IND vs ENG: ಚಾಂಪಿಯನ್ಸ್ ಟ್ರೋಫಿಗೆ ವರುಣ್ ಚಕ್ರವರ್ತಿ? ರೋಹಿತ್ ಶರ್ಮಾ ಹೇಳಿದ್ದಿದು!
Rohit Sharma on Varun Chakravarthy: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ತೋರಿದರೆ, ಅವರನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಯೂ ಆಡಿಸುವ ಸಾಧ್ಯತೆ ಇದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
![Rohit Sharma-Varun Chakravarthy](https://cdn-vishwavani-prod.hindverse.com/media/images/Rohit_Sharma-Varun_Chakravarthy.max-1280x720.jpg)
![Profile](https://vishwavani.news/static/img/user.5c7ca8245eec.png)
ನಾಗ್ಪುರ: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ (IND vs ENG) ಸರಣಿಯಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ಹೇಳಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿಯೂ ಇವರಿಗೆ ಅವಕಾಶ ಸಿಗಬಹುದು ಎಂದು ಸುಳಿವು ನೀಡಿದ್ದಾರೆ.
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಬಳಿಕ ಗುರುವಾರ ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ ಮೊದಲನೇ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಆಡಲಿದೆ.
ಗಾಯಕ್ಕೆ ತುತ್ತಾಗಿರುವ ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಅವರು ಲಭ್ಯರಾಗುವ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ.
IND vs ENG: ಯಾವ ರೀತಿಯ ಪ್ರಶ್ನೆ ಇದು? ಪ್ರತ್ರಕರ್ತನ ವಿರುದ್ಧ ಕಿಡಿಕಾರಿದ ರೋಹಿತ್ ಶರ್ಮಾ!
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ವರುಣ್ ಚಕ್ರವರ್ತಿ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ ಹಾಗೂ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಸರಣಿಯಲ್ಲಿ ಅಸಾಧಾರಣ ಬೌಲಿಂಗ್ ಪ್ರದರ್ಶನ ತೋರಿದ್ದ ವರುಣ್ ಚಕ್ರವರ್ತಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇದಕ್ಕೂ ಮುನ್ನ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ 6 ಪಂದ್ಯಗಳಿಂದ 18 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ಫಲವಾಗಿ ಇಂಗ್ಲೆಂಡ್ ವಿರುದ್ದದ ಟಿ20ಐ ಸರಣಿಯ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
ವರುಣ್ ಚಕ್ರವರ್ತಿ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?
"ವರುಣ್ ಚಕ್ರವರ್ತಿ ಅವರು ತುಂಬಾ ವಿಭಿನ್ನವಾಗಿ ಕಾಣುತ್ತಿದ್ದಾರೆ ಹಾಗೂ ಅವರಿಂದ ಏನು ಮಾಡಿಸಬಹುದು ಎಂಬುದನ್ನು ನಾವು ನೋಡುತ್ತಿದ್ದೇವೆ. ಇದು ವಿಭಿನ್ನ ಸ್ವರೂಪ ಎಂದು ನನಗೆ ಅರ್ಥವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಚಿಂತಿಸುತ್ತಿಲ್ಲ. ಅವರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ, ತದ ನಂತರ ಟೂರ್ನಿಯ ಸೇರಿಸುವ ಬಗ್ಗೆ ಯೋಚಿಸುತ್ತೇನೆ," ಎಂದು ರೋಹಿತ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
IND vs ENG: ಮೊದಲನೇ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ XI ಪ್ರಕಟ!
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡಕ್ಕೆ ವರುಣ್ ಚಕ್ರವರ್ತಿ ಬಂದರೆ, ಚೆನ್ನೈ ಮೂಲದ ಸ್ಪಿನ್ನರ್ ಪಾಲಿಗೆ ಎರಡನೇ ಐಸಿಸಿ ಟೂರ್ನಿಯಾಗಿದೆ. ಇದಕ್ಕೂ ಮುನ್ನ ಅವರು 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಆಡಿದ್ದರು. ಆದರೆ, ವರುಣ್ ಚಕ್ರವರ್ತಿ ಪಾಲಿಗೆ ಟಿ20 ವಿಶ್ವಕಪ್ ಟೂರ್ನಿ ಉತ್ತಮವಾಗಿರಲಿಲ್ಲ. ಏಕೆಂದರೆ ಅವರಿಂದ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.
ಚಾಂಪಿಯನ್ಸ್ ಟ್ರೋಫಿ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ