ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ತೊರೆದ ಬಗ್ಗೆ ಗುಜರಾತ್ ಟೈಟನ್ಸ್ (GT) ತಂಡದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಭಾವುಕರಾಗಿದ್ದಾರೆ. ತನ್ನ ಪಾಲಿನ ಮೊದಲ ಐಪಿಎಲ್ ಟೂರ್ನಿಯಿಂದ ಇಲ್ಲಿಯವರೆಗೂ ಆರ್‌ಸಿಬಿ ಪರ ಆಡುವಾಗ ಕಠಿಣ ಸಂದರ್ಭಗಳಲ್ಲಿ ವಿರಾಟ್ ಕೊಹ್ಲಿ ನನಗೆ ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ ಎಂದು ಹಿರಿಯ ವೇಗಿ ಹೇಳಿದ್ದಾರೆ. 2025ರ ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರು ಫ್ರಾಂಚೈಸಿ ಮೊಹಮ್ಮದ್ ಸಿರಾಜ್ ಅವರನ್ನು ಬಿಡುಗಡೆ ಮಾಡಿತ್ತು. ನಂತರ ಹರಾಜಿನಲ್ಲಿ ಸಿರಾಜ್ ಅವರನ್ನು ಗುಜರಾತ್ ಟೈಟನ್ಸ್ ತಂಡ 12.25 ಕೋಟಿ ರೂ. ಗಳಿಗೆ ಖರೀದಿಸಿತ್ತು.
ಮೊಹಮ್ಮದ್ ಸಿರಾಜ್ 2017ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದ್ದರು. ನಂತರ 2018ರ ಐಪಿಎಲ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಸಿರಾಜ್ ಅವರನ್ನು ಆರ್‌ಸಿಬಿ 2.20 ಕೋಟಿ ರೂ. ಗಳಿಗೆ ಖರೀದಿಸಿತ್ತು. ನಂತರ ಬಲಗೈ ವೇಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟು 7 ಆವೃತ್ತಿಗಳಲ್ಲಿದ್ದಾರೆ. ಆರ್‌ಸಿಬಿ ತಂಡದಲ್ಲಿಆಡುವಾಗ ಆರಂಭದಲ್ಲಿ ಮೊಹಮ್ಮದ್ ಸಿರಾಜ್ ಚೆಂಡಿನಲ್ಲಿ ತುಂಬಾ ದುಬಾರಿಯಾಗಿದ್ದರು. ಆದರೂ ಅವರನ್ನು ವಿರಾಟ್ ಕೊಹ್ಲಿ ಬೆಂಬಲಿಸಿದ್ದರು. ತದನಂತರ ಅವರು ಮ್ಯಾಚ್ ವಿನ್ನಿಂಗ್ ಬೌಲರ್ ಆಗಿ ಪರಿವರ್ತನೆಯಾದರು.
IPL 2025: ಸಿಎಸ್‌ಕೆಯನ್ನು ಹೊರಗಿಟ್ಟು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಎಬಿಡಿ!
ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಮೊಹಮ್ಮದ್ ಸಿರಾಜ್, "ಹೊಸ ಆವೃತ್ತಿಯ ನಿಮಿತ್ತ ಗುಜರಾತ್ ಟೈಟನ್ಸ್‌ಗೆ ಸೇರಿರುವುದು ನಿಜಕ್ಕೂ ಒಳ್ಳೆಯ ಭಾವನೆಯನ್ನು ನೀಡುತ್ತಿದೆ. ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಿಟ್ಟು ಬಂದಿರುವುದು ನಿಜಕ್ಕೂ ಭಾವುಕವಾಗಿದೆ. ಏಕೆಂದರೆ, ಆರ್‌ಸಿಬಿ ತಂಡದಲ್ಲಿ ಆಡುವಾಗ ನಾನು ಎದುರಿಸಿದ್ದ ಕಠಿಣ ಸಂದರ್ಭಗಳಲ್ಲಿ ವಿರಾಟ್ ಕೊಹ್ಲಿ ನನ್ನನ್ನು ಸಾಕಷ್ಟು ಬೆಂಬಲಿಸಿದ್ದರು. ಇದೀಗ ಶುಭಮನ್ ಗಿಲ್ ಅಡಿಯಲ್ಲಿರುವ ತಂಡ ಅದ್ಭುತವಾಗಿದೆ," ಎಂದು ಶ್ಲಾಘಿಸಿದ್ದಾರೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆಂಡಿಗೆ ಎಂಜಲು ಉಜ್ಜುವುದಕ್ಕೆ ಅನುಮತಿ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧಾರವನ್ನು ಮೊಹಮ್ಮದ್ ಸಿರಾಜ್ ಸ್ವಾಗತಿಸಿದ್ದಾರೆ. 2020ರ ಐಪಿಎಲ್ ಟೂರ್ನಿಯ ವೇಳೆ, ಕೋವಿಂಡ್ -19 ಕಠಿಣ ಸಂದರ್ಭದಲ್ಲಿ ಚೆಂಡಿಗೆ ಎಂಜಲು ಉಜ್ಜುವುದನ್ನು ಬಿಸಿಸಿಐ ರದ್ದುಗೊಳಿಸಿತ್ತು.
IPL 2025: ಚೆಂಡಿಗೆ ಎಂಜಲು ಬಳಕೆ ನಿಷೇಧ ತೆರವಿಗೆ ಮುಂದಾದ ಬಿಸಿಸಿಐ
"ಇದು ಬೌಲರ್‌ಗಳ ಪಾಲಿಗೆ ಒಳ್ಳೆಯ ಸಂಗತಿ. ನಮ್ಮಂತಹ ಬೌಲರ್‌ಗಳಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ ಶೈನ್ ಕಳೆದುಕೊಂಡಿದ್ದ ವೇಳೆ ಚೆಂಡು ಬೌಲರ್‌ಗಳಿಗೆ ನೆರವು ನೀಡುವುದಿಲ್ಲ. ಈ ವೇಳೆ ಚೆಂಡಿಗೆ ಎಂಜಲು ಉಜ್ಜಿ ಶೈನ್ ಮಾಡುವುದರಿಂದ ಕೆಲವೊಮ್ಮೆ ರಿವರ್ಸ್ ಸ್ವಿಂಗ್ ಸಿಗಬಹುದು. ಈ ದೃಷ್ಟಿಯಲ್ಲಿ ಚೆಂಡಿಗೆ ಎಂಜಲು ಉಜ್ಜುವುದು ಒಳ್ಳೆಯದು. ಸಲಿವಾ ಇಲ್ಲದ ವೇಳೆ ಕೇವಲ ಶರ್ಟ್ ಎಷ್ಟೇ ಉಜ್ಜಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲದೆ ಎಂಜು ಉಜ್ಜುವುದಿಂದ ಚೆಂಡಿನ ಒಂದು ಮುಖದ ಹೊಳಪನ್ನು ಕಾಪಾಡಿಕೊಳ್ಳಬಹುದು," ಎಂದು ಗುಜರಾತ್ ಟೈಟನ್ಸ್ ವೇಗಿ ತಿಳಿಸಿದ್ದಾರೆ.
ಗುಜರಾತ್ ಟೈಟನ್ಸ್‌ಗೆ ಮೊದಲ ಎದುರಾಳಿ ಪಂಜಾಬ್
ಗುಜರಾತ್ ಟೈಟನ್ಸ್ ತಂಡ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ಎದುರು2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರು ಫ್ರಾಂಚೈಸಿ ಉಳಿಸಿಕೊಂಡಿರಲಿಲ್ಲ.