CM Siddaramaiah: ಶ್ರೇಷ್ಠ ಹಿಂದೂ ಆಗಿದ್ದ ಗಾಂಧಿ ಬಿಜೆಪಿ ಪರಿವಾರದ ಗೋಡ್ಸೆಯಿಂದ ಹತ್ಯೆ: ಸಿಎಂ ಸಿದ್ದರಾಮಯ್ಯ
ಸುವರ್ಣಸೌಧದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು. ಗಾಂಧಿಯವರ ಹಿಂದೂತ್ವದ ದ್ವೇಷಿಯಾಗಿರುವ, ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ದ್ವೇಷಿಯೂ ಆಗಿದೆ ಎಂದರು.
ಬೆಳಗಾವಿ: ರಾಮ ಭಕ್ತರಾಗಿ ಅತ್ಯುತ್ತಮ ಹಿಂದೂ (Hindu) ಆಗಿದ್ದ ಮಹಾತ್ಮ ಗಾಂಧಿಯವರನ್ನು ಬಿಜೆಪಿ ಪರಿವಾರದ ನಾಥುರಾಂ ಗೋಡ್ಸೆ (Nathuram Godse) ಹತ್ಯೆ ಮಾಡಿದ. ನಾವು ಮಹಾತ್ಮ ಗಾಂಧಿ (Mahatma Gandhi) ಅವರ ಹಿಂದೂತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಿಜೆಪಿ (BJP) ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತವನ್ನು ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನುಡಿದರು.
ಸುವರ್ಣಸೌಧದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಗಾಂಧಿಯವರ ಹಿಂದೂತ್ವದ ದ್ವೇಷಿಯಾಗಿರುವ, ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ದ್ವೇಷಿಯೂ ಆಗಿದೆ ಎಂದವರು ನುಡಿದರು.
ನಾವು ಮಹಾತ್ಮಗಾಂಧಿಯವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಇನ್ನಷ್ಟು ಅರ್ಥಪೂರ್ಣವಾಗಿ ತಲುಪಿಸುವ, ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಗುರಿಯೊಂದಿಗೆ ಜೈ ಭಾಪು-ಜೈ ಭೀಮ್-ಜೈ ಸಂವಿಧಾನ ಅಭಿಯಾನಯನ್ನು ಮುನ್ನಡೆಸುತ್ತೇವೆ. ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದವರು ಮಹಾತ್ಮಗಾಂಧಿ. ಆ ದಿನ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಈ ನೆಲದಲ್ಲಿ ಹೆಚ್ಚಿಸಿದರು ಎಂದು ಸ್ಮರಿಸಿದರು.
ವರ್ಷವಿಡೀ ಅಭಿಯಾನ
ಇಡೀ ವರ್ಷ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನವನ್ನು ಮಾಡುತ್ತಿದ್ದೇವೆ. ಗಾಂಧೀಜಿಯವರ ತತ್ವಾದರ್ಶಗಳನ್ನು ಮತ್ತೆ ಪುನಸ್ಥಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿ ಹಾಗು ಅವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಇಂದಿಗೂ ಪ್ರಸ್ತುತ. ಗಾಂಧೀಜಿ ಸೌಹಾರ್ದತೆ, ಸಮಾನತೆ ಬರಬೇಕು, ಅಸ್ಪೃಶ್ಯತೆ ಹೋಗಲಾಡಿಸಲು, ಮಹಿಳೆಯರಿಗೆ ಸ್ವಾತಂತ್ರ್ಯ ಅವರ ಹಕ್ಕುಗಳ ರಕ್ಷಣೆಯಾಗಬೇಕೆಂದು ಪ್ರತಿಪಾದಿಸಿದ್ದರು. ಗಾಂಧೀಜಿ, ಬಸವಣ್ಣ, ಕನಕದಾಸರ ವಿಚಾರಗಳು ಸಂವಿಧಾನದಲ್ಲಿ ಅಡಕವಾಗಿವೆ ಎಂದರು.
ಕಾಂಗ್ರೆಸ್ ಸಂವಿಧಾನದ ಪರವಾಗಿದೆ
ಗಾಂಧೀಜಿ, ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಅನಾಹುತಕಾರಿ ರಾಜಕಾರಣ ನಡೆಯುತ್ತಿದೆ. ಅದ್ದರಿಂದ ಇವುಗಳ ರಕ್ಷಣೆ ಮಾಡುವುದು ಕಾಂಗ್ರೆಸ್ ನ ಜವಾಬ್ದಾರಿ. ನಾವು ಸಂವಿಧಾನದ ಪರವಾಗಿದ್ದೇವೆ. ಅವರು ಮನುವಾದದ ಪರವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಾರೋಗ್ಯ ನಿಮಿತ್ತ ರಾಹುಲ್ ಗಾಂಧಿ ಗೈರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಹುಷಾರಿಲ್ಲದ ಕಾರಣ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು ಸಮಾವೇಶದಿಂದ ದೂರ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ರೀತಿ ತಿರುಚಿ ಸುದ್ದಿ ಹಾಕಿದರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆಯೇ? ಇದರಿಂದ ಏನು ಸಂದೇಶ ಹೋಗುತ್ತದೆ ಎಂದು ಪ್ರಶ್ನಿಸಿದರು.
ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ
ಮಹಿಳೆಯರಿಗೆ ರಕ್ಷಣೆ ದೊರಕಬೇಕು. ಬಲಾತ್ಕಾರದಂತಹ ಹೀನ ಕೃತ್ಯಗಳು ನಡೆಯಬಾರದು. ಸಮಾಜದಲ್ಲಿ ಸಮಾಜಘಾತಕ ಶಕ್ತಿಗಳು ಇಂಥ ಕೆಲಸ ಮಾಡುತ್ತವೆ. ಅವರ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು. ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಘಟನೆಯ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದೆ ಪ್ರಿಯಾಂಕ ಗಾಂಧಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಉಪ ಅಧ್ಯಕ್ಷ ಲಮಾಣಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.