್ವದರ್ಜೆಯ ಕೆಲಸವಂತೆ. ಕೊನೆಯದಲ್ಲಿ ಅಂಡರ್ಸನ್ ಹೀಗೆನ್ನುತ್ತಾನೆ- ನನಗೆ ಮತ್ತು ನನ್ನ ತಂಡಕ್ಕೆ ಯಾವುದೇ ಸಾಂಪ್ರದಾಯಿಕ ಫೈನಾನ್ಸ್ ಬ್ಯಾಕ್ ಗ್ರೌಂಡ್ ಏನೂ ಇಲ್ಲ. ಹೀಗಿದ್ದರೂ, ನಾವು ದೊಡ್ಡ ಸಾಧನೆ ಮಾಡಿದ್ದೇವೆ ಎನ್ನುತ್ತಾನೆ ಅಂಡರ್ಸನ್.
ಈ ಸುದ್ದಿಯನ್ನೂ ಓದಿ: 8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ! 8ನೇ ವೇತನ ಆಯೋಗ ರಚನೆಗೆ ಕೇಂದ್ರ ಸರ್ಕಾರ ಅಸ್ತು
ಹಿಂಡೆನ್ ಬರ್ಗ್ ಮುಚ್ಚಿದ ಘೋಷಣೆ ಹೊರಬಿದ್ದ ಬೆನ್ನಲ್ಲೇ ಅದಾನಿ ಷೇರುಗಳ ದರದಲ್ಲಿ 7% ಏರಿಕೆಯಾಯಿತು.