ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

PAK vs NZ: ಯಂಗ್-ಲೇಥಮ್‌ ಶತಕ, ಪಾಕಿಸ್ತಾನಕ್ಕೆ ಸೋಲಿನ ಬರೆ ಎಳೆದ ನ್ಯೂಜಿಲೆಂಡ್‌!

PAK vs NZ Match Highlights: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡ ಶುಭಾರನಭ ಕಂಡಿದೆ. ಬುಧವಾರ ಕರಾಚಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ದ ನ್ಯೂಜಿಲೆಂಡ್‌ ತಂಡ 60 ರನ್‌ಗಳ ಗೆಲುವು ಪಡೆಯಿತು. ಕಿವೀಸ್‌ ಪರ‌ ಟಾಮ್‌ ಲೇಥನ್ ಹಾಗೂ ವಿಲ್‌ ಯಂಗ್‌ ಶತಕವನ್ನು ಸಿಡಿಸಿದರು.

ಚಾಂಪಿಯನ್ಸ್‌ ಟ್ರೋಫಿ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲು!

ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್‌ ತಂಡಕ್ಕೆ ಭರ್ಜರಿ ಜಯ!

Profile Ramesh Kote Feb 19, 2025 11:34 PM

ಕರಾಚಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆತಿಥೇಯ ಪಾಕಿಸ್ತಾನ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಇಲ್ಲಿನ ನ್ಯಾಷನಲ್‌ ಸ್ಟೇಡಿಯಂನಲ್ಲಿ ಬುಧವಾರ ನಡೆದಿದ್ದ ಟೂರ್ನಿಯ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಪಾಕಿಸ್ತಾನ ತಂಡ 60 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ವಿಲ್‌ ಯಂಗ್‌ ಹಾಗೂ ಟಾಮ್‌ ಲೇಥಮ್‌ ಅವರ ಅಮೋಘ ಶತಕಗಳ ಬಲದಿಂದ ಕಿವೀಸ್‌, ತನ್ನ ಮೊದಲನೇ ಪಂದ್ಯವನ್ನು ಗೆದ್ದು 50 ಓವರ್‌ಗಳ ಮಹತ್ವದ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡದ ಯೋಜನೆ ಆರಂಭದಲ್ಲಿ ಸರಿಯಾಗಿತ್ತು. ಡೆವೋನ್‌ ಕಾನ್ವೇ ಮತ್ತು ಕೇನ್‌ ವಿಲಿಯಮ್ಸನ್‌ ಅವರನ್ನು ಪಾಕ್‌ ಬೌಲರ್‌ಗಳು ಬಹುಬೇಗ ಔಟ್‌ ಮಾಡಿದ್ದರು. ನಂತರ ಡ್ಯಾರಿಲ್‌ ಮಿಚೆಲ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ವಿಲ್‌ ಯಂಗ್‌ ಮತ್ತು ಟಾಮ್‌ ಲೇಥಮ್‌ ಅವರನ್ನು ಕಟ್ಟಿ ಹಾಕುವಲ್ಲಿ ಪಾಕ್‌ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಈ ಇಬ್ಬರ ಶತಕಗಳ ಬಲದಿಂದ ಕಿವೀಸ್‌ ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 320 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 321 ರನ್‌ಗಳ ಗುರಿಯನ್ನು ನೀಡಿತ್ತು.

ಚಾಂಪಿಯನ್ಸ್‌ ಟ್ರೋಫಿಗೆ ಐವರು ಸ್ಪಿನ್ನರ್‌ಗಳೇಕೆ? ಟೀಕಾಕಾರರಿಗೆ ರೋಹಿತ್‌ ಶರ್ಮಾ ತಿರುಗೇಟು!

ಬಳಿಕ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕೇವಲ 22 ರನ್‌ಗಳನ್ನು ಕಲೆ ಹಾಕಿರುವಾಗಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಬಾಬರ್‌ ಆಝಮ್‌ ಮತ್ತು ಖುಷ್ದಿಲ್‌ ಶಾ ಅವರ ಅರ್ಧಶತಕಗಳ ಹೊರತಾಗಿಯೂ ಇನ್ನಿತರ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪಾಕಿಸ್ತಾನ, 47.2 ಓವರ್‌ಗಳಿಗೆ 260 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ತವರು ಅಭಿಮಾನಿಗಳ ಎದುರು ಪಾಕಿಸ್ತಾನ ಮುಖಭಂಗ ಅನುಭವಿಸಿತು.



ವಿಲ್‌ ಯಂಗ್‌-ಟಾಮ್‌ ಲೇಥಮ್‌ ಜುಗಲ್‌ಬಂದಿ

ನ್ಯೂಜಿಲೆಂಡ್‌ ತಂಡದ ಪರ ನಾಲ್ಕನೇ ವಿಕೆಟ್‌ಗೆ ಜೊತೆಯಾದ ವಿಲ್‌ ಯಂಗ್‌ ಮತ್ತು ಟಾಮ್‌ ಲೇಥಮ್‌ ಅವರು 118 ರನ್‌ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು 200ರ ಗಡಿ ಸನಿಹ ತಂದರು. ಆರಂಭಿಕನಾಗಿ ಕ್ರೀಸ್‌ಗೆ ಬಂದು ಮನಮೋಹಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ವಿಲ್‌ ಯಂಗ್‌, 113 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ 107 ರನ್‌ಗಳನ್ನು ದಾಖಲಿಸಿದರು. ಶತಕ ಸಿಡಿಸಿದ ಬಳಿಕ ಅವರು ನಸೀಮ್‌ ಶಾಗೆ ವಿಕೆಟ್‌ ಒಪ್ಪಿಸಿದರು.



ಭರ್ಜರಿ ಶತಕ ಸಿಡಿಸಿದ ಟಾಮ್‌ ಲೇಥಮ್‌

ವಿಲ್‌ ಯಂಗ್‌ ವಿಕೆಟ್‌ ಒಪ್ಪಿಸಿದ ಬಳಿಕ ಬ್ಯಾಟಿಂಗ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಟಾಮ್‌ ಲೇಥಮ್‌ ಬ್ಯಾಟಿಂಗ್‌. ಪಾಕ್‌ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಲೇಥಮ್‌, 104 ಎಸೆತಗಳಲ್ಲಿ ಅಜೇಯ 118 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಕಿವೀಸ್‌ 320 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಕೊನೆಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಗ್ಲೆನ್‌ ಫಿಲಿಪ್ಸ್‌, 39 ಎಸೆತಗಳಲ್ಲಿ 61 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದರು.

ಪಾಕಿಸ್ತಾನ ತಂಡದ ಬ್ಯಾಟಿಂಗ್‌ ವೈಫಲ್ಯ

ಕಿವೀಸ್‌ ನೀಡಿದ್ದ ಸವಾಲುದಾಯಕ ಮೊತ್ತದ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡದ ಪರ ಮಾಜಿ ನಾಯಕ ಬಾಬರ್‌ ಅಝಮ್‌ (64 ರನ್‌), ಖುಷ್ದಿಲ್‌ ಶಾ (69 ರನ್‌) ಹಾಗೂ ಸಲ್ಮಾನ್‌ ಅಘಾ (42 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಸೌದ್‌ ಶಕೀಲ್‌, ಮೊಹಮ್ಮದ್‌ ರಿಝ್ವಾನ್‌, ಫಖಾರ್‌ ಝಮಾನ್‌, ತಯಾಬ್‌ ತಾಹೀರ್‌ ಕಿವೀಸ್‌ ಬೌಲಿಂಗ್‌ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು. ನ್ಯೂಜಿಲೆಂಡ್‌ ಪರ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಮಿಚೆಲ್‌ ಸ್ಯಾಂಟ್ನರ್‌ ಮತ್ತು ವಿಲಿಯಮ್‌ ರೌರ್ಕಿ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.