#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Market crash : ಸೆನ್ಸೆಕ್ಸ್‌ 800 ಅಂಕ ಕುಸಿತ, ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ. ನಷ್ಟ

ಸೆನ್ಸೆಕ್ಸ್‌ ಮತ್ತು ನಿಫ್ಟಿ ತಲಾ 1 % ಇಳಿಕೆಯಾಗಿದೆ. ಬಿಎಸ್‌ಇನಲ್ಲಿ ನೋಂದಾಯಿತ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯದಲ್ಲಿ 9.48 ಲಕ್ಷ ಕೋಟಿ ರೂ. ನಷ್ಟವಾಗಿದ್ದು, 410 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ.

ಸೆನ್ಸೆಕ್ಸ್‌ 800 ಅಂಕ ಕುಸಿತ, ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ. ನಷ್ಟ

Profile Rakshita Karkera Jan 27, 2025 11:44 AM

ಮುಂಬೈ: ಮುಂಬಯಿ ಷೇರು ಮಾರುಕಟ್ಟೆ( Market crash) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮ ವಾರ ಬೆಳಗ್ಗೆ 800 ಅಂಕಗಳಿಗೂ ಹೆಚ್ಚು ಕುಸಿತಕ್ಕೀಡಾಗಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ 75,417 ರ ಮಟ್ಟದಲ್ಲಿ ಸೆನ್ಸೆಕ್ಸ್‌ ವಹಿವಾಟು ನಡೆಸುತ್ತಿತ್ತು. ನಿಫ್ಟಿ 245 ಅಂಕ ಕಳೆದುಕೊಂಡು 22,846ರಲ್ಲಿ ವಹಿವಾಟು ನಡೆಸುತ್ತಿತ್ತು.

ಸೆನ್ಸೆಕ್ಸ್‌ ಮತ್ತು ನಿಫ್ಟಿ ತಲಾ 1 % ಇಳಿಕೆಯಾಗಿದೆ. ಬಿಎಸ್‌ಇನಲ್ಲಿ ನೋಂದಾಯಿತ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯದಲ್ಲಿ 9.48 ಲಕ್ಷ ಕೋಟಿ ರೂ. ನಷ್ಟವಾಗಿದ್ದು, 410 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ.

ಸೂಚ್ಯಂಕ ಪತನಕ್ಕೆ ಕಾರಣವೇನು?

ಕಾರ್ಪೊರೇಟ್‌ ವಲಯದ ದುರ್ಬಲ ಫಲಿತಾಂಶ, ಅಮೆರಿಕದ ವಾಣಿಜ್ಯ ನೀತಿಯ ಅನಿಶ್ಚಿತತೆ, ವಿದೇಶಿ ಹೂಡಿಕೆಯ ಹೊರಹರಿವು, ಬಜೆಟ್‌ಗೆ ಮುನ್ನ ಉಂಟಾಗಿರುವ ನಿರೀಕ್ಷೆ ಮೊದಲಾದ ಕಾರಣಗಳಿಂದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಕುಸಿದಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಾಲು ಎರಡು ದಶಕದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಜೊಮ್ಯಾಟೊ, ಅದಾನಿ ಪೋರ್ಟ್ಸ್‌ ಷೇರು ದರ ತಲಾ 2% ಇಳಿಕೆಯಾಯಿತು. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಷೇರು ದರದಲ್ಲಿ ಸೋಮವಾರ 7% ಇಳಿಕೆಯಾಗಿದೆ.

ಈ ವಾರ ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಹೀಗಾಗಿ ಸ್ಟಾಕ್‌ ಮಾರ್ಕೆಟ್‌ ಆರು ದಿನಗಳ ಕಾಲ ವಹಿವಾಟು ನಡೆಸಲಿದೆ. ಫೆಬ್ರವರಿ 1ರಂದು ಶನಿವಾರ ಸ್ಟಾಕ್‌ ಮಾರ್ಕೆಟ್‌ ತೆರೆಯಲಿದೆ. ಮತ್ತೊಂದು ಕಡೆ ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಸಭೆ ಸೇರಲಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಹೂಡಿಕೆ ಹಿಂತೆಗೆತವನ್ನು ಮುಂದುವರಿಸಿದ್ದಾರೆ. ಇವೆಲ್ಲವೂ ಸ್ಟಾಕ್‌ ಮಾರ್ಕೆಟ್‌ ಮೇಲೆ ಈ ವಾರ ಪ್ರಭಾವ ಬೀರಲಿದೆ. ಜನವರಿಯಲ್ಲಿ ಇದುವರೆಗೆ ಕರಡಿ ಕುಣಿತವೇ ನಿಯಂತ್ರಿಸುತ್ತಿದೆ. ಗೂಳಿ ಯಾವಾಗ ಮತ್ತೆ ಅಬ್ಬರಿಸಲಿದೆ ಎಂಬ ಕಾತರ ಉಂಟಾಗಿದೆ.

ಈ ಸುದ್ದಿಯನ್ನೂ ಓದಿ: Stock Market: ಷೇರು ಪೇಟೆಗೆ ಬರಲಿದೆ ಮತ್ತೊಂದು ಟಾಟಾ ಕಂಪನಿ! ಕಂಪ್ಲೀಟ್‌ ಡಿಟೇಲ್ಸ್!‌

ಸಾಮಾನ್ಯವಾಗಿ ಸ್ಟಾಕ್‌ ಮಾರ್ಕೆಟ್‌ ಮೇಲೆ ಬಜೆಟ್‌ ಪಾಸಿಟಿವ್‌ ಪರಿಣಾಮ ಬೀರುತ್ತದೆ. ಏಕೆಂದರೆ ಬಜೆಟ್‌ನಲ್ಲಿ ಆರ್ಥಿಕ ಪ್ರಗತಿಗೆ ಪೂರಕವಾದ ಹಲವು ಘೋಷಣೆಗಳು ಇರುತ್ತವೆ. ಉಪಕ್ರಮಗಳು ಇರುತ್ತವೆ. ಇದು ಸಕಾರಾತ್ಮಕ ಪ್ರಭಾವ ಬೀರೋದು ಸಾಮಾನ್ಯ.

ತೆರಿಗೆ ಕಡಿತದ ನಿರ್ಧಾರಗಳು, ಮೂಲಸೌಕರ್ಯ ವಲಯಕ್ಕೆ ಹೂಡಿಕೆ ಹೆಚ್ಚಳ, ಬಿಸಿನೆಸ್‌ಗಳಿಗೆ ಪ್ರೋತ್ಸಾಹ ಧನ, ಕ್ಷೇತ್ರಾವಾರು ಅನುದಾನಗಳ ಘೋಷಣೆಗಳು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಷೇರುಗಳ ಮೇಲೆ ಪ್ರಭಾವ ಬೀರುತ್ತವೆ.

ಸೆನ್ಸೆಕ್ಸ್‌ ಮತ್ತು ನಿಫ್ಟಿಯ ಇತ್ತೀಚಿನ ತೀವ್ರ ಕುಸಿತದಿಂದ ಹೊಸ ಹೂಡಿಕೆದಾರರು ಕಂಗಾಲಾಗಿದ್ದಾರೆ. ಆದರೆ‌ " ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಸಾಮಾನ್ಯವಾಗಿದ್ದು, ನಿರಂತರ ಹೂಡಿಕೆ ಮಾಡುವುದರಿಂದ ಹಾಗೂ ದೀರ್ಘಕಾಲೀನ ಹೂಡಿಕೆಯ ಬದ್ಧತೆಯಿಂದ ಸಂಪತ್ತು ಗಳಿಸಬಹುದುʼʼ ಎನ್ನುತ್ತಾರೆ ವಾರೆನ್‌ ಬಫೆಟ್.

ಮ್ಯೂಚುವಲ್‌ ಫಂಡ್‌ಗಳಲ್ಲಿ ಕೂಡ ಸಿಪ್‌ಗಳ ಮೌಲ್ಯ ಇತ್ತೀಚೆಗೆ ಇಳಿಕೆಯಾಗಿದೆ. ಇದು ಕೂಡ ಮಾರುಕಟ್ಟೆಯಲ್ಲಿ ಸೂಚ್ಯಂಕಗಳ ಕುಸಿತದ ಪರಿಣಾಮವಾಗಿದ್ದು, ಆತಂಕ ಪಡೆಬೇಕಾದ ಅವಶ್ಯಕತೆ ಇಲ್ಲ.