ಬೆಂಗಳೂರು: ಕರ್ನಾಟಕದಲ್ಲಿ ಬೆಳೆಯುವ ನೇರಳೆ ಹಣ್ಣು ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೇ ಮೊದಲ ಬಾರಿಗೆ ನೇರಳೆ ಹಣ್ಣನ್ನು ಕರ್ನಾಟಕದಿಂದ ಲಂಡನ್‌ಗೆ ರಫ್ತು ಮಾಡಲಾಗುತ್ತಿದೆ. ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಹಣ್ಣುಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಮೊದಲ ಬಾರಿಗೆ ರಾಜ್ಯದ ನೇರಳೆ ಹಣ್ಣುಗಳು ಲಂಡನ್‌ಗೆ ರಫ್ತಾಗುತ್ತಿವೆ. ಇದು ರಾಜ್ಯದ ರೈತರಿಗೆ ಹೆಮ್ಮೆಯ ಮೈಲುಗಲ್ಲಾಗಿದೆ. ರಾಜ್ಯದ ಹಣ್ಣುಗಳಿಗೆ ಜಾಗತಿಕ ಮಾರುಕಟ್ಟೆ ತಲುಪಲು ವ್ಯವಸ್ಥೆ ಮಾಡಿರುವುದರಿಂದ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆಯಾಗಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು(APEDA) ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಡಿಕೆರೆ ಸಂಸ್ಕರಣಾ ಘಟಕದಲ್ಲಿ ತಾಜಾ ನೇರಳೆ ಹಣ್ಣುಗಳನ್ನು ಲಂಡನ್‌ಗೆ ರಫ್ತು ಮಾಡಲು ಚಾಲನೆ ನೀಡಿದೆ.
ಈ ಸುದ್ದಿಯನ್ನೂ ಓದಿ | DK Shivakumar: ಇಡಿ ವಿಚಾರಣೆ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧ ಎಂದ ಡಿ.ಕೆ.ಶಿವಕುಮಾರ್
ಭಾರತೀಯ ಕೃಷಿಗೆ ಐತಿಹಾಸಿಕ ಕ್ಷಣ
ಈ ಬಗ್ಗೆ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿ, ಭಾರತೀಯ ಕೃಷಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಕರ್ನಾಟಕದ ತಾಜಾ ನೇರಳೆ ಹಣ್ಣುಗಳು ಲಂಡನ್‌ಗೆ ಪ್ರಯಾಣ ಬೆಳೆಸಿವೆ. ಪ್ರಧಾನಮಂತ್ರಿ ನರೆಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಭಾರತದ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿದೆ. ಈ ಪ್ರಮುಖ ಮೈಲುಗಲ್ಲು ' ಲೋಕಲ್ ಟು ಗ್ಲೋಬಲ್ʼ ಎಂಬ ಕೇಂದ್ರದ ಪರಿಕಲ್ಪನೆಗೆ ಪೂರಕವಾಗಿದ್ದು, ಭಾರತ ಕೃಷಿ ಅಭಿವೃದ್ಧಿ ಹಾಗೂ ಆತ್ಮನಿರ್ಭರ ಭಾರತ ಗುರಿ ತಲುಪಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.