ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

IND vs AUS: ರಾಹುಲ್‌ ದ್ರಾವಿಡ್‌ರ ದೀರ್ಘಾವಧಿ ಕ್ಯಾಚ್‌ಗಳ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

Virat Kohli takes 335 Catches: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ (ವಿಕೆಟ್‌ ಕೀಪರ್‌ ಅಲ್ಲದ) ಸಾಧನೆಗೆ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ. ಆ ಮೂಲಕ ಟೀಮ್‌ ಇಂಡಿಯಾ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರನ್ನು ಹಿಂದಿಕ್ಕಿದ್ದಾರೆ.

335 ಕ್ಯಾಚ್‌ಗಳೊಂದಿಗೆ ದ್ರಾವಿಡ್‌ರ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ವಿರಾಟ್‌ ಕೊಹ್ಲಿಯ ಕ್ಯಾಚ್‌ಗಳ ದಾಖಲೆ

Profile Ramesh Kote Mar 4, 2025 7:22 PM

ದುಬೈ: ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ತಮ್ಮ ಬ್ಯಾಟಿಂಗ್‌ ಮೂಲಕ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಆದರೆ, ಇದೀಗ ಅವರು ಫೀಲ್ಡಿಂಗ್‌ನಲ್ಲಿಯೂ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ (ವಿಕೆಟ್‌ ಕೀಪರ್‌ ಅಲ್ಲದ) ಸಾಧನೆಗೆ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ. ಆ ಮೂಲಕ ಟೀಮ್‌ ಇಂಡಿಯಾ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರನ್ನು ಹಿಂದಿಕ್ಕಿದ್ದಾರೆ.

ಮಂಗಳವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ದದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಇನಿಂಗ್ಸ್‌ನ 27ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಜಾಶ್‌ ಇಂಗ್ಲಿಸ್‌ ಕ್ಯಾಚ್‌ ಪಡೆಯುವ ಮೂಲಕ ವಿರಾಟ್‌ ಕೊಹ್ಲಿ, ಮಾಜಿ ನಾಯಕ ರಾಹುಲ್‌ ದ್ರಾವಿಡ್‌ರ ಕ್ಯಾಚ್‌ಗಳ ದಾಖಲೆಯನ್ನು ಮುರಿದಿದ್ದಾರೆ.

IND vs AUS ಸೆಮಿಫೈನಲ್‌ ಪಂದ್ಯ ಮಳೆಯಿಂದ ರದ್ದಾದರೆ ಏನು? ಫೈನಲ್‌ಗೆ ಯಾವ ತಂಡ?

ಇತಿಹಾಸ ಬರೆದ ವಿರಾಟ್‌ ಕೊಹ್ಲಿ

ಜಾಶ್‌ ಇಂಗ್ಲಿಸ್‌ ಅವರ ಕ್ಯಾಚ್‌ ಅನ್ನು ಶಾರ್ಟ್‌ ಕವರ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಪಡೆಯುವ ಮೂಲಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತದ (ವಿಕೆಟ್‌ ಕೀಪರ್‌ ಅಲ್ಲದ) ಆಟಗಾರ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಪಟ್ಟಿಯಲ್ಲಿ ಮಾಜಿ ನಾಯಕ ಮೊಹಮ್ಮದ್‌ ಅಝರುದ್ದೀನ್‌ ದಾಖಲೆ ಮುರಿದ ಕೆಲವೇ ದಿನಗಳಲ್ಲಿ ವಿರಾಟ್‌ ಕೊಹ್ಲಿ ಮತ್ತೊಂದು ಮಹತ್ವದ ದಾಖಲೆಯನ್ನು ಬರೆದಿದ್ದಾರೆ.

ಎಲ್ಲಾ ಸ್ವರೂಪದಲ್ಲಿಯೂ ವಿರಾಟ್‌ ಕೊಹ್ಲಿ 335 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 334 ಕ್ಯಾಚ್‌ಗಳನ್ನು ಪಡೆದಿರುವ ರಾಹುಲ್‌ ದ್ರಾವಿಡ್‌ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಭಾರತದ ಪರ ದ್ರಾವಿಡ್‌ 332 ಕ್ಯಾಚ್‌ಗಳನ್ನು ಪಡೆದಿದ್ದರೆ, ಏಷ್ಯಾ XI ಪರ ಆಡುವಾಗ ಇನ್ನುಳಿದ ಎರಡು ಕ್ಯಾಚ್‌ ಪಡೆದಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ರಾಹುಲ್‌ ದ್ರಾವಿಡ್‌ ಬಿಟ್ಟರೆ ಭಾರತದ ಪರ ಯಾವುದೇ ಆಟಗಾರ 300ಕ್ಕೂ ಅಧಿಕ ಕ್ಯಾಚ್‌ಗಳನ್ನು ಪಡೆದಿಲ್ಲ.



ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಆಟಗಾರರು (ವಿಕೆಟ್‌ ಕೀಪರ್‌ ಅಲ್ಲದ)

ವಿರಾಟ್‌ ಕೊಹ್ಲಿ: 336 ಕ್ಯಾಚ್‌ಗಳು

ರಾಹುಲ್‌ ದ್ರಾವಿಡ್‌: 334 ಕ್ಯಾಚ್‌ಗಳು

ಮೊಹ್ಮಮದ್‌ ಅಝರುದ್ದೀನ್‌: 261 ಕ್ಯಾಚ್‌ಗಳು

ಸಚಿನ್‌ ತೆಂಡೂಲ್ಕರ್‌: 256 ಕ್ಯಾಚ್‌ಗಳು

ರೋಹಿತ್‌ ಶರ್ಮಾ: 223 ಕ್ಯಾಚ್‌ಗಳು

ಅಗ್ರ ಸ್ಥಾನದಲ್ಲಿರುವ ಮಹೇಲಾ ಜಯವರ್ಧನೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಕ್ರಿಕೆಟಿಗರ ಪಟ್ಟಿಯಲ್ಲಿ ಶ್ರೀಲಂಕಾ ದಿಗ್ಗಜ ಮಹೇಲಾ ಜಯವರ್ಧನೆ ಅಗ್ರ ಸ್ಥಾನದಲ್ಲಿದ್ದಾರೆ. ಅವರು 440 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್‌ (354) ಹಾಗೂ ರಾಸ್‌ ಟೇಲರ್‌ (351) ಮೂರನೇ ಸ್ಥಾನದಲ್ಲಿದ್ದಾರೆ.

IND vs AUS: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ

ಜಾಶ್‌ ಇಂಗ್ಲಿಸ್‌ ಕ್ಯಾಚ್‌ ಬಳಿಕ ನೇಥನ್‌ ಎಲ್ಲಿಸ್‌ ಅವರ ಕ್ಯಾಚ್‌ ಅನ್ನು ಕೂಡ ವಿರಾಟ್‌ ಕೊಹ್ಲಿ ಪಡೆದರು. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ 161 ಒಡಿಐ ಕ್ಯಾಚ್‌ ಹೊಂದಿದ್ದು, ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಗ್‌ (160) ಅವರನ್ನು ಹಿಂದಿಕ್ಕಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 121 ಕ್ಯಾಚ್‌ಗಳನ್ನು ಪಡೆದಿರುವ ವಿರಾಟ್‌ ಕೊಹ್ಲಿ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ರಾಹುಲ್‌ ದ್ರಾವಿಡ್‌ (210) ಹಾಗೂ ವಿವಿಎಸ್‌ ಲಕ್ಷ್ಮಣ್‌ (135) ಅವರು ಈ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿದ್ದಾರೆ. ಇನ್ನು ಕೊಹ್ಲಿ ಟಿ20ಐ ಕ್ರಿಕೆಟ್‌ನಲ್ಲಿ 54 ಕ್ಯಾಚ್‌ ಪಡೆದಿದ್ದಾರೆ.