ರಾಜ್‌ಕೋಟ್: ಇಂಗ್ಲೆಂಡ್ ವಿರುದ್ಧ ಮೂರನೇ ಟಿ20ಐ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಅದ್ಭುತ ಕ್ಯಾಚ್ ಪಡೆದ ಭಾರತ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರಿಷಭ್ ಪಂತ್‌ಗಿಂತ ಸಂಜು ಸ್ಯಾಮ್ಸನ್ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಶ್ಲಾಘಿಸಿದ್ದಾರೆ.
ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಇಂಗ್ಲೆಂಡ್ ತಂಡ, ಫಿಲ್ ಸಾಲ್ಟ್ ಅವರ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡರೂ ಜೋಸ್ ಬಟ್ಲರ್ ಹಾಗೂ ಬೆನ್ ಡಕೆಟ್ ಅವರ 80 ರನ್‌ಗಳ ಜೊತೆಯಾಟದ ಬಲದಿಂದ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿತ್ತು. 10ನೇ ಓವರ್ ಮುಗಿಯುವುದಕ್ಕೂ ಮುನ್ನ ಇಂಗ್ಲೆಂಡ್ ತಂಡ 87 ರನ್‌ಗಳನ್ನು ಕಲೆ ಹಾಕಿತ್ತು.
IND vs ENG 3rd T20I: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ!
ಒಂದು ಹಂತದಲ್ಲಿ 22 ಎಸೆತಗಳಲ್ಲಿ 24 ರನ್‌ಗಳನ್ನು ಗಳಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ದೊಡ್ಡ ಇನಿಂಗ್ಸ್ ಆಡುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, 10ನೇ ಓವರ್ ಕೊನೆಯ ಎಸೆತದಲ್ಲಿ ವರುಣ್ ಚಕ್ರವರ್ತಿ ಎಸೆತವನ್ನು ಅರಿಯುವಲ್ಲಿ ವಿಫಲರಾದ ಜೋಸ್ ಬಟ್ಲರ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ಕೊಟ್ಟಿದ್ದರು. ಈ ವೇಳೆ ಸಂಜು ಸ್ಯಾಮ್ಸನ್ ಬಲವಾಗಿ ಅಫೀಲ್ ಮಾಡಿದ್ದರು. ಆದರೆ, ಫೀಲ್ಡ್ ಅಂಪೈರ್ ನಾಟ್‌ಔಟ್ ಕೊಟ್ಟಿದ್ದರು. ಇದರಿಂದ ತೃಪ್ತರಾಗದ ಸಂಜು ಸ್ಯಾಮ್ಸನ್, ಡಿಆರ್‌ಎಸ್ ತೆಗೆದುಕೊಳ್ಳಲು ನಾಯಕ ಸೂರ್ಯಕುಮಾರ್ ಯಾದವ್ ಮನವೋಲಿಸಿದ್ದರು.
ಇದಕ್ಕೆ ಒಪ್ಪಿಕೊಂಡ ನಾಯಕ ಸೂರ್ಯಕುಮಾರ್ ಯಾದವ್ ಡಿಆರ್‌ಎಸ್ ತೆಗೆದುಕೊಂಡರು. ವಿಡಿಯೊ ರೀಪ್ಲೆನಲ್ಲಿ ಚೆಂಡು ಬ್ಯಾಟ್‌ಗೆ ತಾಗಿರುವುದು ಕಂಡು ಬಂದಿತ್ತು. ಆ ಮೂಲಕ ಮೂರನೇ ಅಂಪೈರ್ ಟಿವಿ ಸ್ಕ್ರೀನ್ ಮೇಲೆ ಔಟ್ ತೀರ್ಪು ಪ್ರಕಟಿಸಿದರು. ಈ ವೇಳೆ ನಾಯಕ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ರಿಷಭ್ ಪಂತ್‌ಗಿಂತ ಸಂಜು ಸ್ಯಾಮ್ಸನ್ ಉತ್ತಮ ವಿಕೆಟ್ ಕೀಪರ್
ಇದರ ಬೆನ್ನಲ್ಲೆ ಸಂಜು ಸ್ಯಾಮ್ಸನ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದರು. "ರಿಷಭ್ ಪಂತ್‌ಗಿಂತ ಸಂಜು ಸ್ಯಾಮ್ಸನ್ ಅತ್ಯುತ್ತಮ ವಿಕೆಟ್ ಕೀಪರ್. ಪಂತ್ ಡಿಆರ್‌ಎಸ್ ಕರೆಗಳನ್ನು ಪರಿಪೂರ್ಣವಾಗಿ ತೆಗೆದುಕೊಳ್ಳುವುದು ತುಂಬಾ ಅಪರೂಪ ಹಾಗೂ ಸುಲಭವಾದ ಕ್ಯಾಚ್‌ಗಳನ್ನು ಕೈಚೆಲ್ಲುತ್ತಾರೆ. ಟಿ20 ಸ್ವರೂಪದಲ್ಲಿ ಸಂಜು ಇರುವುದು ನಮಗೆ ಖುಷಿ ತಂದಿದೆ," ಎಂದು ಅಭಿಮಾನಿ ಟ್ವೀಟ್ ಮಾಡಿದ್ದಾರೆ.
"ಸಂಜು ಸ್ಯಾಮ್ಸನ್ ಅವರಿಂದ ಅಸಾಧಾರಣ ಕ್ಯಾಚ್ ಇದಾಗಿದೆ. ಜೋಸ್ ಬಟ್ಲರ್ ದೃಷ್ಟಿಹೀನರಾಗಿ ಕಂಡಿದ್ದಾರೆ. ಚೆಂಡು ಸ್ಪಿನ್ ಆಗದೆ ನೇರವಾಗಿ ಸಾಗುತ್ತಿತ್ತು. ಈ ವೇಳೆ ಸಂಜು ಸ್ಯಾಮ್ಸನ್ ತಾನು ಪಡೆದಿದ್ದ ಕ್ಯಾಚ್ ಅನ್ನು ಸುಲಭವಾಗಿ ಕಾಣುವಂತೆ ಮಾಡಿದ್ದರು ಹಾಗೂ ಪರಿಪೂರ್ಣ ಡಿಆರ್‌ಎಸ್ ಮೂಲಕ ಜೀಸ್ ಬಟ್ಲರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು," ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.
171 ರನ್‌ಗಳನ್ನು ಕಲೆ ಹಾಕಿದ ಇಂಗ್ಲೆಂಡ್
ಜೋಸ್ ಬಟ್ಲರ್ ವಿಕೆಟ್ ಒಪ್ಪಿಸಿದ ಹೊರತಾಗಿಯೂ ಬೆನ್ ಡಕೆಟ್ (51 ರನ್) ಅರ್ಧಶತಕ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (43 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್ ಕಳೆದುಕೊಂಡು 171 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 172 ರನ್‌ಗಳ ಗುರಿಯನ್ನು ನೀಡಿತು.