Laxmi Hebbalkar: ಫೈನಾನ್ಸ್ ಸಂಸ್ಥೆ ಸೀಜ್ ಮಾಡಿ ಹರಾಜಿಗಿಟ್ಟಿದ್ದ ಮನೆ ಬಿಡಿಸಿಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಕರ್
Laxmi Hebbalkar: ಬೆಳಗಾವಿಯ ವಾಗ್ವಾಡೆ ಗ್ರಾಮದ ವ್ಯಕ್ತಿಯೊಬ್ಬರು ಫೈನಾನ್ಸ್ ಒಂದರಿಂದ 2020ರಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಫೈನಾನ್ಸ್‌ನವರು ಮನೆ ಹರಾಜಿಗೆ ಎಂದು ಫಲಕ ಹಾಕಿದ್ದರು. ಇದೀಗ ಸಚಿವರು ಬಾಕಿ ಇರುವ ಹಣ ತುಂಬಲು 2 ತಿಂಗಳು ಕಾಲಾವಕಾಶ ಕೊಡಿಸಿ, ಮನೆ ವಾಪಸ್ ಪಡೆಯಲು ನೆರವಾಗಿದ್ದಾರೆ.
![ಹರಾಜಿಗಿಟ್ಟಿದ್ದ ಮನೆ ಬಿಡಿಸಿಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕಕರ್](https://cdn-vishwavani-prod.hindverse.com/media/original_images/Belagavi_News_2.jpg)
![Profile](https://vishwavani.news/static/img/user.png)
ಬೆಳಗಾವಿ: ಖಾಸಗಿ ಫೈನಾನ್ಸ್ ಸಂಸ್ಥೆಯವರು 8 ತಿಂಗಳ ಹಿಂದೆ ಸೀಜ್ ಮಾಡಿ ಹರಾಜಿಗಿಟ್ಟಿದ್ದ ಮನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಬಿಡಿಸಿಕೊಟ್ಟಿದ್ದಾರೆ. ವಾಗ್ವಾಡೆ ಗ್ರಾಮದ ಅಂಬೇಡ್ಕರ್ ಗಲ್ಲಿಯ ಸುರೇಶ ಗೀರಪ್ಪ ಕಾಂಬಳೆ ಫೈನಾನ್ಸ್ ಒಂದರಿಂದ 2020ರಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಬಹುತೇಕ ಹಣ ಪಾವತಿಸಿದ್ದರು. ಆರ್ಥಿಕ ಸಮಸ್ಯೆಯಿಂದಾಗಿ ಇನ್ನೂ 2.50 ಲಕ್ಷ ರೂ. ತುಂಬುವುದು ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ 8 ತಿಂಗಳ ಹಿಂದೆ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿ ಲಾಕ್ ಮಾಡಿದ್ದ ಫೈನಾನ್ಸ್‌ನವರು ಮನೆ ಹರಾಜಿಗೆ ಎಂದು ಫಲಕ ಹಾಕಿದ್ದರು. ಆದರೆ, ಇದೀಗ ಬೀಗ ತೆರವು ಮಾಡಿ ಮನೆಯನ್ನು ಸುರೇಶ ಗೀರಪ್ಪ ಕಾಂಬಳೆ ಕುಟುಂಬಕ್ಕೆ ನೀಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ರಮ ಕೈಗೊಂಡಿದ್ದಾರೆ.
ಸುರೇಶ ಕಾಂಬಳೆ ಅವರು ಕಳೆದ ಗುರುವಾರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಂಪರ್ಕಿಸಿ ಮನೆ ಬಿಡಿಸಿಕೊಡುವಂತೆ ವಿನಂತಿಸಿದ್ದರು. ಸಚಿವರ ಸೂಚನೆಯಂತೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಫೈನಾನ್ಸ್ ಸಂಸ್ಥೆಯವರನ್ನು ಕರೆಸಿ ಮಾತುಕತೆ ನಡೆಸಿದ್ದರು. ಬಾಕಿ ಇರುವ ಹಣ ತುಂಬಲು 2 ತಿಂಗಳು ಕಾಲಾವಕಾಶ ನೀಡಬೇಕು ಎನ್ನುವ ಷರತ್ತಿನೊಂದಿಗೆ ತಕ್ಷಣವೇ ಮನೆಯ ಬೀಗ ತೆರವು ಮಾಡಿ ಬಿಟ್ಟುಕೊಡಬೇಕು ಎಂದು ತಾಖೀತು ಮಾಡಿದರು.
ಅದರಂತೆ ಸಚಿವರ ಆಪ್ತ ಸಹಾಯಕ ಮಹಾಂತೇಶ ಹಿರೇಮಠ ಮಂಗಳವಾರ ಸ್ಥಳಕ್ಕೆ ತೆರಳಿ ಬ್ಯಾಂಕ್ ಸಿಬ್ಬಂದಿಯಿಂದ ಕೀ ಪಡೆದು ಮನೆಯ ಮಾಲಿಕರಿಗೆ ಹಸ್ತಾಂತರಿಸಿದರು. ಮಂಗಳವಾರ ಸಂಜೆ ಸುರೇಶ ಕಾಂಬಳೆ ಕುಟುಂಬ ತಮ್ಮ ಮನೆಗೆ ಪ್ರವೇಶ ಮಾಡಿದೆ. ಖಾಸಗಿ ಫೈನಾನ್ಸ್‌ನವರ ಕಿರುಕುಳದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳ ನೆರವಿಗೆ ಬರುತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
![Belagavi news (3)](https://cdn-vishwavani-prod.hindverse.com/media/images/Belagavi_news_3.width-800.jpg)
ಈ ಸುದ್ದಿಯನ್ನೂ ಓದಿ | GBS Cases: ಮಹಾರಾಷ್ಟ್ರದಲ್ಲಿ ನಿಲ್ಲದ ಜಿಬಿಎಸ್ ಅಬ್ಬರ – ಇಲ್ಲಿಯವರೆಗೆ 167 ಪ್ರಕರಣ ಪತ್ತೆ
ಲಕ್ಷ್ಮಿ ಹೆಬ್ಬಾಳ್ಕರ್ ವರ್ಕ್ ಫ್ರಮ್ ಹೋಮ್: ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗಿ
![Lakshmi Hebbalkar](https://cdn-vishwavani-prod.hindverse.com/media/images/Lakshmi_Hebbalkar.width-800.jpg)
ಬೆಳಗಾವಿ: ಅಪಘಾತವೊಂದರಲ್ಲಿ(Accident) ಗಂಭೀರವಾಗಿ ಗಾಯಗೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಮಧ್ಯೆ ಮನೆಯಿಂದಲೇ ಕಾರ್ಯ ನಿರ್ವಹಣೆ ಮಾಡುತ್ತಿರುವ ಅವರು ನಿನ್ನೆ(ಫೆ.10) ವಿಡಿಯೊ ಕಾನ್ಫರೆನ್ಸ್(Video Conference) ಮೂಲಕ ಬಜೆಟ್ ಪೂರ್ವಭಾವಿ ಸಭೆಯಲ್ಲಿ(Budget Meeting) ಭಾಗಿಯಾಗಿದ್ದಾರೆ. ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಮುಖ್ಯಮಂತ್ರಿಗೆ ವರದಿ ಒಪ್ಪಿಸಿದ್ದಾರೆ. ವಿಶ್ರಾಂತಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಹೆಬ್ಬಾಳ್ಕರ್ ಕಳೆದ ಕೆಲವು ದಿನಗಳಿಂದ ಬೆಳಗಾವಿಯ ಕುವೆಂಪು ನಗರದಲ್ಲಿರುವ ತಮ್ಮ ಗೃಹ ಕಚೇರಿಯಿಂದಲೇ ಇಲಾಖೆಯ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್ ಹೆಬ್ಬಾಳ್ಕರ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅಪಘಾತದಿಂದಾಗಿ ಸಚಿವೆಯ ಬೆನ್ನು ಮತ್ತು ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿತ್ತು. ವೈದ್ಯರ ಸಲಹೆಯಂತೆ ಹೆಬ್ಬಾಳ್ಕರ್ ತಮ್ಮ ಮನೆಯಲ್ಲಿ ಸುಧಾರಿಸಿಕೊಳ್ಳುತ್ತಿದ್ದಾರೆ. ವಿಶ್ರಾಂತಿ ನಡುವೆಯೂ ತಮ್ಮ ಇಲಾಖೆಗೆ ಸಂಬಂಧಪಟ್ಟ ಕೆಲಸಗಳನ್ನು ಗೃಹ ಕಚೇರಿಯಿಂದಲೇ ನಿರ್ವಹಿಸುತ್ತಿದ್ದಾರೆ. ಬಜೆಟ್ ಅಧಿವೇಶನದ ಹಿನ್ನೆಲೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಒಪ್ಪಿಸಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಿಎಂ ಜತೆಗೆ ಮಹತ್ವದ ಮಾತುಕತೆ ನಡೆಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.