ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಂಗ್ಲರ ಸೊಕ್ಕು ಮುರಿದ ಭಾರತ; ಡ್ರಾದಲ್ಲಿ ಅಂತ್ಯ ಕಂಡ 4ನೇ ಟೆಸ್ಟ್‌

IND vs ENG 4th Test: ವಾಷಿಂಗ್ಟನ್‌ ಸುಂದರ್‌ ಭಾರತ ಪರ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್‌ ಶತಕ ಬಾರಿಸಿದ ಸಾಧನೆ ಮಾಡಿರು. 35 ವರ್ಷಗಳ ಹಿಂದೆ ಕ್ರಿಕೆಟ್‌ ದೇವರು ಎಂದು ಕರೆಯುವ ಸಚಿನ್‌ ತೆಂಡೂಲ್ಕರ್‌ ಕೂಡ ಇದೇ ಮೈದಾನದಲ್ಲಿ ತಮ್ಮ ಚೊಚ್ಚಲ ಶತಕ ಖಾತೆ ತೆರೆದಿದ್ದರು. ಆಗ ಸಚಿನ್‌ಗೆ 17 ವರ್ಷ ವಯಸ್ಸು. ಆ ಪಂದ್ಯ ಕೂಡ ಭಾರತ ಸೋಲಿನಿಂದ ಪಾರಾಗಿ ಡ್ರಾ ಗೊಂಡಿತ್ತು.

ಆಂಗ್ಲರ ಸೊಕ್ಕು ಮುರಿದ ಭಾರತ; ಡ್ರಾದಲ್ಲಿ ಅಂತ್ಯ ಕಂಡ 4ನೇ ಟೆಸ್ಟ್‌

Profile Abhilash BC Jul 27, 2025 10:35 PM

ಮ್ಯಾಂಚೆಸ್ಟರ್‌: ತ್ರಿವಳಿ ಶತಕ ಸಾಹಸದೊಂದಿಗೆ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ತೋರಿದ ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡು ಆಂಗ್ಲರ ಸೊಕ್ಕು ಮುರಿದಿದೆ. ಜತೆಗೆ ಸರಣಿ ಜೀವಂತವಿರಿಸಿದೆ. ಭಾರತ ಪರ ನಾಯಕ ಶುಭಮನ್‌ ಗಿಲ್‌(103), ರವೀಂದ್ರ ಜಡೇಜಾ(107*) ಮತ್ತು ವಾಷಿಂಗ್ಟನ್‌ ಸುಂದರ್‌(101*) ಶತಕ ಬಾರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಭಾರತದ ಮೊದಲ ಇನಿಂಗ್ಸ್‌ನ 358ಕ್ಕೆ ಉತ್ತರವಾಗಿ ಇಂಗ್ಲೆಂಡ್‌ 669 ರನ್‌ ಪೇರಿಸಿ 311 ರನ್ನುಗಳ ಬೃಹತ್‌ ಲೀಡ್‌ ಸಂಪಾದಿಸಿತು. ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ಅಂತಿಮವಾಗಿ 4 ವಿಕೆಟ್‌ಗೆ 425 ರನ್‌ ಗಳಿಸಿ ಡ್ರಾ ಮಾಡಿಕೊಂಡಿತು. 2 ವಿಕೆಟಿಗೆ 174 ರನ್‌ ಗಳಿಸಿದ್ದಲ್ಲಿಂದ ಅಂತಿಮ ದಿನವಾದ ಭಾನುವಾರ ಬ್ಯಾಟಿಂಗ್‌ ಮುಂದುವರಿಸಿದ ಭಾರತ, ಆರಂಭದಲ್ಲೇ ರಾಹುಲ್‌ ವಿಕೆಟ್‌ ಕಳೆದುಕೊಂಡಿತು. 87ರನ್‌ ಗಳಿಸಿದ್ದ ರಾಹುಲ್‌ 90 ರನ್‌ ಗಳಿಸಿ ನಾಯಕ ಬೆನ್‌ ಸ್ಟೋಕ್ಸ್‌ ಎಸೆತಕ್ಕೆ ಎಲ್‌ಬಿಡಬ್ಲ್ಯು ಆದರು. ಕೇವಲ 10 ರನ್‌ ಅಂತರದಿಂದ ಶತಕ ವಂಚಿತರಾದರು. 78 ರನ್ ಗಳಿಸಿದ್ದ ಗಿಲ್‌ 103 ರನ್‌ ಗಳಿಸಿ ಜೋಫ್ರ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು.

ಮೊದಲ ಭಾರತೀಯ

ಶುಭಮನ್‌ ಗಿಲ್‌ ವಿದೇಶಿ ಟೆಸ್ಟ್ ಸರಣಿಯಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಮೈಲುಗಲ್ಲು ನೆಟ್ಟರು. ಜತೆಗೆ ಒಂದೇ ಟೆಸ್ಟ್ ಸರಣಿಯಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ ನಾಯಕರ ವಿಶೇಷ ಪಟ್ಟಿಗೆ ಸೇರಿದರು. ಇದು ಮಾತ್ರವದಲ್ಲದೆ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಎರಡನೇ ಬ್ಯಾಟರ್‌ ಎಂಬ ಹಿರಿಮೆ ಗಿಲ್‌(722*ರನ್‌) ಪಾತ್ರರಾದರು. ದಾಖಲೆ ಡಾನ್ ಬ್ರಾಡ್ಮನ್(810 ರನ್‌) ಹೆಸರಿನಲ್ಲಿದೆ.

ಜಡೇಜಾ-ಸುಂದರ್‌ ದಿಟ್ಟ ಹೋರಾಟ

ರಾಹುಲ್‌ ಮತ್ತು ಗಿಲ್‌ ವಿಕೆಟ್‌ ಪತನಗೊಂಡಾಗ ಭಾರತ ಇನಿಂಗ್ಸ್‌ ಸೋಲು ಕಾಣಬಹುದು ಎಂದು ನಿರೀಕ್ಷೆ ಮಾಡಲಾಯಿತು. ಅತ್ತ ಆಂಗ್ಲರ ಪಾಳಯಲ್ಲಿ ಅದಾಗಲೇ ಗೆಲುವಿನ ಸಂಭ್ರಮ ಕೂಡ ಮನೆ ಮಾಡಿತ್ತು. ಆದರೆ ಸ್ಪಿನ್‌ ಆಲ್‌ರೌಂಡರ್‌ಗಳಾದ ಜಡೇಜಾ ಮತ್ತು ಸುಂದರ್‌ ಸೇರಿಕೊಂಡು ತಂಡದ ರಕ್ಷಣೆಗೆ ಟೊಂಕ ಕಟ್ಟಿದರು. ಆಂಗ್ಲರ ಎಲ್ಲ ಬೌಲಿಂಗ್‌ ಅಸ್ತ್ರವನ್ನು ವಿಫಲಗೊಳಿಸಿ ಅಜೇಯ ಶತಕ ಬಾರಿಸಿ ಐತಿಹಾಸಿಕ ಡ್ರಾ ಸಾಧಿಸಿ ಮೆರೆದಾಡಿದರು. ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ 203* ರನ್‌ ಜತೆಯಾಟ ನಡೆಸಿತು.

ಸುಂದರ್‌ ಚೊಚ್ಚಲ ಶತಕ

ವಾಷಿಂಗ್ಟನ್‌ ಸುಂದರ್‌ ಭಾರತ ಪರ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್‌ ಶತಕ ಬಾರಿಸಿದ ಸಾಧನೆ ಮಾಡಿದರು. 35 ವರ್ಷಗಳ ಹಿಂದೆ ಕ್ರಿಕೆಟ್‌ ದೇವರು ಎಂದು ಕರೆಯುವ ಸಚಿನ್‌ ತೆಂಡೂಲ್ಕರ್‌ ಕೂಡ ಇದೇ ಮೈದಾನದಲ್ಲಿ ತಮ್ಮ ಚೊಚ್ಚಲ ಶತಕ ಖಾತೆ ತೆರೆದಿದ್ದರು. ಆಗ ಸಚಿನ್‌ಗೆ 17 ವರ್ಷ ವಯಸ್ಸು. ಆ ಪಂದ್ಯ ಕೂಡ ಭಾರತ ಸೋಲಿನಿಂದ ಪಾರಾಗಿ ಡ್ರಾ ಗೊಂಡಿತ್ತು.

15 ಓವರ್‌ ಬಾಕಿ ಇರುವಾಗ ನಾಯಕ ಬೆನ್‌ ಸ್ಟೋಕ್ಸ್‌ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಜಡೇಜಾ ಮತ್ತು ಸುಂದರ್‌ ಬಳಿ ಮನವಿ ಮಾಡಿಕೊಂಡರು. ಆದರೆ ಇದನ್ನು ನಿರಾಕರಿಸಿದ ಭಾರತೀಯ ಆಟಗಾರರು ಶತಕ ಬಾರಿಸಿದೊಡೆನೆ ಡ್ರಾ ಮಾಡಿಕೊಳ್ಳಲು ಸಮ್ಮತಿ ಸೂಚಿಸಿದರು. 5ನೇ ಹಾಗೂ ಅಂತಿಮ ಪಂದ್ಯ ಜುಲೈ 31ರಿಂದ ಆರಂಭವಾಗಲಿದೆ. ಟೆಸ್ಟ್ ಸರಣಿಯಲ್ಲಿ ನಾಲ್ವರು ಭಾರತೀಯ ಬ್ಯಾಟ್ಸ್‌ಮನ್‌ಗಳು (ಗಿಲ್, ರಾಹುಲ್, ಪಂತ್, ಜಡೇಜಾ) 400 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದು ಇದೇ ಮೊದಲು.