ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jailer 2 Movie: ಮತ್ತೊಮ್ಮೆ ಆ್ಯಕ್ಷನ್‌ ಅವತಾರದಲ್ಲಿ ರಜನಿಕಾಂತ್‌; 'ಜೈಲರ್‌ 2' ಚಿತ್ರದ ಟೀಸರ್‌ ಔಟ್‌

Jailer 2 Movie: ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ 'ಜೈಲರ್‌ 2' ಚಿತ್ರದ ಟೀಸರ್‌ ಔಟ್‌ ಆಗಿದೆ. ನೆಲ್ಸನ್‌ ದಿಲೀಪ್‌ಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ತಲೈವಾ ಮತ್ತೊಮ್ಮೆ ಆ್ಯಕ್ಷನ್‌ ಅವತಾರದಲ್ಲಿ ಮಿಂಚು ಹರಿಸಿದ್ದಾರೆ. ಸದ್ಯ 'ಕೂಲಿ' ಸಿನಿಮಾದಲ್ಲಿ ನಟಿಸುತ್ತಿರುವ ರಜನಿಕಾಂತ್‌ ಬಳಿಕ ʼಜೈಲರ್‌ 2ʼ ಅಖಾಡಕ್ಕೆ ಧುಮುಕಲಿದ್ದಾರೆ.

Profile Ramesh B Jan 15, 2025 7:55 PM

ಚೆನ್ನೈ, ಜ. 15, 2025: ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಅವರಿಗೆ ದೇಶ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಚಿತ್ರಕ್ಕಾಗಿ ಕಾದು ಕೂರುವ ಅಭಿಮಾನಿಗಳ ಸಂಖ್ಯೆಗೂ ಕಡಿಮೆ ಇಲ್ಲ. ಅದಕ್ಕೆ ತಕ್ಕಂತೆ ತಲೈವಾ ಈ ಇಳಿವಯಸ್ಸಿನಲ್ಲೂ ಆಗಾಗ ಸಿನಿಮಾಗಳಲ್ಲಿ ಅಭಿನಯಿಸುತ್ತ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಲೋಕೇಶ್‌ ಕನಕರಾಜ್‌ (Lokesh Kanagaraj) ಅವರ ʼಕೂಲಿʼ (Coolie) ಚಿತ್ರದಲ್ಲಿ ನಟಿಸುತ್ತಿರುವ ರಜನಿಕಾಂತ್‌ ಇದೀಗ ಮತ್ತೊಂದು ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. 2023ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಮೋಡಿ ಮಾಡಿದ್ದ ʼಜೈಲರ್‌ʼ (Jailer) ಸಿನಿಮಾದ ಮುಂದುವರಿದ ಭಾಗವಾದ ʼಜೈಲರ್‌ 2ʼ (Jailer 2) ಚಿತ್ರದಲ್ಲಿ ರಜನಿಕಾಂತ್‌ ನಟಿಸಲಿದ್ದು, ಈ ಬಗ್ಗೆ ಅಧಿಕೃತವಾಗಿ ಘೋಷಣೆ ಹೊರಡಿಸಲಾಗಿದೆ.

ಮಕರ ಸಂಕ್ರಾಂತಿ ಪ್ರಯುಕ್ತ ಚಿತ್ರತಂಡ ಅನೌನ್ಸ್‌ಮೆಂಟ್‌ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸನ್ ಪಿಕ್ಚರ್ಸ್​ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದೆ. ʼಜೈಲರ್‌ʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ನೆಲ್ಸನ್‌ ದಿಲೀಪ್‌ಕುಮಾರ್‌ ಅವರೇ ʼಜೈಲರ್‌ 2ʼ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ. ಆ ಮೂಲಕ ಹಿಟ್‌ ಕಾಂಬಿನೇಷನ್‌ ಮತ್ತೊಮ್ಮೆ ಒಂದಾಗುತ್ತಿದೆ.



ಇದೀಗ ರಿಲೀಸ್‌ ಆಗಿರುವ ಟೀಸರ್‌ನಲ್ಲಿ ನಿರ್ದೇಶಕ ನೆಲ್ಸನ್‌ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್‌ ರವಿಚಂದರ್‌ ಅವರೂ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್‌ ಆ್ಯಕ್ಷನ್‌ ಅವತಾರದಲ್ಲಿ ಕಮಾಲ್‌ ಮಾಡಲಿದ್ದು, ಈ ಕುರಿತಾದ ಸೂಚನೆ ಟೀಸರ್‌ನಲ್ಲೇ ಕಂಡು ಬಂದಿದೆ. ತಲೈವಾ ಅವರನ್ನು ಮತ್ತೊಮ್ಮೆ ಪವರ್‌ಫುಲ್‌ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನು ಹೊರತುಪಡಿಸಿ ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ರಜನಿಕಾಂತ್‌ ಮಗಳ ಪಾತ್ರದಲ್ಲಿ ಕನ್ನಡತಿ, ʼಕೆಜಿಎಫ್‌ʼ ಕ್ವೀನ್‌ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ʼಜೈಲರ್‌ʼ ಚಿತ್ರದಲ್ಲಿ ನಿವೃತ್ತ ಜೈಲರ್‌ ಮುತ್ತುವೇಲ್‌ ಪಾಂಡಿಯನ್‌ ಪಾತ್ರದಲ್ಲಿ ರಜನಿಕಾಂತ್‌ ಕಾಣಿಸಿಕೊಂಡಿದ್ದರು. ಭರ್ಜರಿ ಆಕ್ಷನ್‌ ದೃಶ್ಯಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಸುಮಾರು 220 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ವಿವಿಧ ಭಾಷೆಗಳಲ್ಲಿ ರಿಲೀಸ್‌ ಆಗಿ ಸುಮಾರು 650 ಕೋಟಿ ರೂ. ದೋಚಿಕೊಂಡಿತ್ತು. ಅನಿರುದ್ಧ ರವಿಚಂದರ್‌ ನೀಡಿದ ಸಂಗೀತ ಟ್ರೆಂಡ್‌ ಸೃಷ್ಟಿಸಿತ್ತು. ಅದರಲ್ಲಿಯೂ ʼಕಾವಾಲಯ್ಯʼ ಹಾಡಿಗಂತೂ ಸಿನಿ ಪ್ರಿಯರು ಹೆಚ್ಚೆದ್ದು ಕುಣಿದಿದ್ದರು. ಈಗಲೂ ಇದು ಹಲವರ ಹಾಟ್‌ ಫೆವರೇಟ್‌ ಎನಿಸಿಕೊಂಡಿದೆ.

ಶಿವಣ್ಣ ನಟಿಸುತ್ತಾರಾ?

ʼಜೈಲರ್‌ʼ ಸಿನಿಮಾದಲ್ಲಿ ವಿನಾಯಕನ್‌, ರಮ್ಯಾ ಕೃಷ್ಣನ್‌, ತಮನ್ನಾ ಭಾಟಿಯಾ, ವಸಂತ್‌ ರವಿ, ಯೋಗಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಅದರ ಜತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ವಿವಿಧ ಚಿತ್ರರಂಗದ ಸೂಪರ್‌ ಸ್ಟಾರ್‌ಗಳು ಮುಖ್ಯ ಆಕರ್ಷಣೆಯಾಗಿದ್ದರು. ಸ್ಯಾಂಡಲ್‌ವುಡ್‌ನಿಂದ ಡಾ.ಶಿವ ರಾಜ್‌ಕುಮಾರ್‌, ಮಾಲಿವುಡ್‌ನಿಂದ ಮೋಹನ್‌ಲಾಲ್‌, ಬಾಲಿವುಡ್‌ನಿಂದ ಜಾಕಿ ಶ್ರಾಫ್‌ ಅಭಿನಯಿಸಿದ್ದರು. ಈ ಬಾರಿಯೂ ಇವರೆಲ್ಲ ನಟಿಸಲಿದ್ದಾರಾ ಎನ್ನುವ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಇವರೆಲ್ಲ ಮತ್ತೆ ಕಾಣಿಸಿಕೊಳ್ಳಬೇಕು ಎಂದೇ ಫ್ಯಾನ್ಸ್‌ ಒತ್ತಾಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Jailer 2 Movie: 'ಜೈಲರ್‌ 2' ಚಿತ್ರದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ರಜನಿಕಾಂತ್‌ ಮಗಳ ಪಾತ್ರಕ್ಕೆ ಕನ್ನಡತಿ ಆಯ್ಕೆ?

ಸದ್ಯ ರಜನಿಕಾಂತ್‌ ನಟಿಸುತ್ತಿರುವ ʼಕೂಲಿʼ ಸಿನಿಮಾದಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಕೂಡ ಅಭಿನಯಿಸುತ್ತಿದ್ದಾರೆ. ಇವೆ ಜತೆಗೆ ನಾಗಾರ್ಜುನ, ಶೌಬಿನ್‌ ಶಬೀರ್‌, ಸತ್ಯರಾಜ್‌, ಶ್ರುತಿ ಹಾಸನ್‌ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಬಾಲಿವುಡ್‌ ಸೂಪರ್‌ಸ್ಟಾರ್‌ ಆಮೀರ್‌ ಖಾನ್‌ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಈ ಚಿತ್ರ ಕುತೂಹಲ ಮೂಡಿಸಿದೆ.