ನವದೆಹಲಿ: ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಭಾರತ ತಂಡ, ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಆರಂಭವಾಗುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಸಜ್ಜಾಗುತ್ತಿದೆ. ಈ ಟೂರ್ನಿಯಲ್ಲಿ ಆಡುವ ಭಾರತ ತಂಡದ ಪ್ಲೇಯಿಂಗ್ XI ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಭಾರತ ತಂಡದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ, ಮುಂಬರುವ 50 ಓವರ್‌ಗಳ ಟೂರ್ನಿಗೆ ತನ್ನ ನೆಚ್ಚಿನ ಪ್ಲೇಯಿಂಗ್ XI ಅನ್ನು ಪ್ರಕಟಿಸಿದ್ದಾರೆ. ಆದರೆ, ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ.
ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಫಿಟ್ನೆಸ್ ಗಾಯದಿಂದ ಇನ್ನೂ ಸಂಪೂರ್ಣ ಗುಣಮುಖರಾಗುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಏಕದಿನ ಸರಣಿಯಲ್ಲಿ ಮಿಂಚಿದ್ದ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಗಾಯದ ಕಾರಣ ಭಾರತ ತಂಡದಿಂದ ಒಂದೂವರೆ ವರ್ಷ ದೂರ ಉಳಿದಿದ್ದ ಮೊಹಮ್ಮದ್ ಶಮಿ ಇದೀಗ ಮರಳಿರುವುದು ಪ್ಲಸ್ ಪಾಯಿಂಟ್ ಆಗಿದೆ. ಆದರೆ, ತಮ್ಮ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟಿರುವ ಸುರೇಶ್ ರೈನಾ, ಯುವ ವೇಗಿ ಹರ್ಷಿತ್ ರಾಣಾಗೆ ಅವಕಾಶ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ
ಸ್ಟಾರ್ ಸ್ಪೋರ್ಟ್ಸ್ ಜೊತೆ ಸಂಭಾಷಣೆ ನಡೆಸಿದ ಸುರೇಶ್ ರೈನಾಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡದ ಪ್ಲೇಯಿಂಗ್ XI ಅನ್ನು ಕಟ್ಟುವಂತೆ ಕೇಳಲಾಯಿತು. ಈ ವೇಳೆ ಅವರು ಕಟ್ಟಿದ ತಂಡದಲ್ಲಿ ದೊಡ್ಡ ಅಚ್ಚರಿ ಸಂಗತಿಯೇನೆಂದರೆ, ಹೊಸ ಚೆಂಡಿನಲ್ಲಿ ಬೌಲ್ ಮಾಡಲು ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಿದ್ದು. ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ಸೀಮರ್ ಆಗಿ ರೈನಾ ಆಯ್ಕೆ ಮಾಡಿದ್ದಾರೆ.
"ಹರ್ಷಿತ್ ರಾಣಾ ತನ್ನ ಬೌಲಿಂಗ್‌ನಲ್ಲಿ ಹಲವು ವಿಭಿನ್ನ ಎಸೆತಗಳನ್ನು ಹೊಂದಿದ್ದಾರೆ. ಸ್ಲೋ ಬೌನ್ಸರ್ ಹಾಗೂ ಚೆಂಡನ್ನು ಅವರು ಸ್ವಿಂಗ್ ಮಾಡಬಲ್ಲರು. ಹಾರ್ದಿಕ್ ಪಾಂಡ್ಯ ಅವರು ತಂಡದಲ್ಲಿ ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅಂದ ಹಾಗೆ ಅವರನ್ನು ಈ ಹಿಂದೆ ಅಷ್ಟೊಂದು ಬಳಸಿಕೊಂಡಿರಲಿಲ್ಲ," ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
ವರುಣ್ ಚಕ್ರವರ್ತಿ ಇನ್, ಜಸ್‌ಪ್ರೀತ್ ಬುಮ್ರಾ ಔಟ್: ಚಾಂಪಿಯನ್ಸ್ ಟ್ರೋಫಿಗೆ ಭಾರತದ ಪರಿಷ್ಕೃತ ತಂಡ!
ಭಾರತ ತಂಡಕ್ಕೆ ಕುಲ್ದೀಪ್ ಯಾದವ್ ಟ್ರಂಪ್ ಕಾರ್ಡ್
ಭಾರತ ತಂಡಕ್ಕೆ ಕುಲ್ದೀಪ್ ಯಾದವ್ ಟ್ರಂಪ್ ಕಾರ್ಡ್ ಆಗಿದ್ದಾರೆ. ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಇಬ್ಬರನ್ನು ಮಧ್ಯಮ ಓವರ್‌ಗಳಲ್ಲಿ ಬಳಸಿಕೊಳ್ಳಬಹುದೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಮಧ್ಯಮ ಓವರ್‌ಗಳಲ್ಲಿ ಚೆಂಡನ್ನು ಸ್ಟಂಪ್ ಟು ಸ್ಟಂಪ್ ಬೌಲ್ ಮಾಡುತ್ತಾರೆ. ಹಾಗಾಗಿ ತಂಡದಲ್ಲಿ ಕುಲ್ದೀಪ್ ಯಾದವ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ನ್ಯೂಜಿಲೆಂಡ್ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್ ಜಾಸ್ತಿ ಇದ್ದಾರೆ ಹಾಗೂ ಪಾಕಿಸ್ತಾನ ತಂಡದಲ್ಲಿ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಸ್ವೀಪ್ ಶಾಟ್ ಅನ್ನು ಹೊಡೆಯುತ್ತಾರೆ. ಹಾಗಾಗಿ, ಕುಲ್ದೀಪ್ ಯಾದವ್ ಸ್ಪಿನ್ ಚಳಕ ತಂಡಕ್ಕೆ ನೆರವಾಗಲಿದೆ. ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವ ಮೂಲಕ ಅವರು ದೊಡ್ಡ ಶಾಟ್‌ಗಳನ್ನು ಹೊಡೆಯಲು ಕುಲ್ದೀಪ್ ಯಾದವ್ ಪ್ರೇರೇಪಿಸುತ್ತಾರೆ ಹಾಗೂ ವಿಕೆಟ್‌ಗಳನ್ನು ಕಬಳಿಸಲಿದ್ದಾರೆ," ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡದ ಆಟಗಾರರಿಗೆ ಶಾಕ್ ನೀಡಿದ ಬಿಸಿಸಿಐ!
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತದ ಪ್ಲೇಯಿಂಗ್ XI ಹೆಸರಿಸಿದ ಸುರೇಶ್ ರೈನಾ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್