ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka Bypolls: ಉಪಚುನಾವಣೆ; ಬಾಗಲಕೋಟೆಯಲ್ಲಿ ಶೇ.68.66, ದಾವಣಗೆರೆ ದಕ್ಷಿಣದಲ್ಲಿ ಶೇ.68.43 ಮತದಾನ ದಾಖಲು

Voter Turnout: ಬಾಗಲಕೋಟೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್ ವೈ ಮೇಟಿ ನಿಧನ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಗುರುವಾರ ಉಪಚುನಾವಣೆ ನಡೆದಿದೆ. ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ನಡೆದಿದೆ ಎಂಬ ಮಾಹಿತಿ ಇಲ್ಲಿದೆ.

ಬಾಗಲಕೋಟೆ ನವನಗರದ ಮತಗಟ್ಟೆಯಲ್ಲಿ ಗುರುವಾರ ಮತ ಚಲಾಯಿಸಿದ ಮಹಿಳೆಯರು.

ಬೆಂಗಳೂರು: ರಾಜ್ಯದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ಗುರುವಾರ ಶಾಂತಿಯುತವಾಗಿ ಉಪ ಚುನಾವಣೆ ನಡೆದಿದೆ. ಸಂಜೆ 6 ವೇಳೆಗೆ ಬಾಗಲಕೋಟೆ ಕ್ಷೇತ್ರದಲ್ಲಿ ಶೇ.68.66 ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ. 68.43 ಮತದಾನವಾಗಿದೆ.

ಬಾಗಲಕೋಟೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್ ವೈ ಮೇಟಿ ನಿಧನ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವೀರಣ್ಣ ಚರಂತಿಮಠ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇಶ್ ಮೇಟಿ ಸ್ಪರ್ಧಿಸಿದ್ದರೆ, ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಟಿ ದಾಸಕರಿಯಪ್ಪ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಮರ್ಥ ಶಾಮನೂರು ಸ್ಪರ್ಧಿಸಿದ್ದಾರೆ. ಈ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮೇ 4ರಂದು ಹೊರಬೀಳಲಿದೆ.

ಮತದಾನದ ವೇಳೆ ಹಣ ಹಂಚಿಕೆ; ಎಫ್‌ಐಆರ್‌ ದಾಖಲು

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನದ ದಿನದಂದು, ಮತದಾರರಿಗೆ ಹಣ ಹಂಚಲಾಗಿದೆ ಎಂದು ಆರೋಪಕ್ಕೆ ಸಂಬಂಧಿಸಿ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆ‌ರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವಂತೆ ಮತದಾರರಿಗೆ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿ ವಿಡಿಯೋ ಹಂಚಿಕೊಂಡಿದ್ದ ರಾಜ್ಯ ಜೆಡಿಎಸ್‌, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.



ಉಪಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ಕಾಂಗ್ರೆಸ್‌ ಸರ್ಕಾರ ಮತದಾರರಿಗೆ ಹಣ ಹಂಚುತ್ತಿದೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ʼನ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವಂತೆ ಮತದಾರರಿಗೆ ಹಣ ಹಂಚಿಕೆ ಮಾಡಿದ್ದಾರೆ. ಬಾಗಲಕೋಟೆ ಉಪಚುನಾವಣೆ ವೇಳೆ ನಡೆದಿರುವ ಈ ಅಕ್ರಮದ ಕುರಿತು ಚುನಾವಣಾ ಆಯೋಗವೂ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು ಎಂದು Janata Dal Secular ಪಕ್ಷವು ಆಗ್ರಹಿಸುತ್ತೇವೆ ಎಂದು ಜೆಡಿಎಸ್‌ ಆಗ್ರಹಿಸಿತ್ತು.