ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನೀರಜ್‌ ಚೋಪ್ರಾಗೆ ಬಡ್ತಿ!

ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಹಾಗೂ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ಬಡ್ತಿ ನೀಡಲಾಗಿದೆ. ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಿಸಲಾಗಿದೆ. ಅವರ ಹೊಸ ಶ್ರೇಣಿಯು 2025ರ ಏಪ್ರಿಲ್‌ 16 ರಂದು ಜಾರಿಗೆ ಬಂದಿದೆ. ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಭಾರತೀಯ ಸೇನೆಯಲ್ಲಿ ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ಬಡ್ತಿ!

ಭಾರತೀಯ ಸೇನೆಯಲ್ಲಿ ನೀರಜ್‌ ಚೋಪ್ರಾಗೆ ಬಡ್ತಿ.

Profile Ramesh Kote May 14, 2025 9:28 PM

ನವದೆಹಲಿ: ಸ್ಟಾರ್ ಜಾವೆಲಿನ್ ಎಸೆತಗಾರ ಹಾಗೂ ಒಲಿಂಪಿಕ್ಸ್‌ ಎರಡು ಪದಕಗಳ ವಿಜೇತ ನೀರಜ್ ಚೋಪ್ರಾ (Neeraj Chopra) ಅವರಿಗೆ ಭಾರತೀಯ ಸೇನೆಯಲ್ಲಿ ಬಡ್ತಿ ಸಿಕ್ಕಿದೆ. ಚೋಪ್ರಾ ಅವರನ್ನು ಪ್ರಾದೇಶಿಕ ಸೇನೆಯಲ್ಲಿ (Territorial Army) ಲೆಫ್ಟಿನೆಂಟ್ ಕರ್ನಲ್ (Lieutenant Colonel) ಆಗಿ ನೇಮಿಸಲಾಗಿದೆ. ರಕ್ಷಣಾ ಸಚಿವಾಲಯವು ಭಾರತ ಸರ್ಕಾರದ ಅಧಿಕೃತ ವಾರಪತ್ರಿಕೆಯಾದ ಭಾರತ ಗೆಜೆಟ್‌ನಲ್ಲಿ ಇದನ್ನು ಪ್ರಕಟಿಸಿದೆ. ನೀರಜ್ ಚೋಪ್ರಾ ಅವರ ಹೊಸ ಹುದ್ದೆಯು 2025ರ ಏಪ್ರಿಲ್ 16 ರಂದು ಜಾರಿಗೆ ಬಂದಿದೆ. ಇದಕ್ಕೂ ಮೊದಲು ಅವರು ಸೇನೆಯಲ್ಲಿ ಸುಬೇದಾರ್ ಹುದ್ದೆಯನ್ನು ಅಲಂಕರಿಸಿದ್ದರು. ಇದೀಗ ಅಗ್ರ ದರ್ಜೆಯ ಹುದ್ದಗೆ ಬಡ್ತಿಯನ್ನು ಪಡೆದಿದ್ದಾರೆ.

ನೀರಜ್‌ ಚೋಪ್ರಾ ಅವರ ಒಲಿಂಪಿಕ್ಸ್‌ನಲ್ಲಿ ಸಾಧನೆಯ ಬಳಿಕ ಭಾರತದಲ್ಲಿ ಜಾವೆಲಿನ್ ಥ್ರೋ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಂಡಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಅಂದಿನಿಂದ, ಅವರು ಇಡೀ ದೇಶಕ್ಕೆ ಪರಿಚಿತರಾಗಿದ್ದಾರೆ. ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನೂ ಕೂಡ ಗೆದ್ದಿದ್ದಾರೆ.

ತವರಿನ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್​ ಕೂಟದಲ್ಲಿ ಕಣಕ್ಕಿಳಿಯಲು ನೀರಜ್‌ ಚೋಪ್ರಾ ಸಜ್ಜು

ಬೆಂಗಳೂರಿನಲ್ಲಿ ಮುಂದಿನ ವಾರ ನಿಗದಿಯಾಗಿದ್ದ ಎನ್‌ಸಿ ಕ್ಲಾಸಿಕ್ ಮುಂದೂಡಲ್ಪಟ್ಟ ನಂತರ, ನೀರಜ್ ಚೋಪ್ರಾ ಮೇ 23 ರಂದು ಪೋಲೆಂಡ್‌ನ ಚೋರ್ಜೋವ್‌ನಲ್ಲಿ ನಡೆಯಲಿರುವ 71ನೇ ಓರ್ಲೆನ್ ಜನುಸ್ಜ್ ಕುಸೊಜಿನ್ಸ್ಕಿ ಸ್ಮಾರಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನೀರಜ್ ಅವರು ವಿಶ್ವದಾದ್ಯಂತ ಮತ್ತು ಭಾರತದ ಇತರ ಕೆಲವು ಸ್ಟಾರ್ ಆಟಗಾರರೊಂದಿಗೆ ಎನ್‌ಸಿ ಕ್ಲಾಸಿಕ್‌ನಲ್ಲಿ ಭಾಗವಹಿಸಬೇಕಿತ್ತು ಮತ್ತು ಮೇ 24 ರಂದು ಕಾರ್ಯಕ್ರಮವನ್ನು ಆಯೋಜಿಸಲು ಸಹ ನಿರ್ಧರಿಸಲಾಗಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿಯ ಕಾರಣ ಅದನ್ನು ಮುಂದೂಡಲಾಗಿತ್ತು.

ಚೋರ್ಜೋವ್‌ನಲ್ಲಿ ನೀರಜ್ ಎರಡು ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗ್ರೆನಡಾದ ಆಂಡರ್ಸನ್ ಪೀಟರ್ಸ್, ಜರ್ಮನಿಯ ಜೂಲಿಯನ್ ವೆಬರ್ ಮತ್ತು ರಾಷ್ಟ್ರೀಯ ದಾಖಲೆ ಹೊಂದಿರುವ ಪೋಲೆಂಡ್‌ನ ಮಾರ್ಸಿನ್ ಕ್ರುಕೋವ್ಸ್ಕಿ ಅವರ ಜೊತೆಗೆ ಸ್ಥಳೀಯ ಆಟಗಾರರಾದ ಸಿಪ್ರಿಯನ್ ಮ್ರ್ಜಿಗ್ಲೋಡ್ ಮತ್ತು ಡೇವಿಡ್ ವ್ಯಾಗ್ನರ್ ಅವರ ಸವಾಲನ್ನು ಎದುರಿಸಲಿದ್ದಾರೆ.



ಪೋಲೆಂಡ್‌ನಲ್ಲಿ ನಡೆಯಲಿರುವ ಈ ಸ್ಪರ್ಧೆಯು ನೀರಜ್‌ಗೆ ಈ ಋತುವಿನ ಮೂರನೇ ಟೂರ್ನಿಯಾಗಲಿದೆ. ಅವರು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ಇದೀಗ ಮೇ 16 ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಅಂದಹಾಗೆ ಇಲ್ಲಿ ಅವರು 2023 ರಲ್ಲಿ (88.67 ಮೀ) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು ಮತ್ತು 2024 ರಲ್ಲಿ (88.36 ಮೀ) ಎರಡನೇ ಸ್ಥಾನ ಪಡೆದಿದ್ದರು.