ಬೆಂಗಳೂರು: ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನೊಬ್ಬ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಕಬ್ಬನ್‌ಪೇಟೆ ಪ್ರದೇಶದಲ್ಲಿ ನಡೆದಿದೆ. ಮೃತನನ್ನು ಜುನೈದ್ ಎಂದು ಗುರುತಿಸಲಾಗಿದೆ. ಜುನೈದ್, ಪಾದಚಾರಿಯೊಬ್ಬರ ಮೊಬೈಲ್ ಫೋನ್ ಕಸಿದು ಪರಾರಿಯಾಗುತ್ತಿದ್ದ ವೇಳೆ ಸ್ಥಳೀಯರು ಆತನನ್ನು ಹಿಡಿಯಲು ಬೆನ್ನಟ್ಟಿದ್ದಾರೆ. ಜನರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡುತ್ತಿದ್ದ ಜುನೈದ್ ಏಕಾಏಕಿ ಕುಸಿದು ಬಿದ್ದು, ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಜುನೈದ್ ಕುಸಿದು ಬೀಳುತ್ತಿದ್ದಂತೆ ಆತನನ್ನು ಸ್ಥಳದಲ್ಲಿದ್ದವರು ಹಾಗೂ ಪೊಲೀಸರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಈ ಕುರಿತು ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ವಿವರ:
ಕಬ್ಬನ್‌ಪೇಟೆಯ ರಸ್ತೆಯಲ್ಲಿ ಸೋಮವಾರ ಪಾದಚಾರಿಯೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಆರೋಪಿಗಳಾದ ಜುನೈದ್ ಮತ್ತು ಅರ್ಬಾಜ್, ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಪಾದಚಾರಿಯ ಬಳಿ ಬರುತ್ತಿದ್ದಂತೆ ಕ್ಷಣಮಾತ್ರದಲ್ಲಿ ಅವರ ಕೈಲಿದ್ದ ಮೊಬೈಲ್ ಕಸಿದುಕೊಂಡು ಬೈಕ್ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ಮೊಬೈಲ್ ಕಳೆದುಕೊಂಡ ವ್ಯಕ್ತಿ, ʼಕಳ್ಳರು... ಕಳ್ಳರು..." ಎಂದು ಜೋರಾಗಿ ಕೂಗಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ತಲೆಯ ಮೇಲೆ ಭಾರವಾದ ಮೂಟೆಯನ್ನು ಹೊತ್ತು ಸಾಗುತ್ತಿದ್ದ ಕಾರ್ಮಿಕನೊಬ್ಬ, ಕಳ್ಳರು ಬರುತ್ತಿದ್ದ ಬೈಕ್ ಮೇಲೆ ಮೂಟೆ ಎಸೆದಿದ್ದಾನೆ. ಇದರಿಂದ ಕಳ್ಳರು ನಿಯಂತ್ರಣ ತಪ್ಪಿ ಬಿದ್ದಿದ್ದಾರೆ.
Lokayukta Raid: ಲಂಚ ಸ್ವೀಕರಿಸುತ್ತಿದ್ದ ಸಿಎಂ ಪದಕ ವಿಜೇತ ಅಧಿಕಾರಿ ಲೋಕಾಯುಕ್ತ ಬಲೆಗೆ
ಜನರು ತಮ್ಮನ್ನು ಬೆನ್ನಟ್ಟಿರುವುದು ಕಂಡು ಗಾಬರಿಯಾದ ಕಳ್ಳರು, ತಾವು ಕದ್ದಿದ್ದ ಮೊಬೈಲ್ ಹಾಗೂ ತಮ್ಮ ಸ್ಕೂಟರ್ ಅನ್ನು ಘಟನಾ ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಹೋದ ಕಳ್ಳ ಜುನೈದ್, ತೀವ್ರವಾಗಿ ಆಯಾಸಗೊಂಡಿದ್ದಾನೆ. ಕಬ್ಬನ್‌ಪೇಟೆಯ ರಸ್ತೆಯೊಂದರ ಫುಟ್‌ಪಾತ್ ಮೇಲೆ ಸುಧಾರಿಸಿಕೊಳ್ಳಲು ಕುಳಿತಿದ್ದಾಗ ಏಕಾಏಕಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಹೃದಯಾಘಾತದಿಂದ ಆತ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.