ದುಬೈ: ಭಾರತದ ವಿರುದ್ಧ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಟೂರ್ನಿಯ ಫೈನಲ್ ಪಂದ್ಯದಿಂದ ಹೊರಗುಳಿದ ಕಾರಣ ನ್ಯೂಜಿಲೆಂಡ್ ತಂಡದ ವೇಗಿ ಮ್ಯಾಟ್ ಹೆನ್ರಿ (Matt Henry) ಕಣ್ಣೀರಿಟ್ಟರು. ಇವರು ಭಾರತದ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದರು. ಆದರೆ, ಭುಜದ ಕಾರಣ ಅವರು ಇದೀಗ ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಬದಲು ಮತ್ತೊರ್ವ ಯುವ ವೇಗಿ ನೇಥನ್ ಸ್ಮಿತ್ ಕಿವೀಸ್‌ನ ಆಡುವ ಬಳಗವನ್ನು ಸೇರಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾಟ್ ಹೆನ್ರಿ ಭುಜದ ಗಾಯಕ್ಕೆ ತುತ್ತಾಗಿದ್ದರು. ಅವರು ಫೀಲ್ಡಿಂಗ್ ವೇಳೆ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ತಮ್ಮ ಭುಜಕ್ಕೆ ತಗುಲಿಸಿಕೊಂಡಿದ್ದರು. ಆದರೆ, ಫೈನಲ್ ಪಂದ್ಯಕ್ಕೂ ಮುನ್ನ ಅವರು ಗುಣಮುಖರಾಗದ ಕಾರಣ ಪ್ಲೇಯಿಂಗ್ XIನಿಂದ ಹೊರಗುಳಿಯಬೇಕಾಯಿತು.
ಭಾರತದ ವಿರುದ್ಧದ ಪಂದಕ್ಕೂ ಮುನ್ನ ಶನಿವಾರ ಮ್ಯಾಟ್ ಹೆನ್ರಿ ಅವರು ಫಿಟ್‌ನೆಸ್‌ಗೆ ಒಳಗಾಗಲಿದ್ದಾರೆಂದು ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಹೇಳಿದ್ದರು. ಭಾನುವಾರ ಪಂದ್ಯಕ್ಕೂ ಮುನ್ನ ಮ್ಯಾಟ್ ಹೆನ್ರಿ ಬೌಲಿಂಗ್ ಅಭ್ಯಾಸ ನಡೆಸಿದ್ದರು. ಆದರೆ, ಅವರು ಬೌಲಿಂಗ್‌ನಲ್ಲಿ ಸಂಪೂರ್ಣ ಫಿಟ್ ಆಗಿ ಇರುವಂತೆ ಕಂಡಿರಲಿಲ್ಲ. ಗರಿಷ್ಠ ಪ್ರಯತ್ನ ನಡೆಸಿದ ಹೊರತಾಗಿಯೂ ಮ್ಯಾಟ್ ಹೆನ್ರಿಗೆ ಫೈನಲ್ ಪಂದ್ಯವನ್ನು ಆಡಲು ಕಿವೀಸ್ ಟೀಮ್ ಮ್ಯಾನೇಜ್‌ಮೆಂಟ್ ಗ್ರೀನ್ ಸಿಗ್ನಲ್ ನೀಡಲಿಲ್ಲ. ಈ ವೇಳೆ ಕಣ್ಣೀರಿಡುತ್ತಾ ಮ್ಯಾಟ್ ಹೆನ್ರಿ ಮೈದಾನವನ್ನು ತೊರೆದರು. ತಂಡದ ಕೋಚ್ ಗ್ಯಾರಿ ಸ್ಟೀಡ್ ಹಾಗೂ ಬೌಲಿಂಗ್ ಕೋಚ್ ಜಾಕೋಬ್ ಓರಾಮ್ ವೇಗಿಯನ್ನು ಸಮಾಧಾನ ಪಡಿಸಿದರು.
IND vs NZ: ʻಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಭಾರತʼ-ಸೌರವ್ ಗಂಗೂಲಿ!
ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ ಮ್ಯಾಟ್ ಹೆನ್ರಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಆ ಮೂಲಕ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮ್ಯಾಟ್ ಹೆನ್ರಿ ಅಗ್ರ ಸ್ಥಾನದಲ್ಲಿದ್ದಾರೆ. ಭಾರತದ ವಿರುದ್ದ ಕೊನೆಯ ಲೀಗ್ ಪಂದ್ಯದಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ಮಿಂಚಿದ್ದರು. ಅವರು ಆಡಿದ್ದ ಬೌಲ್ ಮಾಡಿದ 10 ಓವರ್‌ಗಳಲ್ಲಿ 42 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದ್ದರು. ಇವರು ಈ ಪಂದ್ಯದಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಸೇರಿದಂತೆ 5 ವಿಕೆಟ್‌ಗಳನ್ನು ಕಬಳಿಸಿದ್ದರು.
ಫೈನಲ್ ಹಣಾಹಣಿಯಲ್ಲಿ ಮ್ಯಾಟ್ ಹೆನ್ರಿ ಸ್ಥಾನದಲ್ಲಿ ನೇಥನ್ ಸ್ಮಿತ್ ಆಡುತ್ತಿದ್ದಾರೆ. ನೇಥನ್ ಸ್ಮಿತ್ ಅವರು ಆಡಿದ 7 ಪಂದ್ಯಗಳಿಂದ 41.71ರ ಸರಾಸರಿಯಲ್ಲಿ ಹಲವು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ತಮ್ಮ ಮೊದಲನೇ ಪಂದ್ಯದಲ್ಲಿ ಅಘಾ ಸಲ್ಮಾನ್ ಅವರ ವಿಕೆಟ್ ಅನ್ನು ಕಿತ್ತಿದ್ದರು.
ಇತ್ತಂಡಗಳ ಪ್ಲೇಯಿಂಗ್ XI
ನ್ಯೂಜಿಲೆಂಡ್ : ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ವಿಲಿಯಂ ರೂರ್ಕ್, ನೇಥನ್ ಸ್ಮಿತ್
ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ