ಬೆಂಗಳೂರು: 17 ವರ್ಷದ ಹಿಂದೆ ರಾಜಧಾನಿಯಲ್ಲಿ ನಡೆದಿದ್ದ ಐಐಎಸ್ಸಿಯ ನಿವೃತ್ತ ಪ್ರೊಫೆಸರ್ ಮತ್ತು ಖ್ಯಾತ ಗಣಿತಜ್ಞ ಪುರುಷೋತ್ತಮ ಲಾಲ್ ಸಚ್‌ದೇವ್ (Purushottam Lal Sachdev), ಪತ್ನಿ ರೀಟಾ ಮತ್ತು ಪುತ್ರ ಮುನ್ನಾ ಅವರ ತ್ರಿವಳಿ ಕೊಲೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮೂಲದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯಕ್ ನೇತೃತ್ವದ ವಿಭಾಗೀಯಪೀಠ ಈ ಆದೇಶ ನೀಡಿದೆ. ಆರೋಪಿಗಳಾದ ಸುಚಿತ್ರಾ ಹಲ್ದಾರ್, ಆಕೆಯ ಪತಿ ದೀಪಕ್ ಹಲ್ದಾರ್, ಮೊಹಮ್ಮದ್ ಸರ್ಬಾಲ್ ಮತ್ತು ಬಿದನ್ ಶಿಕಾರಿ ಎಂಬುವವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಆರೋಪಿಗಳು ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಕಂಟಕರಾಗಿದ್ದರು. ಹಣ ಹಾಗೂ ಚಿನ್ನಾಭರಣಗಳಿಗಾಗಿ ಮೂವರನ್ನು ಹತ್ಯೆ ಮಾಡಿರುವ ಅವರ ಕೃತ್ಯ ಸಮಾಜಕ್ಕೆ ದೊಡ್ಡ ಅಪಾಯವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಆರೋಪಿಗಳು ಮೂವರನ್ನು ಕತ್ತು ಹಿಸುಕಿ ಕೊಂದು ನಗದು, ಒಡವೆ ವಸ್ತುಗಳನ್ನು ದೋಚಿದ್ದರು. ಮೊದಲನೇ ಆರೋಪಿ ದೀಪಕ್ ಹಲ್ದಾರ್ ಮತ್ತು ಎರಡನೇ ಆರೋಪಿ ಸುಚಿತ್ರಾ ಹಲ್ದಾರ್ ಕೊಲೆಯಾದ ಮನೆಯಲ್ಲಿ ಮನೆ ಕೆಲಸದವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕ್ರಿಮಿನಲ್ ಪಿತೂರಿ ನಡೆಸಿ ಇತರ ಆರೋಪಿಗಳ ಜತೆ ಸೇರಿ ತ್ರಿವಳಿ ಕೊಲೆ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಘಟನಾವಳಿಯನ್ನು ಸಾಕ್ಷ್ಯಾಧಾರಗಳೊಂದಿಗೆ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ನಾಲ್ವರು ಆರೋಪಿಗಳು ಎರಡು ವಾರಗಳಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು, ಉಳಿದ ಅವಧಿಯ ಶಿಕ್ಷೆಯನ್ನು ಪೂರೈಸಲು ಅವರನ್ನು ಕಾರಾಗೃಹಕ್ಕೆ ಕಳುಹಿಸಬೇಕು ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?
ಭಾರತೀಯ ವಿಜ್ಞಾನ ಸಂಸ್ಥೆ ನಿವೃತ್ತ ಪ್ರೊಫೆಸರ್ ಹಾಗೂ ಖ್ಯಾತ ಗಣಿತಶಾಸ್ತ್ರಜ್ಞರಾದ ಪುರುಷೋತ್ತಮಲಾಲ್ ಸಚ್‌ದೇವ್(71), ಪತ್ನಿ ರೀಟಾ(62), ಪುತ್ರ ಮುನ್ನಾ(35) ಜತೆ ಆರ್. ಟಿ. ನಗರದ 80 ಅಡಿ ರಸ್ತೆಯಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರು.
Murder Case: ಊಟಕ್ಕಾಗಿ ಹೋಟೆಲ್‌ಗೆ ಹೋದ ಯುವಕನ ಕೊಲೆ, ಆಕಸ್ಮಿಕವಾಗಿ ಕಾಲು ತುಳಿದದ್ದೇ ಕಾರಣ!
ಆ ಮನೆಗೆ ಮೊದಲು ಕೆಲಸಕ್ಕೆ ಸೇರಿದ ಸುಚಿತ್ರಾ, ನಂತರ ತನ್ನ ಪತಿಯನ್ನೂ ಕರೆ ತಂದಿದ್ದಳು. ಇಬ್ಬರೂ ಔಟ್ ಹೌಸ್‌ನಲ್ಲಿಯೇ ನೆಲೆಸಿದ್ದರು. ಬಳಿಕ ಇತರ ಅಪರಾಧಿಗಳ ಜತೆ ಸೇರಿ ಸಂಚು ರೂಪಿಸಿ 2009ರ ಫೆ.16ರಂದು ಮೂವರನ್ನು ಕತ್ತು ಹಿಸುಕಿ ಕೊಂದು ಚಿನ್ನಾಭರಣ ನಗದು ದೋಚಿ ಪರಾರಿಯಾಗಿದ್ದರು. ಆನಂತರ ತ್ರಿವಳಿ ಕೊಲೆಯ ಸಂಗತಿ ಬಯಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ಆರೋಪಿಗಳನ್ನು ಖುಲಾಸೆಗೊಳಿಸಿ 2016ರ ಫೆ. 29ರಂದು ಆದೇಶ ನೀಡಿತ್ತು. ಈ ಆದೇಶವನ್ನು ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.