ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Rishab Shetty: ಛತ್ರಪತಿ ಶಿವಾಜಿ ಅವತಾರದಲ್ಲಿ ರಿಷಬ್‌ ಶೆಟ್ಟಿ; ಗಮನ ಸೆಳೆಯುವ ಪೋಸ್ಟರ್‌ ಔಟ್‌

ಡಿವೈನ್‌ ಸ್ಟಾರ್‌, ಕಾಂತಾರ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ ಸ್ಯಾಂಡಲ್‌ವುಡ್‌ನ ರಿಷಬ್‌ ಶೆಟ್ಟಿ ಸದ್ಯ ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರು ಅಬಿನಯಿಸುತ್ತಿರುವ ಹಿಂದಿಯ ʼದಿ ಪ್ರೈಡ್‌ ಆಫ್‌ ಭಾರತ್‌: ಛತ್ರಪತಿ ಶಿವಾಜಿ ಮಹಾರಾಜ್‌ʼ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದ್ದು, ಗಮನ ಸೆಳಯುತ್ತಿದೆ.

ಛತ್ರಪತಿ ಶಿವಾಜಿ ಅವತಾರದಲ್ಲಿ ರಿಷಬ್‌ ಶೆಟ್ಟಿ; ಹೊಸ ಪೋಸ್ಟರ್‌ ರಿಲೀಸ್‌

ರಿಷಬ್‌ ಶೆಟ್ಟಿ.

Profile Ramesh B Feb 19, 2025 3:45 PM

ಮುಂಬೈ: 'ಕಾಂತಾರ' (Kantara) ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ (Rishab Shetty) ಸದ್ಯ 'ಕಾಂತಾರ 2' (Kantara 2) ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 'ಕಾಂತಾರ' ಚಿತ್ರದ ಪ್ರಿಕ್ವೇಲ್‌ ಆಗಿರುವ ʼಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಶೂಟಿಂಗ್‌ ಈಗಾಗಲೇ ಮುಕ್ತಾಯದ ಹಂತ ತಲುಪಿದೆ. ಈ ಮಧ್ಯೆ ಅವರು ಬಾಲಿವುಡ್‌ನ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ದೇಶಕಂಡ ಅಪ್ರತಿಮ ಹೋರಾಟಗಾರ, ಪರಾಕ್ರಮಿ, ಮರಾಠ ಸಾಮ್ರಾಜ್ಯದ ಅಧಿಪತಿ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಮೇಲೆ ಬೆಳಕು ಚೆಲ್ಲುವ ʼದಿ ಪ್ರೈಡ್‌ ಆಫ್‌ ಭಾರತ್‌: ಛತ್ರಪತಿ ಶಿವಾಜಿ ಮಹಾರಾಜ್‌ʼ (The Pride of Bharat: Chhatrapati Shivaji Maharaj) ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಶಿವಾಜಿ ಪಾತ್ರದಲ್ಲಿ ಅವರು ಮೋಡಿ ಮಾಡಲಿದ್ದಾರೆ. ಬುಧವಾರ (ಫೆ.19) ಶಿವಾಜಿ ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡ ಪೋಸ್ಟರ್‌ ರಿಲೀಸ್‌ ಮಾಡಿದೆ.

ಇಂದು ಶಿವಾಜಿ ಮಹಾರಾಜರ 395 ಜನ್ಮದಿನ. ಈ ಹಿನ್ನೆಲೆಯಲ್ಲಿ ಪೋಸ್ಟರ್‌ ರಿವೀಲ್‌ ಆಗಿದ್ದು, ಗಮನ ಸೆಳೆಯುತ್ತಿದೆ. ಚಿತ್ರ 2027ರ ಜ. 21ರಂದು ತೆರೆಗೆ ಬರಲಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್​ನಲ್ಲಿ ಶಿವಾಜಿ ಮಹಾರಾಜ ಪಾತ್ರಧಾರಿ ರಿಷಬ್ ಶೆಟ್ಟಿ ದೇವಿಯ ಬೃಹತ್ ವಿಗ್ರಹದ ಮುಂದೆ ನಿಂತಿರುವುದು ಕಂಡು ಬಂದಿದೆ. ಸಿನಿಮಾವನ್ನು ಸಂದೀಪ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಶಿವಾಜಿ ಪಾತ್ರ ತಮಗೆ ದೊರೆತಿದ್ದು ಬಹುದೊಡ್ಡ ಗೌರವ ಎಂದು ರಿಷಬ್‌ ಶೆಟ್ಟಿ ಈ ಹಿಂದೆ ತಿಳಿಸಿದ್ದರು. ‘ಕಾಂತಾರ 2’ ಸಿನಿಮಾದ ಬಳಿಕ ‘ಶಿವಾಜಿ’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ.



ತೆಲುಗು ಚಿತ್ರದಲ್ಲಿಯೂ ರಿಷಬ್‌ ಬ್ಯುಸಿ

ಸದ್ಯ ರಿಷಬ್‌ ಶೆಟ್ಟಿ ʼಕಾಂತಾರ 2ʼ ಮತ್ತು ʼಶಿವಾಜಿʼ ಚಿತ್ರಗಳ ಜತೆಗೆ ತೆಲುಗಿನ 'ಜೈ ಹನುಮಾನ್‌' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 2024ರಲ್ಲಿ ತೆರೆಕಂಡ ʼಹನುಮಾನ್‌ʼ ಚಿತ್ರದ ಸೀಕ್ವೆಲ್‌ ʼಜೈ ಹನುಮಾನ್‌ʼ. ಈ ಚಿತ್ರದಲ್ಲಿ ತೇಜ್ ಸಜ್ಜಾ, ರಾಣಾ ದಗ್ಗುಬಾಟಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. 2024ರ ಜನವರಿಯಲ್ಲಿ ತೆರೆಕಂಡ ʼಹನುಮಾನ್‌ʼ ಸಿನಿಮಾ 40 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ 350 ಕೋಟಿ ರೂ. ಗಳಿಸಿದೆ. ಹೀಗಾಗಿ ಈ ಚಿತ್ರದ ಮೇಲೂ ಬೆಟ್ಟದಷ್ಟು ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: Rishab Shetty: ʼಛತ್ರಪತಿ ಶಿವಾಜಿʼ ಆಗಿ ಅಬ್ಬರಿಸಲಿರುವ ರಿಷಬ್‌ ಶೆಟ್ಟಿ, ಪೋಸ್ಟರ್‌ ರಿಲೀಸ್‌

ಕಳರಿಪಯಟ್ಟು ಕಲಿತ ರಿಷಬ್‌

ʼಕಾಂತಾರ 2ʼ ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ಕುದುರೆ ಸವಾರಿ, ಕಳರಿಪಯಟ್ಟು ಮುಂತಾದ ವಿದ್ಯೆಯನ್ನು ಕಲಿಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸುತ್ತಿರುವ ಈ ಬಹು ನಿರೀಕ್ಷಿತ ʼಕಾಂತಾರ 2ʼ ಈಗಾಗಲೇ ಪ್ಯಾನ್‌ ಇಂಡಿಯಾ ಪ್ರೇಕ್ಷಕರ ಗಮನ ಸೆಳೆದಿದೆ. ಬಹು ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಈ ವರ್ಷದ ಅ. 2ರಂದು ತೆರೆಗೆ ಬರಲಿದೆ. ಚಿತ್ರವನ್ನು ಸಾಕಷ್ಟು ರೋಚಕವಾಗಿ ಕಟ್ಟಿಕೊಡಲು ಮುಂದಾಗಿರುವ ರಿಷಬ್‌ ಶೆಟ್ಟಿ & ಟೀಂ ಯುದ್ಧದ ದೃಶ್ಯವನ್ನು ಸೆರೆ ಹಿಡಿಯಲು ಸಾಕಷ್ಟು ತಯಾರಿ ನಡೆಸಿದೆ.

ಐಎಎನ್‌ಎಸ್‌ ಸುದ್ದಿಸಂಸ್ಥೆಯ ಪ್ರಕಾರ ʼಕಾಂತಾರ 2ʼ ಚಿತ್ರದ ಯುದ್ಧ ದೃಶ್ಯವನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಲು ಸುಮಾರು 500ಕ್ಕೂ ಹೆಚ್ಚು ನುರಿತ ಫೈಟರ್ಸ್‌ ಕಾರ್ಯನಿರ್ಹಿಸಲಿದ್ದಾರಂತೆ. ಆ್ಯಕ್ಷನ್‌ ಕೊರಿಯೋಗ್ರಫಿಯಲ್ಲಿ ನುರಿತರಾದವರನ್ನು ಹೊಂಬಾಳೆ ಫಿಲ್ಮ್ಸ್‌ ನೇಮಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.