ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್‌ ಸೋʼ ಸುನಾಮಿ; ಮತ್ತೊಂದು ʼಕಾಂತಾರʼ ಎಂದ ಫ್ಯಾನ್ಸ್‌

J.P. Tuminad: ಇದುವರೆಗೆ ಸೋತು ಸೊರಗಿದ್ದ ಸ್ಯಾಂಡಲ್‌ವುಡ್‌ಗೆ ಭರ್ಜರಿ ಯಶಸ್ಸೊಂದು ಸಿಕ್ಕಿದೆ. ಕರಾವಳಿ ಪ್ರತಿಭೆಗಳು ಸೇರಿ ತೆರೆಗೆ ತಂದಿರುವ ʼಸು ಫ್ರಮ್‌ ಸೋʼ ಕನ್ನಡ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಯಾವುದೇ ಸ್ಟಾರ್‌ಗಳಿಲ್ಲದೆ ತೆರೆಗೆ ಬಂದಿರುವ ಈ ಚಿತ್ರ ಗಟ್ಟಿ ಕಥೆ, ಸರಳ ನಿರೂಪಣೆಯಿಂದಲೇ ಗಮನ ಸೆಳೆದಿದೆ.

ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್‌ ಸೋʼ ಸುನಾಮಿ; ಗಳಿಸಿದ್ದೆಷ್ಟು?

Ramesh B Ramesh B Jul 27, 2025 9:52 PM

ಬೆಂಗಳೂರು: ಸೋತು ಸೊರಗಿದ್ದ ಸ್ಯಾಂಡಲ್‌ವುಡ್‌ಗೆ ವರ್ಷದ ದ್ವಿತೀಯಾರ್ಧದಲ್ಲಿ ಗೆಲುವಿನ ಸಿಂಚನವಾಗಿದೆ. ಜು. 25ರಂದು ತೆರೆಕಂಡಿರುವ ಹೊಸಬರ ʼಸು ಫ್ರಮ್‌ ಸೋʼ (Su From So) ಹಾರರ್‌ ಕಾಮಿಡಿ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಕರಾವಳಿ ಸೊಗಡಿನ ಈ ಚಿತ್ರ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಥಿಯೇಟರ್‌ಗಳತ್ತ ಪ್ರೇಕ್ಷಕರು ಮುನ್ನುಗ್ಗುತ್ತಿದ್ದಾರೆ. ಇದು ಸ್ಯಾಂಡಲ್‌ವುಡ್‌ನ ಮತ್ತೊಂದು ʼಕಾಂತಾರʼ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಬೆಂಗಳೂರಿನಲ್ಲೂ ಬಹುತೇಕ ಕಡೆ ಶೋ ಹೌಸ್‌ ಫುಲ್‌ ಆಗುತ್ತಿದ್ದು, ಪ್ರೇಕ್ಷಕರಿಗೆ ಸಿನಿಮಾ ನೋಡಲು ಟಿಕೆಟ್ ಸಿಗದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಭಾನುವಾರದ ಶೋಗಳು ಬಹುತೇಕ ಮುಂಗಡವಾಗಿ ಬುಕ್ ಆಗಿಬಿಟ್ಟಿದ್ದವು. ಇದರಿಂದ ಹಲವರು ಟಿಕೆಟ್‌ ಸಿಗದೆ ಪರದಾಡುವಂತಾಯ್ತು. ಬಹುತೇಕ ಎಲ್ಲ ಕಡೆ ʼಕಾಂತಾರʼ ರಿಲೀಸ್‌ ಆದಾಗ ಇದ್ದ ಕ್ರೇಜ್‌ ಕಾಣಿಸಿಕೊಂಡಿದೆ. ಅಷ್ಟರ ಮಟ್ಟಿಗೆ ಇದು ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ಸುಲೋಚನ ಫ್ರಮ್‌ ಸೋಮೇಶ್ವರ ಅರ್ಥಾತ್‌ ʼಸು ಫ್ರಮ್‌ ಸೋʼ ಚಿತ್ರ ಯಾವುದೇ ಅಬ್ಬರ ಇಲ್ಲದೆ ರಿಲೀಸ್‌ ಆಗಿದ್ದು, ಸರಳವಾದ ಕಥೆಯನ್ನು ತೆರೆಮೇಲೆ ತಂದಿದೆ. ಕರಾವಳಿ ಕರ್ನಾಟಕದ ಊರೊಂದರಲ್ಲಿ ನಡೆಯುವ ಜನ ಜೀವನವನ್ನು ನಿರ್ದೇಶಕ ಜೆ.ಪಿ. ತುಮಿನಾಡ್‌ (J.P. Tuminad) ಸ್ವಾರಸ್ಯಕರವಾಗಿ ತೆರೆ ಮೇಲೆ ತಂದಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ʼಸು ಫ್ರಮ್‌ ಸೋʼ ಚಿತ್ರದ ಟ್ರೈಲರ್‌:



ಸ್ಟಾರ್‌ಗಳಿಲ್ಲದೆಯೂ ಗೆದ್ದ ಚಿತ್ರ

ಹಾಗೆ ನೋಡಿದರೆ ʼಸು ಫ್ರಮ್‌ ಸೋʼ ಚಿತ್ರದಲ್ಲಿ ಯಾವುದೇ ಸ್ಟಾರ್‌ ನಟರಿಲ್ಲ. ಜೆ.ಪಿ. ತುಮಿನಾಡ್, ರಾಜ್‌ ಬಿ. ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ಶನೀಲ್ ಗೌತಮ್‌ ಸೇರಿದಂತೆ ಬಹುತೇಕ ಕರಾವಳಿ ಕಲಾವಿದರೇ ಬಣ್ಣ ಹಚ್ಚಿದ್ದಾರೆ. ಸಿನಿಮಾ ಆರಂಭವಾದಾಗಿನಿಂದ ಕೊನೆಯವರೆಗೂ ನಗೆಗಡಲಲ್ಲಿ ತೇಲಿಸುವ ಜತೆಗೆ ಕರಾಳಿ ಭಾಗದ ಜನ ಜೀವನನ್ನು ತೆರೆದಿಡುತ್ತದೆ. ಯಾವುದೇ ಅಬ್ಬರವಿಲ್ಲದೆ, ಕಡಿಮೆ ಬಜೆಟ್‌ನಲ್ಲಿ ಚಿತ್ರ ತಯಾರಾದರೂ ಗಟ್ಟಿ ಕಥೆ, ಬಿಗಿಯಾದ ಚಿತ್ರಕಥೆಯಿಂದ ಗಮನ ಸೆಳೆಯಬಹುದು ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ ಎನಿಸಿಕೊಂಡಿದೆ. ಒಮ್ಮೆ ನೋಡಿದವರು ಮತ್ತೊಮ್ಮೆ ನೋಡಲು ಮುಂದಾಗುತ್ತಿದ್ದಾರೆ ಎನ್ನುವುದು ʼಸು ಫ್ರಮ್‌ ಸೋʼದ ಹೆಗ್ಗಳಿಕೆ. ಕರಾವಳಿ ಭಾಗದ ಭಾಷೆಯನ್ನು, ಅಲ್ಲಿನ ಜನರ ನಿತ್ಯ ಜೀವನವನ್ನು ಸಮರ್ಥವಾಗಿ ಬಳಸಿಕೊಂಡಿದ್ದು ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌.

ಈ ಸುದ್ದಿಯನ್ನೂ ಓದಿ: Mahavatar Narsimha Movie: ಆ್ಯನಿಮೇಷನ್‌ ಚಿತ್ರ ʼಮಹಾವತಾರ್‌ ನರಸಿಂಹʼಕ್ಕೆ ಶುಭ ಹಾರೈಸಿದ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ

ಗಳಿಸಿದ್ದೆಷ್ಟು?

ಬಾಯಿ ಮಾತಿನ ಪ್ರಚಾರದಿಂದಲೇ ಪ್ರೇಕ್ಷಕರ ಗಮನ ಸೆಯುತ್ತಿರುವ ಈ ಚಿತ್ರ 2 ದಿನಗಳಲ್ಲಿ ಸುಮಾರು 4 ಕೋಟಿ ರೂ. ಗಳಿಸಿದೆ. ಭಾನುವಾರ ರಜಾ ದಿನವಾದ್ದರಿಂದ ಕಲೆಕ್ಷನ್‌ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಪರಭಾಷೆಗಳತ್ತ ಹೊರಟ ಸುಲೋಚನಾ

ವಿಶೇಷ ಎಂದರೆ ಚಿತ್ರದ ಬಗ್ಗೆ ಪರಭಾಷಿಕರೂ ಇದೀಗ ಆಸಕ್ತಿ ತೋರತೊಡಗಿದ್ದಾರೆ. ಪರಿಣಾಮ ಇತರ ಭಾಷೆಯಲ್ಲಿಯೂ ರಿಲೀಸ್‌ ಮಾಡಲು ಚಿತ್ರತಂಡ ಮುಂದಾಗಿದೆ. ಆ. 1ರಂದು ‘ಸು ಫ್ರಂ ಸೋ’ ಸಿನಿಮಾದ ಮಲಯಾಳಂ ಆವೃತ್ತಿ ಕೇರಳದಲ್ಲಿ ಬಿಡುಗಡೆಯಾಗಲಿದೆ. ದುಲ್ಕರ್ ಸಲ್ಮಾನ್ ಒಡೆತನದ ವೇಫೆರರ್ ಫಿಲಮ್ಸ್​ ಕೇರಳದಾದ್ಯಂತ ಸಿನಿಮಾ ವಿತರಣೆ ಮಾಡಲಿದೆ. ಇದರ ಜತೆಗೆ ಉತ್ತರ ಭಾರತದಲ್ಲಿ ಹಿಂದಿ ಅವತರಣಿಕೆ ಬಿಡುಗಡೆಯಾಗಲಿದೆ. ದಕ್ಷಿಣದ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿರುವ ಎಎ ಫಿಲಮ್ಸ್​ ಈಗ ‘ಸು ಫ್ರಂ ಸೋ’ ಸಿನಿಮಾದ ಹಿಂದಿ ಡಬ್‌ ಅನ್ನು ಉತ್ತರ ಭಾರತದ ರಾಜ್ಯಗಳ ಪ್ರೇಕ್ಷಕರಿಗೆ ತಲುಪಿಸಲು ಮುಂದೆ ಬಂದಿದೆ ಎನ್ನಲಾಗುತ್ತಿದೆ.

ಆರಂಭದಲ್ಲಿ ‘ಸು ಫ್ರಂ ಸೋ’ ಸಿನಿಮಾವನ್ನು ಮಲಯಾಳಂಗೆ ಮಾತ್ರ ಡಬ್‌ ಮಾಡಲಾಗಿತ್ತು. ಇದೀಗ ಜನಪ್ರಿಯತೆ ಹೆಚ್ಚಾದ ಹಿನ್ನೆಲೆಯಲ್ಲಿ, ಬೇಡಿಕೆ ಸೃಷ್ಟಿಯಾದ ಕಾರಣ ಹಿಂದಿಗೂ ಡಬ್‌ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.