ಪಾವಗಡದಲ್ಲಿ ಅದ್ಧೂರಿಯಾಗಿ ನಡೆದ ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ
Kanive Lakshmi Narasimhaswamy Rathotsava: ಪಾವಗಡದ ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಅಗಮಿಸಿದ್ದ ಸಹಸ್ರಾರು ಭಕ್ತರಿಗೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲ ಸೌಲಭ್ಯದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಕೆಲ ಭಕ್ತರು ಜಾತ್ರೆಗೆ ಬಂದವರಿಗೆ ಪಾನಕ, ಮಜ್ಜಿಗೆ ವಿತರಣೆ ಮಾಡಿದರು.


ಪಾವಗಡ: ಇತಿಹಾಸ ಪ್ರಸಿದ್ಧ ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿಯ 70ನೇ ರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು. ಮುಜರಾಯಿ ಇಲಾಖೆಯ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ (Lakshmi Narasimhaswamy Rathotsava) ಮಧ್ಯಾಹ್ನ 12.30ಕ್ಕೆ ತಹಸೀಲ್ದಾರ್ ವರದರಾಜ್ ಚಾಲನೆ ನೀಡಿದರು. ಈ ವೇಳೆ ಭಕ್ತರು ಶ್ರದ್ಧಾಭಕ್ತಿಯಿಂದ ರಥವನ್ನು ಎಳೆದು, ರಥಕ್ಕೆ ಬಾಳೆಹಣ್ಣು ದವನ ತೂರಿ ಭಕ್ತಿ ಸಮರ್ಪಿಸಿದರು. ಸುಡುಬಿಸಿಲು ಲೆಕ್ಕಿಸದೇ ಸಹಸ್ರಾರು ಭಕ್ತರು ಸ್ವಾಮಿಯ ಉತ್ಸವಕ್ಕೆ ಸಾಕ್ಷಿಯಾದರು.
ರಥದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿಯ ಕೂರಿಸಿ ದೇವಸ್ಥಾನದ ಮುಂಭಾಗದ ತೇರು ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಜನರ ನೂಕುನುಗ್ಗಲು ತಪ್ಪಿಸಲು ಹಾಗೂ ದೇವರ ದರ್ಶನಕ್ಕೆ ಯಾವುದೇ ರೀತಿಯಲ್ಲೂ ಅನನುಕೂಲವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಬ್ರಹ್ಮರಥೋತ್ಸವಕ್ಕೆ ಅಗಮಿಸಿದ್ದ ಸಹಸ್ರಾರು ಭಕ್ತರಿಗೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲ ಸೌಲಭ್ಯದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಕೆಲ ಭಕ್ತರು ಜಾತ್ರೆಗೆ ಬಂದವರಿಗೆ ಪಾನಕ, ಮಜ್ಜಿಗೆ ವಿತರಣೆ ಮಾಡಿದರು.

ವಿಶೇಷವಾಗಿ ಶಿವಕುಮಾರ ಸ್ವಾಮೀಜಿ ಹಾಗೂ ಎಪಿಜೆ ಅಬ್ದುಲ್ ಕಲಾಂ ಸಂಘದ ಮುಸ್ಲಿಂ ಯುವಕರಿಂದ ಜಾತ್ರೆಗೆ ಬಂದಂತಹ ಭಕ್ತರಿಗೆ ಮಜ್ಜಿಗೆ, ಹೆಸರುಬೇಳೆ, ಪಾನಕ ನೀಡಿದ್ದು ಗಮನ ಸೆಳೆಯಿತು. ಇನ್ನು ಹರಕೆ ಹೊತ್ತ ಹಲವು ಮಂದಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.
ಅಹೋಬಲ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ಖ್ಯಾತ ನಟ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಚಾಲನೆ

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿ ಹೋಬಳಿಯ ಜಕ್ಕೇನಹಳ್ಳಿ ಗ್ರಾಮದಲ್ಲಿರುವ ಸುಪ್ರಸಿದ್ಧ ಅಹೋಬಲ ಲಕ್ಷ್ಮೀ ನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಅದ್ಧೂರಿಯಾಗಿ ನೆರವೇರಿತು. ಗುರುವಾರ ಮಧ್ಯಾಹ್ನ 12 ಗಂಟೆಗೆ ರಥೋತ್ಸವಕ್ಕೆ ಬಹು ಭಾಷೆ ನಟ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಅವರು ಚಾಲನೆ ನೀಡಿದರು. ಬಳಿಕ ಅವರು ನರಸಿಂಹ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಸಾವಿರಾರು ಭಕ್ತರು ಅಹೋಬಲ ಲಕ್ಷ್ಮೀ ನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು. ಈ ವೇಳೆ ನೂರಾರು ಅಭಿಮಾನಿಗಳು ಮತ್ತು ಭಕ್ತರು ತಮ್ಮ ನೆಚ್ಚಿನ ನಟರ ಜತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ರಥೋತ್ಸವದದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದ ಹಾಗೆ ಬಡವನಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.