ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tejaswi Surya: ಹಳದಿ ಮೆಟ್ರೋದಲ್ಲಿ ಪ್ರಯಾಣಿಸಿದ ತೇಜಸ್ವಿ ಸೂರ್ಯ, ಫಸ್ಟ್‌ ಡೇ ಫಸ್ಟ್‌ ಶೋ ಹೌಸ್‌ಫುಲ್‌ ಎಂದ ಸಂಸದ

Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗ ಸಂಚಾರದ ಮೊದಲ ದಿನದಂದು, ಸಾವಿರಾರು ಪ್ರಯಾಣಿಕರೊಂದಿಗೆ ನಾನೂ ಪ್ರಯಾಣಿಸಿದೆ. ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ಬೊಮ್ಮಸಂದ್ರದ ಕಾರ್ಖಾನೆಯ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು ಮತ್ತು ಇತರ ಸಾವಿರಾರು ಜನ ಅಲ್ಲಿ ನಮ್ಮೊಂದಿಗೆ ಪ್ರಯಾಣಿಸಿದ್ದು, ನೂತನ ಮಾರ್ಗದಲ್ಲಿನ ಅವರ ಪ್ರಯಾಣ ಅತ್ಯಂತ ಖುಷಿ ಮೂಡಿಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ಬರೆದಿದ್ದಾರೆ.

ಬೆಂಗಳೂರು: ಭಾನುವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಂದ ಉದ್ಘಾಟನೆಗೊಂಡಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲಿನಲ್ಲಿ (Namma Metro Yellow line) ಸೋಮವಾರ ವಾಣಿಜ್ಯ ಸಂಚಾರ ಆರಂಭವಾಗಿದ್ದು, ಮೊದಲ ದಿನವೇ ಸಂಸದ ತೇಜಸ್ವಿ ಸೂರ್ಯ (MP Tejaswi Surya) ಪ್ರಯಾಣಿಸಿ ಪ್ರಯಾಣಿಕರ ಜೊತೆ ಒಡನಾಡಿದರು. ನಂತರು ಅವರು ʼಫಸ್ಟ್‌ ಡೇ ಫಸ್ಟ್‌ ಶೋ ಹೌಸ್‌ಫುಲ್ʼ ಎಂದು ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ನಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.

ಕೋವಿಡ್ ಹಾಗೂ ಇತರೆ ಕಾರಣಗಳಿಂದ ನಿರೀಕ್ಷೆಗಿಂತ ಕೊಂಚ ತಡವಾಗಿ ಆರಂಭವಾದರೂ ಹಳದಿ ಮಾರ್ಗದ ಮೆಟ್ರೋಗೆ ಜನರ ಸಂಚಾರ ಮೊದಲ ದಿನದಿಂದಲೇ ಫುಲ್‌ ರಶ್ ಆಗಿರುವುದು ಕಂಡುಬಂದಿದೆ. ಮೊದಲ ದಿನ 56,000 ಜನ ಇದರಲ್ಲಿ ಪ್ರಯಾಣಿಸಿದ್ದಾರೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ತಮ್ಮ ಪ್ರಯಾಣದ ಕೆಲವು ಫೋಟೋ ಹಂಚಿಕೊಂಡು, ಒಂದಷ್ಟು ಸಂತಸದ ಕ್ಷಣಗಳ ಮಾಹಿತಿಯನ್ನು ಅಕ್ಷರಕ್ಕಿಳಿಸಿದ್ದಾರೆ.

ತೇಜಸ್ವಿ ಸೂರ್ಯ ಬರೆದದ್ದೇನು?

'ಇಂದು, ನಮ್ಮ ಮೆಟ್ರೋ ಹಳದಿ ಮಾರ್ಗ ಸಂಚಾರದ ಮೊದಲ ದಿನದಂದು, ಸಾವಿರಾರು ಪ್ರಯಾಣಿಕರೊಂದಿಗೆ ನಾನೂ ಪ್ರಯಾಣಿಸಿದೆ. ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ಬೊಮ್ಮಸಂದ್ರದ ಕಾರ್ಖಾನೆಯ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು ಮತ್ತು ಇತರ ಸಾವಿರಾರು ಜನ ಅಲ್ಲಿ ನಮ್ಮೊಂದಿಗೆ ಪ್ರಯಾಣಿಸಿದ್ದು, ನೂತನ ಮಾರ್ಗದಲ್ಲಿನ ಅವರ ಪ್ರಯಾಣ ಅತ್ಯಂತ ಖುಷಿ ಮೂಡಿಸಿದೆ. ಬಹುದಿನಗಳಿಂದ ಕಾಯುತ್ತಿದ್ದ ಈ ಮಾರ್ಗದಲ್ಲಿನ ಸಂಚಾರ ಆರಂಭವಾಗಿರುವುದು ಹೆಚ್ಚಿನವರಲ್ಲಿ ಖುಷಿ ತಂದಿದ್ದು ವಿಶೇಷ.

ದೈನಂದಿನ ಪ್ರಯಾಣವು ಈ ಹಿಂದೆ ಈ ಒಂದು ಮಾರ್ಗದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು, ಈಗ ಕೇವಲ 35 ನಿಮಿಷಗಳಲ್ಲಿ ತಲುಪಬಹುದು ಎಂದು ಹಲವರು ನನ್ನೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ. ಉಳಿಸಿದ ಸಮಯದಲ್ಲಿ ಅವರು ಏನು ಮಾಡುತ್ತಾರೆ ಎಂದು ನಾನು ಕೇಳಿದಾಗ, ಅವರ ಉತ್ತರಗಳು ಸ್ಪೂರ್ತಿದಾಯಕವಾಗಿದ್ದವು, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು, ಮಕ್ಕಳಿಗೆ ಪಾಠ ಮಾಡಲು ಸಹಾಯ ಮಾಡುವುದು, ಆರೋಗ್ಯದ ಕಡೆ ಗಮನಹರಿಸುವುದು, ಅಥವಾ ಕಚೇರಿಯಲ್ಲಿ ಇನ್ನಷ್ಟು ಕೆಲಸ ಮಾಡುವುದು.

ಪ್ರತಿಯೊಬ್ಬರ ಉತ್ತರದಲ್ಲಿ, ಉತ್ತಮ ಜೀವನಮಟ್ಟದ ಆಶಯವಿತ್ತು. ಹಲವಾರು ಪ್ರಯಾಣಿಕರು ತಮ್ಮ ಖಾಸಗಿ ವಾಹನಗಳನ್ನು ಬಿಟ್ಟು ಸಂತೋಷದಿಂದ ಮೆಟ್ರೋದಲ್ಲಿ ಪ್ರಯಾಣಿಸುವುದಾಗಿ ತಿಳಿಸಿದ್ದು, ಸಾರ್ವಜನಿಕ ಸಾರಿಗೆಯು ಆರಾಮದಾಯಕ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತಿದ್ದರೆ, ಜನರು ಅದನ್ನು ತಮ್ಮ ಮೊದಲ ಆಯ್ಕೆಯಾಗಿ ಸ್ವೀಕರಿಸುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಸಂಕೇತವಾಗಿದೆ. ಹೆಚ್ಚು ಮೆಟ್ರೋ ಸೇವೆಗಳನ್ನು ಒದಗಿಸಬೇಕೆಂಬುದು ಒಂದು ಸಾಮಾನ್ಯ ಕೋರಿಕೆಯಾಗಿತ್ತು. ಈಗಾಗಲೇ ಈ ಕೆಲಸ ಮಾಡುತ್ತಿದ್ದೇವೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ.



ನಾನು ಟಿಟಾಗಢ್‌ನ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ್ದು, ಅಕ್ಟೋಬರ್‌ನಿಂದ ಪ್ರತಿ ತಿಂಗಳು ಎರಡು ಹೊಸ ರೈಲು ಸೆಟ್‌ಗಳನ್ನು ತಲುಪಿಸಲಾಗುವುದು ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಒಂದು ಹೆಚ್ಚುವರಿ ರೈಲು ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ದೃಢಪಡಿಸಿರುತ್ತಾರೆ. ಆರ್.ವಿ. ರಸ್ತೆ ನಿಲ್ದಾಣದಲ್ಲಿ ಜನಸಂದಣಿಯನ್ನು ಗಮನಿಸಿ, ಉತ್ತಮ ಪ್ರಯಾಣಿಕರ ಸಂಚಾರಕ್ಕಾಗಿ ತಕ್ಷಣವೇ ಸ್ಟೀಲ್ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ.

ಜನರಲ್ಲಿ ಇಂತಹ ಉತ್ಸಾಹ, ನಿರಾಳತೆ ಮತ್ತು ಸಂತೋಷವನ್ನು ನೋಡುವುದು ವೈಯಕ್ತಿಕವಾಗಿಯೂ ನನಗೆ ಸಂತಸ ತಂದಿದೆ. ಜನರಲ್ಲಿನ ಸಂತೃಪ್ತಿ ನಿಜಕ್ಕೂ ಪ್ರೇರಣಾದಾಯಿಯಾಗಿದ್ದು, ಜನರ ಸ್ಪಂದನೆ ಗಮನಿಸಿದರೆ, ಈ ರೀತಿಯ ಕಾರ್ಯಗಳು ನಮ್ಮಲ್ಲಿಯೂ ಇನ್ನಷ್ಟು ಹುಮ್ಮಸ್ಸು ತರಲಿವೆ' ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಿ ಹಳದಿ ಮಾರ್ಗದ ಮೆಟ್ರೋಗೆ ಚಾಲನೆ ನೀಡಿದ್ದರು. ಈ ವೇಳೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದರಾದ ತೇಜಸ್ವಿ ಸೂರ್ಯ, ಡಾ.ಸಿ.ಎನ್. ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: Namma Metro Yellow Line: ಇಂದಿನಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ, ಟಿಕೆಟ್‌ ದರಗಳು ಹೀಗಿವೆ

ಹರೀಶ್‌ ಕೇರ

View all posts by this author