ದೆಹಲಿಯಲ್ಲಿ ಅಖಿಲೇಶ್ ಯಾದವ್ ಕಾಂಗ್ರೆಸ್ ಬದಲು ಆಮ್ ಆದ್ಮಿ ಪಾರ್ಟಿ ಬೆಂಬಲಿಸಿದ್ದಾರೆ
ನವದೆಹಲಿ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ (Rahul Gandhi) ಮೇಲೆ ಇಂಡಿ ಒಕ್ಕೂಟದ (INDIA) ಮಿತ್ರ ಪಕ್ಷಗಳಿಗೆ ನಂಬಿಕೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಹೇಳಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಂಡಿ ಒಕ್ಕೂಟದ ಮಿತ್ರ ಪಕ್ಷಗಳೇ ಇಂದು ತನ್ನನ್ನು ಬೆಂಬಲಿಸದಂತಹ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ ಎಂದು ಟೀಕಿಸಿದರು. ಸಮಾಜವಾದಿ ಪಾರ್ಟಿ ಇಂಡಿ ಒಕ್ಕೂಟದ ಅಂಗ ಪಕ್ಷವೇ ಆಗಿದ್ದರೂ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬದಲು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸುತ್ತಿದೆ. ಹೀಗೆ ಇಂಡಿಯ ಎಲ್ಲಾ ಮಿತ್ರಪಕ್ಷಗಳು ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಳ್ಳುತ್ತಿವೆ ಎಂದು ಹೇಳಿದರು.
ಶರದ್ ಪವಾರ್ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತೇನೆ, ರಾಹುಲ್ ಗಾಂಧಿ ಅವರನ್ನೆಲ್ಲ ಎಂದರು. ಅದೇ ರೀತಿ ಮಮತಾ ಬ್ಯಾನರ್ಜಿ, ಓಮರ್ ಅಬ್ದುಲ್ಲಾ ಯಾರೊಬ್ಬರೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅನ್ನು ಬೆಂಬಲಿಸಲು ಸಿದ್ಧರಿಲ್ಲ. ಅಂದರೆ ಕಾಂಗ್ರೆಸ್ ಅಷ್ಟರ ಮಟ್ಟಿಗೆ ವಿಶ್ವಾಸ ಕಳೆದುಕೊಂಡಿದೆ ಎಂದರು.
ಮಿತ್ರರ ಬುದ್ಧಿಮಾತು ಕೇಳಲಿ: ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಹುಲ್ ಗಾಂಧಿ ಸುಧಾರಣೆ ಕಾಣಬೇಕು ಎಂದು ಮಿತ್ರಪಕ್ಷಗಳೇ ಬುದ್ಧಿಮಾತು ಹೇಳುತ್ತಿವೆ. ರಾಹುಲ್ ಗಾಂಧಿ ವಾಸ್ತವ ಅರಿತುಕೊಳ್ಳಬೇಕು. ನಮ್ಮ ಮಾತು ಬೇಡ ಮಿತ್ರರ ಮಾತನ್ನದರೂ ಕೇಳಲಿ ಎಂದು ಸಲಹೆ ನೀಡಿದರು.
ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲ: ಕಾಂಗ್ರೆಸ್ ಸೋಲೊಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಇಂಡಿ ಮೈತ್ರಿಕೂಟದ ಇತರ ಮಿತ್ರ ಪಕ್ಷಗಳು ಅದರಿಂದ ದೂರ ಸರಿಯುತ್ತಿವೆ. ಆದರೂ ಕಾಂಗ್ರೆಸ್ ಇನ್ನೂ ಸುಧಾರಿಸಿಕೊಳ್ಳಲು ಸಿದ್ಧವಾಗಿಲ್ಲ ಎಂದು ಜೋಶಿ ಹೇಳಿದರು.
ಜನಾಭಿಮತವನ್ನು ಗೌರವಿಸಲಿ: ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಜನರ ತೀರ್ಪನ್ನು ಗೌರವದ ಭಾವನೆಯಿಂದ ಸ್ವೀಕರಿಸಬೇಕು. ಅದು ಬಿಟ್ಟು ಇವಿಎಂ ಮೇಲೆ, ಚುನಾವಣಾ ಆಯೋಗದ ಮೇಲೆ ಆರೋಪ ಹೋರಿಸುತ್ತ ಲಘುವಾಗಿ ಮಾತನಾಡುವುದು ಸಲ್ಲದು ಎಂದು ಜೋಶಿ ಆಕ್ಷೇಪಿಸಿದರು.
ಈಗ ಮತದಾರರ ಮೇಲೆ ಶಂಕೆ ಶುರುವಾಗಿದೆ ಇವರಿಗೆ. ಹಾಗಾಗಿ ರಾಹುಲ್ ಗಾಂಧಿ ಲಘು ಹೇಳಿಕೆ ನೀಡುತ್ತಿದ್ದಾರೆ. ನಾವು ಕರ್ನಾಟಕ ಮತ್ತು ಜಾರ್ಖಂಡ್ ಸೋಲನ್ನು ಒಪ್ಪಿಕೊಂಡಂತೆ ಕಾಂಗ್ರೆಸ್ ಇತರೆ ರಾಜ್ಯಗಳಲ್ಲಾದ ಸೋಲನ್ನು ಸ್ವೀಕರಿಸದೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: Pralhad Joshi: ರಾಜ್ಯದಲ್ಲಿ ಗ್ಯಾರೆಂಟಿ ಪರಿಣಾಮ ಬಗ್ಗೆ ಶಾಸಕರೇ ಧ್ವನಿ ಎತ್ತುತ್ತಿದ್ದಾರೆ: ಪ್ರಲ್ಹಾದ್ ಜೋಶಿ