ಕಲಬುರಗಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೋಮವಾರ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. ಜಿಲ್ಲೆಯ (Kalaburagi News) ಆಳಂದ ತಾಲೂಕಿನ ದೇವಂತಗಿ ಗ್ರಾಮದ ಗುಂಡೇರಾವ ಚೋಪಡೆ (28) ಎಂಬಾತ ಮರಣದಂಡನೆಗೆ ಒಳಗಾದ ಅಪರಾಧಿ. 2023ರ ಜುಲೈ 15ರಂದು ಪುಸ್ತಕ ತರಲು ಆಳಂದ ತಾಲೂಕಿನ ಗ್ರಾಮವೊಂದರಿಂದ ಮತ್ತೊಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಕೃಷಿ ಕೆಲಸ ಮಾಡುತ್ತಿದ್ದ ಅಪರಾಧಿ ಗುಂಡೇರಾವ ಬಲವಂತವಾಗಿ ಕಬ್ಬಿನ ಗದ್ದೆಗೆ ಎಳೆದೊಯ್ದು ಬಾಯಿ ಒತ್ತಿ ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಉಸಿರುಗಟ್ಟಿಸಿ ಕೊಂದು ಪಕ್ಕದ ಹೊಲದ ಬಾವಿಯಲ್ಲಿ ಶವವನ್ನು ಎತ್ತಿ ಹಾಕಿದ್ದ. ಯಾವುದೇ ನೇರ ಸಾಕ್ಷಿಗಳು ಇಲ್ಲದ್ದರಿಂದ ತನಿಖೆ ನಡೆಸುವುದು ಪೊಲೀಸರಿಗೂ ಸವಾಲಾಗಿತ್ತು. ಈ ಪ್ರಕರಣವು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ತನಿಖಾಧಿಕಾರಿ ಭಾಸು ಚವ್ಹಾಣ ನೇತೃತ್ವದಲ್ಲಿ ನಿಂಬರ್ಗಾ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಅಪರಾಧಿಗೆ ಪೋಕ್ಸೋ ಕಾಯ್ದೆಯಡಿ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದ್ದಾರೆ. ಕಾನೂನು ಪ್ರಾಧಿಕಾರದ ವತಿಯಿಂದ 4 ಲಕ್ಷ ರೂ. ಪರಿಹಾರವನ್ನು ಮೃತ ಬಾಲಕಿಯ ತಾಯಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಅಪರಾಧಿಗೆ ಗಲ್ಲು ಶಿಕ್ಷೆಯಾಗಿದ್ದು ಇದೇ ಮೊದಲ ಪ್ರಕರಣ ಎನ್ನಲಾಗುತ್ತಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು.
ಈ ಸುದ್ದಿಯನ್ನೂ ಓದಿ | IAF officer Attacked: ವಾಯುಸೇನೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಅರೆಸ್ಟ್; ಅಧಿಕಾರಿಯಿಂದಲೂ ನಡೆದಿತ್ತು ಹಲ್ಲೆ! ಇಲ್ಲಿದೆ ವಿಡಿಯೋ