ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Engineers Day 2026: ಎಂಜಿನಿಯರ್‌ಗಳು ಇನ್ಮುಂದೆ ಹೆಸರಿನ ಮುಂದೆ 'Er' ಬಿರುದು ಬಳಸಬಹುದು: ರಾಜ್ಯ ಸರ್ಕಾರ ಆದೇಶ

ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಮಹತ್ವದ ಪಾತ್ರವನ್ನು ಅರಿತು, ಸ‌ರ್ ಎಂ. ವಿಶ್ವೇಶ್ವರಯ್ಯ ರವರು ರಾಷ್ಟ್ರಕ್ಕೆ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮ ದಿನವಾದ ಸೆಪ್ಟೆಂಬರ್ 15 ನ್ನು "ಎಂಜಿನಿಯರ್‌ಗಳ ದಿನ" ವನ್ನಾಗಿ ಆಚರಿಸಲು ಹಾಗೂ ಕರ್ನಾಟಕದ ಎಂಜಿನಿಯರ್‌ಗಳು ತಮ್ಮ ಹೆಸರಿನ ಮೊದಲು "Er" ಎಂಬ ಪೂರ್ವಪ್ರತ್ಯಯವನ್ನು ಹೆಮ್ಮೆಯಿಂದ ಬಳಸಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಬೆಂಗಳೂರು: ರಾಷ್ಟ್ರೀಯ ಎಂಜಿನಿಯರ್‌ಗಳ ದಿನದಂದು (ಸೆ.15) ಕರ್ನಾಟಕದ ಎಂಜಿನಿಯರ್‌ಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಎಂಜಿನಿಯರ್‌ಗಳ ಅತ್ಯಮೂಲ್ಯವಾದ ಕೊಡುಗೆಯನ್ನು ಸ್ಮರಿಸುತ್ತಾ, ಗೌರವ ಸಮರ್ಪಣೆ ಮಾಡುವ ಸಲುವಾಗಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ರವರ ಜನ್ಮ ದಿನವಾದ "ಸೆಪ್ಟೆಂಬರ್ 15" ಅನ್ನು “ಎಂಜಿನಿಯರ್‌ಗಳ ದಿನ" (Engineers Day) ವನ್ನಾಗಿ ಆಚರಿಸಲು ಮತ್ತು ಎಂಜಿನಿಯರ್‌ಗಳ ಹೆಸರಿನ ಪೂರ್ವದಲ್ಲಿ Er (Engineer-ಅಭಿಯಂತರರು) ಎಂಬ ಶೀರ್ಷಿಕೆಯನ್ನು (Title) ಬಳಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. 1861ರ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದ ಭಾರತದ ಶ್ರೇಷ್ಠ ಎಂಜಿನಿಯರ್, ಆಧುನಿಕ ಮೈಸೂರು ರಾಜ್ಯದ ನಿರ್ಮಾತೃ ಮತ್ತು ಮಹಾನ್ ದೇಶಭಕ್ತರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ (Sir M. Visvesvaraya) ರವರು ದೇಶಕ್ಕೆ ನೀಡಿರುವ ಕೊಡುಗೆಗಳು ಅವಿಸ್ಮರಣೀಯ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ 1912 ರಿಂದ 1918 ರವರೆಗೆ ಮೈಸೂರು ರಾಜ್ಯದ 19ನೇ ದಿವಾನರಾಗಿ ಸೇವೆ ಸಲ್ಲಿಸಿದ ಮಾನ್ಯರ ದೂರದೃಷ್ಟಿಯ ಚಿಂತನೆಗಳು "ಕೈಗಾರಿಕೀಕರಣ ಇಲ್ಲವೇ ವಿನಾಶ" (Industrialize or Perish) ಎಂಬ ತತ್ವದ ಮೇಲೆ ಆಧಾರಿತವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿರುವ ಕೊಡುಗೆ, ಮಾಡಿರುವ ಸಾಧನ ಅಪಾರವಾದುದಾಗಿದೆ. ಆ ಪೈಕಿ ಎಂಜಿನಿಯರಿಂಗ್ ಮತ್ತು ನೀರಾವರಿ ಕ್ಷೇತ್ರದಲ್ಲಿ ಕೆ.ಆರ್.ಎಸ್ ಅಣೆಕಟ್ಟು (KRS Dam) ನಿರ್ಮಾಣ, ಪ್ರವಾಹದ ನೀರನ್ನು ನಿಯಂತ್ರಿಸಲು ಸ್ವಯಂಚಾಲಿತ ಫ್ಲಡ್ ಗೇಟ್‌ಗಳ ಅಳವಡಿಕೆ, ಕೈಗಾರಿಕಾ ಕ್ಷೇತ್ರದಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆ, ಮೈಸೂರಿನ ಸುಪ್ರಸಿದ್ಧ ಶ್ರೀಗಂಧದ ತೈಲ ಕಾರ್ಖಾನೆ ಮತ್ತು ಸಾಬೂನು ಕಾರ್ಖಾನೆ ಪ್ರಾರಂಭ, ಶಿಕ್ಷಣ ಮತ್ತು ಹಣಕಾಸು ಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಈಗಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಸ್ಥಾಪನೆ ಮತ್ತು ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಳಿಸಲಾಗದಂಥ ತಮ್ಮ ಛಾಪನ್ನು ಮೂಡಿಸಿರುತ್ತಾರೆ.

ಮುಂದುವರಿದು, ಸಮಾಜದ ಪ್ರಗತಿ ಮತ್ತು ಆಧುನಿಕ ಜಗತ್ತಿನ ನಿರ್ಮಾಣದಲ್ಲಿ ಎಂಜಿನಿಯರ್‌ಗಳ (ಅಭಿಯಂತರರ) ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎಂಜಿನಿಯರ್‌ಗಳು ಕೇವಲ ಯಂತ್ರಗಳನ್ನು ವಿನ್ಯಾಸಗೊಳಿಸುವುದೇ ಅಲ್ಲ, ಬದಲಿಗೆ ಮಾನವನ ಸವಾಲುಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದರೆ ತಪ್ಪಾಗಲಾರದು.

ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಮಹತ್ವದ ಪಾತ್ರವನ್ನು ಅರಿತು, ಸ‌ರ್ ಎಂ. ವಿಶ್ವೇಶ್ವರಯ್ಯ ರವರು ರಾಷ್ಟ್ರಕ್ಕೆ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮ ದಿನವಾದ ಸೆಪ್ಟೆಂಬರ್ 15 ನ್ನು "ಎಂಜಿನಿಯರ್‌ಗಳ ದಿನ" ವನ್ನಾಗಿ ಆಚರಿಸಿಕೊಂಡು ಬರುತ್ತಿರುವುದನ್ನು ಅಧಿಕೃತವಾಗಿ ಘೋಷಿಸಲು ಹಾಗೂ ಅವರ ಕೊಡುಗೆಯನ್ನು ವಿಶಿಷ್ಟ ಚಿಹ್ನೆಯೊಂದಿಗೆ ಗೌರವಿಸಲು ನಿರ್ಧರಿಸಿದ್ದು, ಕರ್ನಾಟಕದ ಎಂಜಿನಿಯರ್‌ಗಳು ತಮ್ಮ ಹೆಸರಿನ ಮೊದಲು "Er" ಎಂಬ ಪೂರ್ವಪ್ರತ್ಯಯವನ್ನು ಹೆಮ್ಮೆಯಿಂದ ಬಳಸಬಹುದಾಗಿದ್ದು, ಇದು ಕೇವಲ ಎರಡು ಅಕ್ಷರಗಳಾಗಿರದೇ, ಅವರುಗಳ ಜೀವಿತಾವಧಿಯ ಸೇವೆಯನ್ನು ಪ್ರತಿನಿಧಿಸುವುದರಿಂದ, ಎಂಜಿನಿಯರ್‌ಗಳ ಹೆಸರುಗಳ ಪೂರ್ವದಲ್ಲಿ Er (Engineer-ಅಭಿಯಂತರರು) ಶೀರ್ಷಿಕೆಯನ್ನು (Title) ಬಳಸಲು ಸರ್ಕಾರವು ತೀರ್ಮಾನಿಸಿ, ಆದೇಶ ಹೊರಡಿಸಿದೆ.