SSLC Result: ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಿಂಗ್ ಮಾರ್ಕ್ಸ್ ಬದಲಾವಣೆ!
SSLC Result: ಪಾಸಿಂಗ್ ಮಾರ್ಕ್ಸ್ ಬದಲಾಯಿಸಿದರೆ, ಇತರ ರಾಜ್ಯ ಶೈಕ್ಷಣಿಕ ಮಂಡಳಿಗಳು, ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಕೇಂದ್ರೀಯ ವಿದ್ಯಾಲಯ (ಕೆವಿ) ನಂತಹ ಕೇಂದ್ರೀಯ ಮಂಡಳಿಗಳೊಂದಿಗೆ ಅದು ಹೊಂದಿಕೆಯಾಗುತ್ತದೆ. ತಮಿಳುನಾಡು ಮತ್ತು ಕೇರಳಗಳಲ್ಲಿ ಉತ್ತೀರ್ಣ ಅಂಕಗಳು 33 ಆಗಿವೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ, ಎಸ್‌ಎಸ್‌ಎಲ್‌ಸಿ (SSLC exam) ಹಾಗೂ ಪಿಯುಸಿ ಪರೀಕ್ಷೆಯಲ್ಲಿ (PUC exam) ಪಾಸಿಂಗ್ ಮಾರ್ಕ್ಸ್ (Passing marks) ಅನ್ನು ಈಗಿನ 35 ಅಂಕಗಳಿಂದ 33 ಅಂಕಕ್ಕೆ ಇಳಿಸಲು ರಾಜ್ಯ ಸರಕಾರ ಚಿಂತಿಸಿದೆ. ಇತರ ಕೆಲವು ರಾಜ್ಯಗಳು ಮತ್ತು ಕೇಂದ್ರ ಶೈಕ್ಷಣಿಕ ಮಂಡಳಿಗಳ ಮಾದರಿಯನ್ನು ಅನುಸರಿಸಿ ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು 35ರಿಂದ 33ಕ್ಕೆ ಇಳಿಸುವ ಬಗ್ಗೆ ಯೋಚಿಸುತ್ತಿದೆ. ಹೆಚ್ಚಿನ ಫಲಿತಾಂಶದ (SSLC result, PUC result) ಸಾಧನೆಗಾಗಿ ಈ ಕುರಿತು ಚಿಂತನೆ ನಡೆದಿದೆ.
ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸುಲಭವಾಗುವಂತೆ ಮಾಡುವುದು ಮತ್ತು ರಾಜ್ಯವನ್ನು ಇತರ ರಾಜ್ಯ ಪ್ರದೇಶಗಳಿಗೆ ಅನುಗುಣವಾಗಿ ತರುವುದು ಈ ಕ್ರಮದ ಉದ್ದೇಶವಾಗಿದೆ. ಈ ಪ್ರಸ್ತಾವನೆಯನ್ನು ಸರ್ಕಾರಿ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಮತ್ತು ಮುಂಬರುವ 2025-26 ಶೈಕ್ಷಣಿಕ ವರ್ಷದಲ್ಲಿ ಇದನ್ನು ಜಾರಿಗೆ ತರಬಹುದು. ಈ ಬದಲಾವಣೆಯನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಕಾನೂನು ರೂಪಿಸಲು ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ ಕರ್ನಾಟಕದಲ್ಲಿರುವ ಹೆಚ್ಚಿನ ಪ್ರಮಾಣದ ಉತ್ತೀರ್ಣ ಅಂಕಗಳು ವಿದ್ಯಾರ್ಥಿಗಳಿಗೆ ಸವಾಲಾಗಿದೆ. ಆದರೆ ಕಡಿಮೆ ಉತ್ತೀರ್ಣ ಅಂಕಗಳನ್ನು ಹೊಂದಿರುವ ಇತರ ರಾಜ್ಯಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾನೂನು ಜಾರಿಗೆ ಬರುವ ನಿರೀಕ್ಷೆಯಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಾಗಲೇ ಅದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇತರ ರಾಜ್ಯ ಶೈಕ್ಷಣಿಕ ಮಂಡಳಿಗಳು, ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಕೇಂದ್ರೀಯ ವಿದ್ಯಾಲಯ (ಕೆವಿ) ನಂತಹ ಕೇಂದ್ರೀಯ ಮಂಡಳಿಗಳೊಂದಿಗೆ ಇದು ಹೊಂದಿಕೆಯಾಗುತ್ತದೆ. ತಮಿಳುನಾಡು ಮತ್ತು ಕೇರಳಗಳಲ್ಲಿ ಉತ್ತೀರ್ಣ ಅಂಕಗಳು 33 ಆಗಿವೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ವಾರ ಪ್ರಕಟವಾಗಿದೆ. ರಾಜ್ಯದಲ್ಲಿ ಈ ಬಾರಿ ಒಟ್ಟು 66.14% ನಷ್ಟು ಫಲಿತಾಂಶ ಬಂದಿದೆ. ಫಲಿತಾಂಶದಲ್ಲಿ ಕಳೆದ ಸಾಲಿಗಿಂತ ಈ ಬಾರಿ 8% ಉತ್ತಮ ರಿಸಲ್ಟ್ ಬಂದಿದೆ. ಹೆಣ್ಣುಮಕ್ಕಳು ಶೇ. 74 ಅಂಕ ಗಳಿಸಿದ್ದು, ಗಂಡು ಮಕ್ಕಳು 58.07 % ಫಲಿತಾಂಶ ಸಾಧಿಸಿದ್ದಾರೆ. ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ: SSLC Exam- 2: ವಿದ್ಯಾರ್ಥಿಗಳೇ, ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿ ಇಲ್ಲಿದೆ