Namma Metro: ನಮ್ಮ ಮೆಟ್ರೋದಲ್ಲಿ ಮಹಿಳೆಯರ ಗುಪ್ತ ಚಿತ್ರೀಕರಣ, ಇನ್‌ಸ್ಟಗ್ರಾಂನಲ್ಲಿ ಅಪ್‌ಲೋಡ್!
Namma Metro: "ಫೈಂಡಿಂಗ್ ಬ್ಯೂಟಿಫುಲ್ ಗರ್ಲ್ಸ್ ಇನ್ ನಮ್ಮ ಮೆಟ್ರೋ" ಎಂಬಂತಹ ಆತಂಕಕಾರಿ ಶೀರ್ಷಿಕೆಗಳೊಂದಿಗೆ ಹಲವು ಮಹಿಳೆಯರ ವಿಡಿಯೊ ಕ್ಲಿಪ್‌ಗಳನ್ನು ಹೊಂದಿವೆ. ಸೋಶಿಯಲ್ ಮೀಡಿಯಾ Xನಲ್ಲಿ ಬಳಕೆದಾರರು ಈ ವಿಕೃತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿಯ (Bengaluru News) ನಮ್ಮ ಮೆಟ್ರೋದಲ್ಲಿ (Namma Metro) ಓಡಾಡುವ ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಚಿತ್ರ, ವಿಡಿಯೋಗಳನ್ನು ಅಶ್ಲೀಲ ರೀತಿಯಲ್ಲಿ ಮಾಡಿಕೊಂಡು ಅದನ್ನು ಇನ್‌ಸ್ಟಾಗ್ರಾಂನಲ್ಲಿ (Instagram) ಅಪ್‌ಲೋಡ್ ಮಾಡುತ್ತಿರುವ ಆಘಾತಕಾರಿ ಸಂಗತಿ ವರದಿಯಾಗಿದೆ. "ಬೆಂಗಳೂರು ಮೆಟ್ರೋ ಕ್ಲಿಕ್ಸ್" (@metro_chicks) ಎಂಬ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹೀಗೆ ಮಾಡಲಾಗುತ್ತಿದೆ ಎಂದು ಗೊತ್ತಾಗಿದ್ದು, ಈ ಕುರಿತು ಅನೇಕರು ನಮ್ಮ ಮೆಟ್ರೋ ಆಡಳಿತ ಬಿಎಂಆರ್‌ಸಿಎಲ್ (BMRCL) ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.
5,605 ಫಾಲೋವರ್ಸ್‌ಗಳನ್ನು ಹೊಂದಿರುವ ಈ ಸೋಶಿಯಲ್ ಮೀಡಿಯಾ ಖಾತೆ ಮತ್ತು ಅದರ ಸಂಬಂಧಿತ ಟೆಲಿಗ್ರಾಮ್ ಚಾನೆಲ್ (1,188 ಚಂದಾದಾರರು) 13 ವೀಡಿಯೊಗಳನ್ನು ಒಳಗೊಂಡಿದೆ. ಅವುಗಳಲ್ಲಿ ಕೆಲವು "ಫೈಂಡಿಂಗ್ ಬ್ಯೂಟಿಫುಲ್ ಗರ್ಲ್ಸ್ ಇನ್ ನಮ್ಮ ಮೆಟ್ರೋ" ಎಂಬಂತಹ ಆತಂಕಕಾರಿ ಶೀರ್ಷಿಕೆಗಳೊಂದಿಗೆ ಹಲವು ಮಹಿಳೆಯರ ವಿಡಿಯೊ ಕ್ಲಿಪ್‌ಗಳನ್ನು ಹೊಂದಿವೆ. ವೀಡಿಯೊಗಳ ಕಾಮೆಂಟ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
Xನಲ್ಲಿ ಬಳಕೆದಾರರು ಈ ವಿಕೃತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ. ದೂರು ನೀಡಿದವರು ಮೆಟ್ರೋ ಅಧಿಕಾರಿಗಳು, ನಾಗರಿಕ ಗುಂಪುಗಳು ಮತ್ತು ಪ್ರಭಾವಿಗಳನ್ನು ಟ್ಯಾಗ್ ಮಾಡಿದ್ದಾರೆ. X ಬಳಕೆದಾರ ದಟ್ ನಾಯರ್ ಗೈ (@surajv369) ಎಂಬವರು ಇದನ್ನು "ಮಹಿಳಾ ಪ್ರಯಾಣಿಕರಿಗೆ ತುಂಬಾ ಭಯಾನಕ ಮತ್ತು ಅಪಾಯಕಾರಿ" ಎಂದು ಕರೆದಿದ್ದು, ತಕ್ಷಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರ್ಶ್ ಖಾರ್ವಿ (@Adarshkharvi1) ಮತ್ತು ಅಭಯ್ ಚತುರ್ವೇದಿ (@AbhayLearner) ಎಂಬ X ಬಳಕೆದಾರರು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ, "ಈ ಕಿಡಿಗೇಡಿಯನ್ನು ತಕ್ಷಣ ಜೈಲಿನಲ್ಲಿ ಹಾಕಬೇಕು" ಎಂದು ಹೇಳಿದ್ದಾರೆ.
ಅಕೌಂಟ್‌ನಲ್ಲಿರುವ ಹೆಚ್ಚಿನ ಫಾಲೋವರ್ಸ್ ಹಾಗೂ ಅಂಥವರ ಮನಸ್ಥಿತಿಯ ಬಗ್ಗೆ ಅನೇಕ ಬಳಕೆದಾರರು ಆಘಾತ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಒಂದು ಜಾಲವೇ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚವಾಣ್, ಈ ಅಕೌಂಟ್ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಇದರ ವಿರುದ್ಧ ತಕ್ಷಣವೇ ಪೊಲೀಸ್ ದೂರು ದಾಖಲಿಸುತ್ತೇವೆ ಎಂದಿದ್ದಾರೆ. "ಆ ಖಾತೆಯನ್ನು ನಿಷ್ಕ್ರಿಯ ಮಾಡಲು ಸೈಬರ್ ದೂರು ಸಹ ದಾಖಲಿಸಲಾಗುವುದು. ನಮ್ಮ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ವಿಷಯವನ್ನು ನಾವು ಸಹಿಸುವುದಿಲ್ಲ" ಎಂದು ಚವಾಣ್ ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: Namma Metro: ನಮ್ಮ ಮೆಟ್ರೋದಲ್ಲಿ ಊಟ ಮಾಡಿದ ಮಹಿಳೆಗೆ 500 ರೂ. ದಂಡ