Communal tension: ಮೈಸೂರು ಉದಯಗಿರಿ ಗಲಾಟೆಗೆ ಪ್ರಚೋದನಾಕಾರಿ ಭಾಷಣವೇ ಕಾರಣ!
ಮೈಸೂರಿನ ಉದಯಗಿರಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬ ವ್ಯಕ್ತಿ ಮೈಕ್ ಹಿಡಿದು ಪ್ರಚೋದನಾಕಾರಿ ಹೇಳಿಕೆ ಕಾರಣ ಎನ್ನಲಾಗಿದೆ. ಈತ ಮಾಡಿರುವ ಭಾಷಣದ ವಿಡಿಯೋ ವೈರಲ್ ಆಗಿದೆ. ಪ್ರಚೋದನೆ ನೀಡಿದ ಮುಷ್ತಾಕ್ ಮಕ್ಬೋಲಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.
ಮೈಸೂರು: ಉದಯಗಿರಿಯಲ್ಲಿ (Udayagiri) ಸಂಭವಿಸಿದ ಕೋಮು ಉದ್ವಿಗ್ನತೆ (Communal Tension), ಪೊಲೀಸ್ ಠಾಣೆ (Udayagiri Police Station) ಮೇಲೆ ದಾಳಿ, ಪೊಲೀಸರ ಮೇಲೆ ಕಲ್ಲು ತೂರಾಟ (Stone Pelting) ಪ್ರಕರಣದಲ್ಲಿ ಒಂದು ಸಮುದಾಯದ ಜನ ರೊಚ್ಚಿಗೇಳಲು ವ್ಯಕ್ತಿಯೊಬ್ಬನ ಪ್ರಚೋದನಾಕಾರಿ ಹೇಳಿಕೆ ಕಾರಣವಾಯಿತು ಎಂದು ತಿಳಿದುಬಂದಿದೆ. ಗಲಭೆ ನಡೆಯುವ ಮುನ್ನ ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬ ವ್ಯಕ್ತಿ ಮೈಕ್ ಹಿಡಿದು ಪ್ರಚೋದನಾಕಾರಿ ಹೇಳಿಕೆ (Provocative statement) ನೀಡಿರುವ ವಿಡಿಯೋ ವೈರಲ್ (viral vedio) ಆಗಿದೆ. ಪ್ರಚೋದನೆ ನೀಡಿದ ಮುಷ್ತಾಕ್ ಮಕ್ಬೋಲಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.
“ಧರ್ಮ ರಕ್ಷಣೆಗೆ ಬದ್ಧತೆ ನಿನ್ನೆಯೂ ಇತ್ತು, ಇವತ್ತು ಇದೆ. ಎಲ್ಲರೂ ಘೋಷಣೆ ಕೂಗಿ, ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು. ಮರಣದಂಡನೆ ವಿಧಿಸಬೇಕು. ನಿಮ್ಮ ಇಚ್ಛೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುದು. ಮೈಸೂರಿನ ಎಲ್ಲ ಮುಸ್ಲಿಮರು ಒಂದಾಗಿ ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಈ ವಿಡಿಯೋವನ್ನು ಎಲ್ಲ ಕಡೆ ಶೇರ್ ಮಾಡಿ” ಎಂದು ಮೈಕ್ ಹಿಡಿದು ಈತ ಭಾಷಣ ಮಾಡಿದ ವಿಡಿಯೋ ವೈರಲ್ ಆಗಿದೆ.
ಮುಷ್ತಾಕ್ನ ಹೇಳಿಕೆಯಿಂದ ಪ್ರಚೋದನೆಗೊಂಡು ಗಲಭೆ ನಡೆದಿದೆ ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಚೋದನೆ ನೀಡಿದ ಮುಷ್ತಾಕ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕಲ್ಲು ತೂರಾಟ ನಡೆಸಿದವರ ಗುರುತು ಪತ್ತೆ
ಕಲ್ಲು ತೂರಾಟ ನಡೆಸಿದ 50ರಿಂದ 60 ಜನರ ಗುರುತನ್ನು ಉದಯಗಿರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಠಾಣೆಯ ಸುತ್ತಮುತ್ತ ಸಿಸಿಟಿವಿ ದೃಶ್ಯ ಆಧರಿಸಿ ವ್ಯಕ್ತಿಗಳ ಗುರುತು ಪತ್ತೆ ಹಚ್ಚಲಾಗಿದೆ. ಗಲಾಟೆ ವೇಳೆ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾದ ದೃಶ್ಯಗಳನ್ನು ಸಹ ಪೊಲೀಸರು ಸಂಗ್ರಹಿಸಿದ್ದಾರೆ. ಮೊಬೈಲ್ ವಿಡಿಯೋ ಮತ್ತು ಸಿಸಿ ಕ್ಯಾಮೆರಾ ಪರಿಶೀಲನೆ ಬಳಿಕ ಕಲ್ಲು ತೂರಾಟ ಮಾಡಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಬಹುತೇಕ ಸ್ಥಳೀಯರೇ ಕಲ್ಲು ತೂರಾಟ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕಲ್ಲು ತೂರಾಟ ಮಾಡಿದವರ ಹೆಸರು, ವಿಳಾಸವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಯುತ್ತಿದೆ.
ಪ್ರಕರಣದ ಹಿನ್ನೆಲೆ
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಅಣಕ ಮಾಡಿ ಹಾಕಿದ್ದ. ಒಂದು ಸಮುದಾಯಕ್ಕೆ ಅವಮಾನ ಮಾಡುವ ರೀತಿಯ ವಾಕ್ಯಗಳನ್ನು ಬರೆದಿದ್ದ. ಇದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿತ್ತು. ಕೂಡಲೇ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿದ್ದು, ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರು, ಕೆಲ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ಗುಂಪು ಇದನ್ನು ಕೇಳದೆ, ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಇದನ್ನೂ ಓದಿ: Mysuru news: ಮೈಸೂರಿನ ಪೊಲೀಸ್ ಠಾಣೆ ಮೇಲೆ ಡಿಜೆ ಹಳ್ಳಿ ಮಾದರಿ ದಾಳಿ, ಲಾಠಿ ಚಾರ್ಜ್