ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Money Tips: ಸಾಲ ಮಾಡಿಯೂ ನಿಶ್ಚಿಂತೆಯಿಂದ ಇರಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Money Tips: ಸಾಲ ಕೆಲವೊಮ್ಮೆ ಶೂಲವಾಗಿ ಇರಿಯುತ್ತದೆ ಎನ್ನುವ ಮಾತಿದೆ. ಅದು ನಿಜವೂ ಹೌದು, ಅನಿವಾರ್ಯವಾಗಿ ಸಾಲ ಮಅಡುವ ನಾವು ಅದನ್ನು ಸರಿಯಾಗಿ ಮರುಪಾವತಿಸದಿದ್ದರೆ ಉರುಳಾಗಿ ನಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಹಾಗಾಗದಿರಲು ಸಾಲಕ್ಕೆ ಅಪ್ಲೈ ಮಾಡುವ ಮುನ್ನವೇ ಕೆಲವೊಂದಿಷ್ಟು ಅಂಶಗಳತ್ತ ಗಮನ ಹರಿಸಬೇಕಾಗುತ್ತದೆ. ಈ ಕುರಿತಾದ ವಿವರ ಇಲ್ಲಿದೆ.

ಬೆಂಗಳೂರು: ದಿನ ಕಳೆದಂತೆ ಜೀವನ ವೆಚ್ಚ ದುಬಾರಿಯಾಗುತ್ತಿದ್ದು, ಪ್ರತಿಯೊಂದು ವಸ್ತುವಿನ ಬೆಲೆ ಹೆಚ್ಚಾಗುತ್ತಿದೆ. ಹೀಗಾಗಿ ಮನೆ ನಿರ್ಮಾಣ / ಖರೀದಿ, ವಾಹನ ಖರೀದಿ, ಶಿಕ್ಷಣ, ಕೃಷಿ ಅಬಿವೃದ್ಧಿ ಮುಂತಾದ ಅಗತ್ಯಗಳಿಗೆ ಸಾಮಾನ್ಯ ವರ್ಗದವರು ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಪರ್ಸನಲ್‌ ಲೋನ್‌, ಹೋಮ್‌ ಲೋನ್‌, ಎಜ್ಯುಕೇಷನ್‌ ಲೋನ್‌ ಹೀಗೆ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ಸಾಲ ಲಭ್ಯ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸಾಲದ ಮಾದರಿಯನ್ನು ಆಯ್ಕೆ ಮಾಡಬಹುದು. ನೀವು ಮೊದಲ ಬಾರಿಗೆ ಲೋನ್‌ಗೆ ಅಪ್ಲೈ ಮಾಡುವುದಿದ್ದರೆ ಕೆಲವೊಂದು ಅಂಶಗಳತ್ತ ಗಮನ ಹರಿಸಬೇಕಾಗುತ್ತದೆ. ಇದರಿಂದ ಸಾಲ ಇದ್ದರೂ ನೆಮ್ಮದಿಯಾಗಿ ಇರಬಹುದು. ಈ ಬಗ್ಗೆ ಟಿಪ್ಸ್‌ ಇಲ್ಲಿದೆ (Money Tips).
ಷರತ್ತುಗಳನ್ನು ಗಮನವಿಟ್ಟು ಓದಿ
ಯಾವುದೇ ಸಾಲವಾದರೂ ಅದು ತನ್ನದೇ ಆದ ಷರತ್ತು ಮತ್ತು ನಿಯಮವನ್ನು ಒಳಗೊಂಡಿರುತ್ತದೆ. ಹೀಗಾಗಿ ಯಾವುದೇ ಸಾಲಕ್ಕೆ ಸಹಿ ಹಾಕುವ ಮುನ್ನ ಷರತ್ತುಗಳನ್ನು ಗಮನವಿಟ್ಟು ಓದಿ. ಜತೆಗೆ ಅದು ಒಳಗೊಂಡಿರುವ ಬಡ್ಡಿದರ, ಸಾಲ ಮರುಪಾವತಿಸಬೇಕಾದ ಅವಧಿ ಮತ್ತಿತರ ವಿವರಗಳನ್ನು ಗಮನಿಸಿ.
ಬಜೆಟ್‌ ತಯಾರಿಸಿ
ಸಾಲ ಪಡೆಯಲು ನೀವು ನಿರ್ಧರಿಸಿದರೆ ಕೂಡಲೇ ಬಜೆಟ್‌ ತಯಾರಿಸಿ. ಇದರಿಂದ ಅನಗತ್ಯ ಖರ್ಚುಗಳನ್ನು ತಡೆಗಟ್ಟಬಹುದು. ಮನೆ ಖರ್ಚಿಗೆ ಹಣ ಹೊಂದಿಸುವ ಜತೆಗೆ ಸಾಲ ಮರುಪಾವತಿಗಾಗಿ ಒಂದಷ್ಟು ಹಣವನ್ನು ಮೀಸಲಿಡಿ ಮತ್ತು ಈ ಬಜೆಟ್‌ ಅನ್ನು ಆದಷ್ಟು ಫಾಲೋ ಮಾಡಿ.
ಸಮಯಕ್ಕೆ ಸರಿಯಾಗಿ ಮರುಪಾವತಿಸಿ
ಸಾಲ ಪಡೆಯುವ ಜತೆಗೆ ಅದನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದೂ ಮುಖ್ಯ. ಇದಕ್ಕಾಗಿ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಪಾವತಿಯಾಗುವಂತಹ ಅಟೋಮ್ಯಾಟಿಕ್‌ ಪೇಮೆಂಟ್‌ ಆಪ್ಶನ್‌ ಆಯ್ಕೆ ಮಾಡಿ. ಇಲ್ಲವೇ ಸಾಲ ಮರುಪಾವತಿಸುವುದನ್ನು ನೆನಪಿಸುವ ರಿಮೈಂಡರ್‌ ಆಯ್ಕೆ ಬಳಸಿಕೊಳ್ಳಿ.
ಸರಿಯಾದ ಬ್ಯಾಂಕ್‌ ಆಯ್ಕೆ ಮಾಡಿ
ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ವಿವಿಧ ಬ್ಯಾಂಕ್‌ಗಳಲ್ಲಿ ವಿಚಾರಿಸಿ. ಬಡ್ಡಿದರ, ಶುಲ್ಕ, ಗ್ರಾಹಕರ ರಿವ್ಯೂ ಮುಂತಾದ ಅಂಶಗಳನ್ನು ಹೋಲಿಸಿ ನೋಡಿ. ಸ್ಪರ್ಧಾತ್ಮಕ ಬಡ್ಡಿದರ, ಸಾಲ ಮರುಪಾವತಿಗೆ ಇರುವ ಬಹು ಆಯ್ಕೆ ಮತ್ತು ಉತ್ತಮ ಗ್ರಾಹಕ ಸೇವೆಯ ಹಿನ್ನೆಲೆ ಹೊಂದಿರುವ ಸಾಲದಾರತರನ್ನು ಆಯ್ಕೆ ಮಾಡಿ. ಯಾವುದೇ ಅನುಮಾನ ಇದ್ದರೂ ಅಧಿಕೃತರಲ್ಲಿ ಪ್ರಶ್ನಿಸಿ ಬಗೆಹರಿಸಿಕೊಳ್ಳಿ.
ಕ್ರೆಡಿಟ್‌ ಸ್ಕೋರ್‌ ಗಮನದಲ್ಲಿರಲಿ
ಸಿಬಿಲ್‌ ಸ್ಕೋರ್‌ ನಿಮ್ಮ ಸಾಲದ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಸಿಬಿಲ್‌ ಸ್ಕೋರ್‌ ಉತ್ತಮವಾಗಿದ್ದಷ್ಟೂ ಒಳ್ಳೆಯದು. ಹೆಚ್ಚಿನ ಕ್ರೆಡಿಟ್‌ ಸ್ಕೋರ್‌ ಇದ್ದರೆ ಸಾಲ ದೊರೆಯುವ ಸಾಧ್ಯತೆ ಅಧಿಕ. ಜತೆಗೆ ಬಡ್ಡಿದರವೂ ಕಡಿಮೆ ಇರುತ್ತದೆ. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಅದರಲ್ಲಿಯೂ ಸಿಬಿಲ್ ಸ್ಕೋರ್‌ ಅನ್ನು 750ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವುದು ಅನಿವಾರ್ಯ. ಒಂದುವೇಳೆ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ದರೆ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ಪರಿಶೀಲಿಸಿ. ನೀವು ಮೊದಲೇ ಯಾವುದಾದರೂ ಸಾಲ ಪಡೆದುಕೊಂಡಿದ್ದರೆ ಅದರ ಪಾವತಿ, ನಿಮ್ಮ ಬ್ಯಾಂಕ್‌ ಟ್ರಾನ್ಸಾಕ್ಷನ್‌ ಆಧಾರದ ಮೇಲೆ ಸಿಬಿಲ್‌ ಸ್ಕೋರ್‌ ಅನ್ನು ನಿರ್ಣಯಿಸಲಾಗುತ್ತದೆ. ಅಂದರೆ ಸಕಾಲಕ್ಕೆ ಸಾಲ ಮರುಪಾವತಿ, ಸಾಲ ಬಳಕೆಯ ಪ್ರಮಾಣ, ಯಾವೆಲ್ಲ ಉದ್ದೇಶಗಳಿಗೆ ಸಾಲ ಪಡೆಯಲಾಗಿದೆ ಎನ್ನುವುದನ್ನು ಪರಿಗಣಿಸಿ ಸಿಬಿಲ್‌ ಸ್ಕೋರ್‌ ಅನ್ನು ನಿರ್ಧರಿಸಲಾಗುತ್ತದೆ.
ಇಎಂಐ ಲೆಕ್ಕ ಹಾಕಿ
ಪ್ರತಿ ತಿಂಗಳು ಪಾವತಿಸಬಹುದಾದ ಇಎಂಐ ಅನ್ನು ಸರಿಯಾಗಿ ಲೆಕ್ಕ ಹಾಕಿ. ಇಎಂಐ ಹೆಚ್ಚಾಗಿ ಅವಧಿ ಕಡಿಮೆ ಇರುವ, ಇಎಂಐ ಕಡಿಮೆ ಇದ್ದು ಅವಧಿ ಹೆಚ್ಚಿರುವ ಆಯ್ಕೆ ಲಭ್ಯ. ಈ ಎರಡೂ ಆಯ್ಕೆಗೆ ತನ್ನದೇ ಆದ ಅನುಕೂಲ, ಅನಾನೂಕೂಲ ಇದೆ. ಇದನ್ನು ಪರಿಶೀಲಿಸಿ.
image-1c6b4a7f-f470-4ea7-b45a-d31240d3f724.jpg
ಎಮರ್ಜೆನ್ಸಿ ಫಂಡ್‌
ಯಾವಾಗ ಏನು ಸಂಭವಿಸುತ್ತದೆ ಎನ್ನುವುದನ್ನು ಮೊದಲೇ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಎಮರ್ಜೆನ್ಸಿ ಫಂಡ್‌ ಅನ್ನು ತಯಾರಿಸಿ. ಅಂದರೆ 4-5 ತಿಂಗಳ ಸಂಬಳದಷ್ಟು ಹಣ ನಿಮ್ಮ ಸೇವಿಂಗ್ ಅಕೌಂಟ್‌ನಲ್ಲಿ ಯಾವತ್ತೂ ಇರಲಿ. ಅನಿರೀಕ್ಷಿತ ಅಗತ್ಯಗಳಿಗೆ ಇದು ನೆರವಾಗುತ್ತದೆ.
ಈ ಸುದ್ದಿಯನ್ನೂ ಓದಿ: Life Insurance: ಹೂಡಿಕೆಗೆ ಮುನ್ನ ಜೀವ ವಿಮೆ ಖರೀದಿಸಿ, ಲೈಫ್ ಇನ್ಷೂರೆನ್ಸ್ ಗಳಲ್ಲಿ ಎಷ್ಟು ವಿಧ?