ದುಬೈ: ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 5 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಲಗ್ಗೆ ಇಟ್ಟಿದೆ. ಇದರ ಜೊತೆಗೆ ಕಾಂಗರೂ ಪಡೆಯ ವಿರುದ್ಧ 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಮಂಗಳವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ್ದ 265 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ, ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಎಲ್ಲರ ಗಮನ ಸೆಳೆದರು. ಅವರು ತಾವು ಚೇಸ್ ಮಾಸ್ಟರ್ ಏಕೆಂದು ಈ ಇನಿಂಗ್ಸ್‌ನಲ್ಲಿ ಸಾಬೀತುಪಡಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ, 98 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 84 ರನ್ ಗಳಿಸಿದರು. ಆ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IND vs AUS: ಮೊದಲನೇ ಸೆಮಿಫೈನಲ್‌ಗೆ ಟರ್ನಿಂಗ್ ಪಾಯಿಂಟ್ ತಿಳಿಸಿದ ರಾಬಿನ್ ಉತ್ತಪ್ಪ!
ಕೊಹ್ಲಿ-ಅಯ್ಯರ್ ನಿರ್ಣಾಯಕ ಜೊತೆಯಾಟ
ಶುಭಮನ್ ಗಿಲ್ (8) ಹೊರತುಪಡಿಸಿ ಭಾರತ ತಂಡದ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದರು. ಮೊದಲಿಗೆ ರೋಹಿತ್ ಶರ್ಮಾ 28 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟು ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ನಾಲ್ಕನೇ ವಿಕೆಟ್‌ಗೆ ನಿರ್ಣಾಯಕ ಜೊತಯಾಟವನ್ನು ಆಡಿದರು. ಈ ಜೋಡಿ 91 ರನ್ ಗಳಿಸಿ ಭಾರತ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿತು. 45 ರನ್ ಗಳಿಸಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು.
ಅಬ್ಬರಿಸಿದ ಮಧ್ಯಮ ಕ್ರಮಾಂಕ
ಈ ಪಂದ್ಯದಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಮೊದಲಿಗೆ ಅಕ್ಷರ್ ಪಟೇಲ್ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕೆಎಲ್ ರಾಹುಲ್ 34 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 28 ರನ್ ಗಳಿಸಿದರು. ಆ ಮೂಲಕ ಭಾರತ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಭಾರತ 48.1 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿ ಗೆದ್ದು ಸಂಭ್ರಮಿಸಿತು. ಆಸೀಸ್ ಪರ ನೇಥನ್ ಎಲ್ಲಿಸ್ ಹಾಗೂ ಆಡಂ ಝಾಂಪ ತಲಾ ಎರಡೆರಡು ವಿಕೆಟ್ ಪಡೆದರು.
ಭಾರತಕ್ಕೆ ಫೈನಲ್‌ನಲ್ಲಿ ಎದುರಾಳಿ ಯಾವ ತಂಡ?
ಈ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯ ಬುಧವಾರ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಈ ಪಂದ್ಯವನ್ನು ಗೆದ್ದ ತಂಡದ ವಿರುದ್ಧ ಟೀಮ್ ಇಂಡಿಯಾ, ಮಾರ್ಚ್ 9 ರಂದು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಲಿದೆ.
264 ರನ್ ಕಲೆ ಹಾಕಿದ ಆಸ್ಟ್ರೇಲಿಯಾ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ, ಮೊಹಮ್ಮದ್ ಶಮಿ ಸೇರಿದಂತೆ ಭಾರತೀಯ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಗೆ ನಲುಗಿದರೂ ನಾಯಕ ಸ್ಟೀವನ್ ಸ್ಮಿತ್ (73 ರನ್) ಹಾಗೂ ಅಲೆಕ್ಸ್ ಕೇರಿ (61) ಅವರ ಅರ್ಧಶತಕಗಳ ಬಲದಿಂದ 49.3 ಓವರ್‌ಗಳಿಗೆ 264 ರನ್‌ಗಳನ್ನು ಕಲೆ ಹಾಕಿತು.
ಆಸ್ಟ್ರೇಲಿಯಾ ತಂಡ ನಾಲ್ಕ ರನ್ ಇರುವಾಗಲೇ ಓಪನರ್ ಕೂಪರ್ ಕಾನ್ಲಿ ಅವರನ್ನು ಕಳೆದುಕೊಂಡಿತು. ಮತ್ತೊಂದು ಕಡೆ ಸ್ಪೋಟಕ ಆಟವಾಡುತ್ತಿದ್ದ ಟ್ರಾವಿಸ್ ಹೆಡ್ 33 ಎಸೆತಗಳಲ್ಲಿ 39 ರನ್‌ಗಳನ್ನು ಕಲೆ ಹಾಕಿ ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ವಿಕೆಟ್‌ಗೆ ಜೊತೆಯಾದ ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ 56 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಂಡದ ಮೊತ್ತವನ್ನು 100 ರನ್‌ಗಳ ಗಡಿಯನ್ನು ದಾಟಿಸಿದರು. 36 ಎಸೆತಗಳಲ್ಲಿ 29 ರನ್ ಗಳಿಸಿ ಉತ್ತಮ ಆರಂಭ ಪಡೆದರೂ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.
ಸ್ಟೀವನ್ ಸ್ಮಿತ್-ಅಲೆಕ್ಸ್ ಕೇರಿ ಅರ್ಧಶತಕ
ಆಸ್ಟ್ರೇಲಿಯಾ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ನಾಯಕ ಸ್ಟೀವನ್ ಸ್ಮಿತ್ ಹಾಗೂ ಅಲೆಕ್ಸ್ ಕೇರಿ ಮೊದಲಿಗೆ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟ್ ಮಾಡಿದ ಸ್ಮಿತ್, 96 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 73 ರನ್ ಗಳಿಸಿ ತಂಡದ ಮೊತ್ತವನ್ನು 200ರ ಸನಿಹ ತಂದು ಮೊಹಮ್ಮದ್ ಶಮಿಗೆ ಕ್ಲೀನ್ ಬೌಲ್ಡ್ ಆದರು. ಸ್ಮಿತ್ ವಿಕೆಟ್ ಒಪ್ಪಿಸಿದ ಬಳಿಕ ಅಲೆಕ್ಸ್ ಕೇರಿ ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರು ಆಡಿದ 57 ಎಸೆತಗಳಲ್ಲಿ 61 ರನ್ ಗಳಿಸಿದರು. ಆದರೆ, 48ನೇ ಓವರ್‌ನಲ್ಲಿ ಎರಡನೇ ರನ್ ಕದಿಯಲು ಪ್ರಯತ್ನಿಸಿ ರನ್‌ಔಟ್ ಆದರು.
ಭಾರತ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್ ಕಿತ್ತರು.
IND vs AUS: ರಾಹುಲ್ ದ್ರಾವಿಡ್‌ರ ದೀರ್ಘಾವಧಿ ಕ್ಯಾಚ್‌ಗಳ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಸ್ಕೋರ್ ವಿವರ
ಆಸ್ಟ್ರೇಲಿಯಾ: 49.3 ಓವರ್‌ಗಳಿಗೆ 264-10 (ಸ್ಟೀವನ್ ಸ್ಮಿತ್ 73, ಅಲೆಕ್ಸ್ ಕೇರಿ 61, ಟ್ರಾವಿಸ್ ಹೆಡ್ 39; ಮೊಹಮ್ಮದ್ ಶಮಿ 48ಕ್ಕೆ 3, ವರುಣ್ ಚಕ್ರವರ್ತಿ 49ಕ್ಕೆ 2, ರವೀಂದ್ರ ಜಡೇಜಾ 40ಕ್ಕೆ 2
ಭಾರತ: 48.1 ಓವರ್‌ಗಳಿಗೆ 267-6 (ವಿರಾಟ್ ಕೊಹ್ಲಿ 84, ಶ್ರೇಯಸ್ ಅಯ್ಯರ್ 45, ಕೆಎಲ್ ರಾಹುಲ್ 42, ಹಾರ್ದಿಕ್ ಪಾಂಡ್ಯ 28, ರೋಹಿತ್ ಶರ್ಮಾ 28; ನೇಥನ್ ಎಲ್ಲಿಸ್ 49 ಕ್ಕೆ 2, ಆಡಂ ಝಾಂಪ 60ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ವಿರಾಟ್ ಕೊಹ್ಲಿ