ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ (Bengaluru Stampede, Chinnaswamy Stadium Stampede) ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಜೂನ್ 12ರ ಗುರುವಾರಕ್ಕೆ ಮುಂದೂಡಿದೆ. ಜೊತೆಗೆ, ಕಾಲ್ತುಳಿತದ ತನಿಖೆಯ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಒದಗಿಸುವಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಾಂಗ ತನಿಖೆಯ ಅವಧಿಯಲ್ಲಿ ತನಿಖೆಯ ಫಲಿತಾಂಶಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸರ್ಕಾರ ಬಯಸುವುದಿಲ್ಲ ಎಂದು ಕರ್ನಾಟಕದ ಅಡ್ವೊಕೇಟ್ ಜನರಲ್ ಕೆ ಎಂ ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದ ನಂತರ ಈ ಆದೇಶ ಬಂದಿದೆ.
ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತದಲ್ಲಿ ಆರ್ಸಿಬಿಯ (RCB) 11 ಅಭಿಮಾನಿಗಳ ಸಾವು ಸಂಭವಿಸಿತ್ತು. ದುರಂತದ ಬಳಿಕ ಯಾವುದೇ ಪ್ರಕರಣಗಳನ್ನು ದಾಖಲಾಗಿರಲಿಲ್ಲ. ಹೈಕೋರ್ಟೇ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿತ್ತು. ಈ ಅರ್ಜಿಯ ವಿಚಾರಣೆ ಮಾಡಿದ ಹೈಕೋರ್ಟ್, ಸರ್ಕಾರದ ಪ್ರತಿಕ್ರಿಯೆ ಬಂದ ಬಳಿಕ ಮಧ್ಯಂತರ ಅರ್ಜಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಾವುದೇ ನಿರ್ದೇಶನ ನೀಡದೇ ಅರ್ಜಿಗಳ ವಿಚಾರಣೆಯನ್ನು ಜೂ.12 ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ಈ ನಡುವೆ ಹಲವರಿಂದ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ವಿಚಾರಣೆಗೆ ಮನವಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನ್ಯಾ.ವಿ.ಕಾಮೇಶ್ವರ ರಾವ್ ಮತ್ತು ನ್ಯಾ.ಸಿ.ಎಂ.ಜೋಶಿ ಅವರ ಪೀಠದಿಂದ ಇಂದು ವಿಚಾರಣೆ ಮಾಡಿದ್ದು, ಸರ್ಕಾರದ ಪ್ರತಿಕ್ರಿಯೆ ಬಂದ ಬಳಿಕ ತೀರ್ಮಾನ ನೀಡುವುದಾಗಿ ಹೇಳಿ ಜೂ.12 ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಕಾಲ್ತುಳಿತ ಪ್ರಕರಣದ ಬಿಸಿ ಸರಕಾರಕ್ಕೆ ಮುಟ್ಟುತ್ತಿದ್ದು, ಈ ವಿಚಾರವಾಗಿ ಚರ್ಚಿಸಲು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದೆ. ಇಬ್ಬರೂ ಇಂದು ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್‌ಸಿಬಿ ಮಾರ್ಕೆಟಿಂಗ್ ಮ್ಯಾನೇಜರ್ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Bengaluru Stampede: ಕಾಲ್ತುಳಿತ ಪ್ರಕರಣ: ಇಂದು ಹೈಕೋರ್ಟ್‌ನಲ್ಲಿ ಆರೋಪಿ ನಿಖಿಲ್ ಅರ್ಜಿ ವಿಚಾರಣೆ