ದೊಡ್ಡಬಳ್ಳಾಪುರ: ಪಾಕಿಸ್ತಾನದ ಗ್ಯಾಂಗ್ಸ್ಟರ್ಗಳ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ದೊಡ್ಡಬಳ್ಳಾಪುರದಲ್ಲಿ (Doddaballapur) ಪೊಲೀಸರು ಬಂಧಿಸಿದ್ದಾರೆ. ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ ಆರೋಪಿ. ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ನಂಟಿರಬಹುದು ಎಂಬ ಸಂಶಯದ ಹಿನ್ನೆಲೆ ಬಂಧಿತನ ಮೊಬೈಲ್ ಪರಿಶೀಲನೆ ಮಾಡಿದಾಗ ಆತ ಪಾಕಿಸ್ತಾನದ ಗ್ಯಾಂಗ್ಸ್ಟರ್ಗಳ ಇನ್ಸ್ಟಾಗ್ರಾಂನಲ್ಲಿ ಲೈಕ್ ಮತ್ತು ವಿಡಿಯೋಗಳ ಸ್ಟೇಟಸ್ ಹಾಕಿಕೊಂಡಿರುವುದು ಗೊತ್ತಾಗಿದೆ. ಅಲ್ಲದೇ ಗನ್ಗಳ ಬಗ್ಗೆ ಆಸಕ್ತಿ ಇರುವುದು ಕೂಡ ಪತ್ತೆಯಾಗಿದೆ. ಈ ಹಿನ್ನೆಲೆ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಧಿತ ಆರೋಪಿಯು ಎಸಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸೈಯದ್ ಅಬೂಬಕರ್ ತನ್ನ ಮೊಬೈಲ್ನಲ್ಲಿ sayedabudakar313 ಹೆಸರಿವ ಇನ್‌ಸ್ಟಾಗ್ರಾಂ ಅಕೌಂಟ್ ಬಳಸುತ್ತಿದ್ದ. Hammadmemon 333 ಹೆಸರಿನ ವ್ಯಕ್ತಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದ ವಿಡಿಯೋ ರೀಲ್ಸ್ಗಳಿಗೆ ಲೈಕ್ ಕೊಟ್ಟು ಈ ವಿಡಿಯೋಗಳನ್ನು ಸ್ಟೇಟಸ್ ಹಾಕಿಕೊಳ್ಳುತ್ತಿದ್ದ. ಈ ವಿಡಿಯೋಗಳು ಪಾಕಿಸ್ತಾನದ ಗ್ಯಾಂಗ್ಸ್ಟರ್ಗಳಿಗೆ ಸಂಬಂಧಿಸಿದ ವಿಡಿಯೋಗಳಾಗಿದ್ದವು. ಸದ್ಯ ಆರೋಪಿಯ ಮೊಬೈಲ್ನಲ್ಲಿ ಹಲವು ಪಿಸ್ತೂಲ್ಗಳ ಫೋಟೋಗಳು ಕೂಡ ಕಂಡು ಬಂದಿವೆ. ಈತನಿಗೆ ಬಂದೂಕು ಮತ್ತು ಪಿಸ್ತೂಲ್ಗಳ ಬಗ್ಗೆ ಆಸಕ್ತಿ ಇದ್ದು, ಮುಂದಿನ ದಿನಗಳಲ್ಲಿ ದೇಶದ ವಿರುದ್ಧ ಯುವಕರನ್ನ ಎತ್ತಿಕಟ್ಟುವ ಹಾಗೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೃತ್ಯಗಳನ್ನು ನಡೆಸುವ ಸಾಧ್ಯತೆ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.