ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Turuvekere Prasad Column: ಕಡಿಮೆಯಾಗಲಿ ಸಾಮಾಜಿಕ ಅಂತರ, ಹವಾಮಾನ ಅವಾಂತರ

ಸಮುದಾಯ ಗಳು ಮತ್ತು ಅದರೊಳಗಿನ ಅರ್ಥಿಕತೆಗಳು ಹೆಚ್ಚು ಭರವಸೆಗಳೊಂದಿಗೆ ಕಾರ್ಯ ನಿರ್ವಹಿಸಿ ಬಡತನ, ಅಸಮಾನತೆ, ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಒತ್ತಡ, ಆತಂಕ ಗಳನ್ನು ದೂರ ಮಾಡಿ ಎಲ್ಲರಿಗೂ ಜೀವನ ಭದ್ರತೆ ಒದಗಿಸುವುದೇ ಸಾಮಾಜಿಕ ನ್ಯಾಯದ ಕಲ್ಪನೆಯಾಗಿದೆ. ದೇಶ-ದೇಶಗಳ ಒಳಗೆ ದುರ್ಬಲ ಸಮಾಜಗಳ ರಕ್ಷಣೆ, ಸಮಾನ ಅವಕಾಶಗಳಿಗೆ ಉತ್ತೇಜನ ನೀಡುವ ಜೊತೆಗೆ ಜಾಗತಿಕ ಸಹಕಾರ ಹೆಚ್ಚಳದ ಮೂಲಕ ಒಟ್ಟಾರೆ ವಿಶ್ವವನ್ನು ಸುಸ್ಥಿರ ಅಭಿವೃದ್ಧಿ, ಶಾಂತಿ, ನೆಮ್ಮದಿಯೆಡೆಗೆ ಕೊಂಡೊಯ್ಯಬೇಕಾ ಗಿದೆ

ಕಡಿಮೆಯಾಗಲಿ ಸಾಮಾಜಿಕ ಅಂತರ, ಹವಾಮಾನ ಅವಾಂತರ

Profile Ashok Nayak Feb 20, 2025 1:55 PM

ತನ್ನಿಮಿತ್ತ

ತುರುವೇಕೆರೆ ಪ್ರಸಾದ

(ವಿಶ್ವ ಸಾಮಾಜಿಕ ನ್ಯಾಯ ದಿನ)

ವಿಶ್ವಸಂಸ್ಥೆ ಸಾಮಾನ್ಯಸಭೆ 2007 ರಲ್ಲಿ ಪ್ರತಿವರ್ಷ ಫೆಬ್ರವರಿ 20ನ್ನು ‘ವಿಶ್ವ ಸಾಮಾಜಿಕ ನ್ಯಾಯದಿನ’ವನ್ನಾಗಿ ಆಚರಿಸಲು ಘೋಷಿಸಿತು. 2009ರಿಂದ ಇದು ಆಚರಣೆಗೆ ಬಂದಿದೆ. ದೇಶ-ದೇಶಗಳ ಒಳಗೆ ಮತ್ತು ಜಾಗತಿಕ ಮಟ್ಟದಲ್ಲಿ ಬಡತನ, ಅಸಮಾನತೆ ಹಲವಾರು ದೇಶಗಳಲ್ಲಿ ದಿನೇ ದಿನೇ ಹೆಚ್ಚುತ್ತಲೇ ಬಂದಿದೆ. ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ಗಳು, ನೈಸರ್ಗಿಕ ವಿಕೋಪಗಳು, ಹವಾಮಾನ ಬದಲಾವಣೆ, ದೇಶ-ದೇಶಗಳ ನಡುವಿನ ರಾಜಕೀಯ ಅಸ್ಥಿರತೆ, ಯುದ್ಧಗಳು ಮುಂತಾದವು ಹಲವಾರು ಅಭಿವೃದ್ಧಿಶೀಲ ದೇಶಗಳ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಪತನಕ್ಕೆ ಕಾರಣವಾಗಿವೆ. ಹಾಗಾಗಿ ಈ ದೇಶಗಳ ಮತ್ತು ಜನರ ಸಾಮಾಜಿಕ ಸ್ಥಿತಿಯ ಸುಧಾರಣೆಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಷ್ಟೇ ನೀತಿ ನಿರೂಪಣೆಗಳನ್ನು ಮಾಡುವುದಲ್ಲದೆ, ಪ್ರಾಂತೀ ಯ ಹಾಗೂ ದೇಶಗಳ ಒಳಗೂ ಕ್ರಿಯಾ ಯೋಜನೆಗಳನ್ನು ರೂಪಿಸಬೇಕಿದೆ.

ಇದನ್ನೂ ಓದಿ: Turuvekere Prasad Column: ನೀ‘ನ್ಯಾಕೋ’? ನಿನ್ನ ಹಂಗ್ಯಾಕೋ? ನಾಮದ ಬಲವಿದ್ದರೆ ಸಾಕೋ !

ಸಮುದಾಯ ಗಳು ಮತ್ತು ಅದರೊಳಗಿನ ಅರ್ಥಿಕತೆಗಳು ಹೆಚ್ಚು ಭರವಸೆಗಳೊಂದಿಗೆ ಕಾರ್ಯನಿರ್ವಹಿಸಿ ಬಡತನ, ಅಸಮಾನತೆ, ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಒತ್ತಡ, ಆತಂಕಗಳನ್ನು ದೂರ ಮಾಡಿ ಎಲ್ಲರಿಗೂ ಜೀವನ ಭದ್ರತೆ ಒದಗಿಸುವುದೇ ಸಾಮಾಜಿಕ ನ್ಯಾಯದ ಕಲ್ಪನೆ ಯಾಗಿದೆ. ದೇಶ-ದೇಶಗಳ ಒಳಗೆ ದುರ್ಬಲ ಸಮಾಜಗಳ ರಕ್ಷಣೆ, ಸಮಾನ ಅವಕಾಶಗಳಿಗೆ ಉತ್ತೇಜನ ನೀಡುವ ಜೊತೆಗೆ ಜಾಗತಿಕ ಸಹಕಾರ ಹೆಚ್ಚಳದ ಮೂಲಕ ಒಟ್ಟಾರೆ ವಿಶ್ವವನ್ನು ಸುಸ್ಥಿರ ಅಭಿವೃದ್ಧಿ, ಶಾಂತಿ, ನೆಮ್ಮದಿಯೆಡೆಗೆ ಕೊಂಡೊಯ್ಯಬೇಕಾ ಗಿದೆ.

ಶಾಂತಿ ಮತ್ತು ಭದ್ರತೆಯಿಲ್ಲದೆ ಯಾವುದೇ ರಾಷ್ಟ್ರವು ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ವ್ಯಕ್ತಿತ್ವದ ಘನತೆ ಮತ್ತು ಮೂಲಭೂತ ಹಕ್ಕುಗಳು, ಸ್ವಾತಂತ್ರ್ಯವನ್ನು ಕಾಪಾಡುವುದೂ ಸಹ ಸರ್ಕಾರಗಳಿಗೆ ಹಾಗೂ ಸಂಸ್ಥೆಗಳಿಗೆ ಅತಿದೊಡ್ಡ ಸವಾಲೇ ಸರಿ, ಉದಾರೀಕರಣ, ಜಾಗತೀಕರಣ ನೀತಿ ಜಾರಿಯಾದ ಮೇಲೂ, ರಾಷ್ಟ್ರ ರಾಷ್ಟಗಳು ಪರಸ್ಪರ ಅವಲಂಬಿತ ವಾಗಿದ್ದರೂ, ತಾಂತ್ರಿಕತೆ, ವ್ಯಾಪಾರಗಳ ಬದಲಾವಣೆ ಆಗಿದ್ದರೂ ಹಲವು ರಾಷ್ಟ್ರಗಳ ಜನಜೀವನದ ಗುಣಮಟ್ಟ ಸುಧಾರಿಸಿಲ್ಲ.

ಬಡತನ ದೂರವಾಗಿಲ್ಲ, ಇಂತಹ ಕೊರತೆಗಳನ್ನು ನಿವಾರಿಸಲು ಈ ಸಲ ವಿಶ್ವಸಂಸ್ಥೆ ‘ಸಬಲೀಕರಣದ ಸೇರ್ಪಡೆ: ಸಾಮಾಜಿಕ ನ್ಯಾಯಕ್ಕಾಗಿ ಅಂತರ ಕಡಿಮೆ ಮಾಡುವುದು’ ಎಂಬುದನ್ನು ‘ವಿಶ್ವ ಸಾಮಾಜಿಕ ದಿನ’ದ ಘೋಷವಾಕ್ಯವನ್ನಾಗಿ ಮಾಡಿದೆ. ಇಂತಹ ಸುಸ್ಥಿರ ಭವಿಷ್ಯದ ಒಂದು ಪರಿವರ್ತನಾ ಪರ್ವಕ್ಕೆ ನಾಂದಿ ಹಾಡಲು ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಇಂಗಾಲ ಹೊರಸೂಸುವಿಕೆ ನಿಯಂತ್ರಣದ ಬದ್ಧತೆ ಎರಡೂ ಪರಸ್ಪರ ಕೈ ಜೋಡಿಸಬೇಕಾಗುತ್ತದೆ.

ಬಹುತೇಕ ಸರಕಾರಗಳು, ಆಡಳಿತ ಸಂಸ್ಥೆಗಳು ಜನರನ್ನು ದೂರವಿಟ್ಟು ಪ್ರಾಕೃತಿಕ ಸಂಪ ನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸಿವೆ. ಈ ಸಂಸ್ಥೆಗಳು ಸಂಪನ್ಮೂಲಗಳ ನಿರ್ವಹಣೆ ಯಲ್ಲಿ ಅಸಮರ್ಥ, ಭ್ರಷ್ಟ ಮತ್ತು ಸ್ಪರ್ಧಾತ್ಮಕವಲ್ಲದವು ಎಂಬುದನ್ನು ಪದೇ ಪದೇ ಸಾಬೀತು ಮಾಡಿವೆ, ಹಾಗಾಗಿ ಪರಿಸರ ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ಕಾಪಾಡು ವಂತಹ ಆಡಳಿತ ವ್ಯವಸ್ಥೆ ಬರಬೇಕಿದೆ.

ಖ್ಯಾತ ಪರಿಸರ ತಜ್ಞ ಅನಿಲ್ ಅಗರವಾಲ್ 21ನೇ ಶತಮಾನದಲ್ಲಿ ಮಾನವೀಯತೆ ಎದುರಿಸ ಬೇಕಾದ ಮೂರು ಸವಾಲುಗಳ ಬಗ್ಗೆ ಗಮನ ಸೆಳೆದಿದ್ದರು. ಮೊದಲನೆಯದು ಪರಿಸರ ಮಾಲಿನ್ಯ ನಿಯಂತ್ರಣದ ಸವಾಲು. ಆರ್ಥಿಕ ಬೆಳವಣಿಗೆಯಷ್ಟೇ ಕ್ಷಿಪ್ರವಾಗಿ ಮಾಲಿನ್ಯದ ಪ್ರಮಾಣವೂ ಏರುತ್ತಿದೆ ಎಂಬುದನ್ನು ಅವರು ಗಮನಿಸಿದ್ದರು. ಆತಂಕದ ಸಂಗತಿ ಎಂದರೆ ಯಾವ ಅಭಿವೃದ್ಧಿ ಹೊಂದಿದ ದೇಶಗಳು ಪರಿಸರ ಮಾಲಿನ್ಯದ ವಾಸ್ತವತೆಯನ್ನು ಅರಿತು ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕಲು ಪ್ರಾರಂಭಿಸಿದವೋ, ಆ ನಂತರದ ವರ್ಷ ಗಳಲ್ಲಿ ಅಭಿವೃದ್ಧಿಶೀಲ ದೇಶಗಳು ಅತೀ ಹೆಚ್ಚು ಮಾಲಿನ್ಯ ಹೊರಸೂಸತೊಡಗಿವೆ.

ಅಭಿವೃದ್ಧಿ ಹೊಂದಿದ ದೇಶಗಳು ನವೀಕರಿಸಬಹುದಾದ ಇಂಧನಗಳು ಮತ್ತು ಉಪಕರಣ ಗಳನ್ನು ಮತ್ತು ಆ ತಾಂತ್ರಿಕತೆಯನ್ನು ಬಡದೇಶಗಳೊಂದಿಗೆ ಹಂಚಿಕೊಳ್ಳಬೇಕು. ಎರಡ ನೆಯ ಸವಾಲೆಂದರೆ ರೈತನ ಭೂಮಿ ಅವನತಿ ಹೊಂದದಂತೆ ತಡೆಯುವುದಾಗಿದೆ. ಈ ದೇಶದ ದೊಡ್ಡ ಸಮಸ್ಯೆ ಎಂದರೆ ಪರಿಸರದೊಂದಿಗೆ ನೇರ ಸಂಬಂಧ ಹೊಂದಿರುವಂತಹ ಬಡತನ.

21ನೇ ಶತಮಾನದ ಆರಂಭದಲ್ಲಿ ಆರ್ಥಿಕ ಜಾಗತೀಕರಣದಿಂದ ಅಪಾರ ಸಂಪತ್ತು ವೃದ್ಧಿ ಯಾದರೂ ಮಾರುಕಟ್ಟೆ ಕೌಶಲ ಹೊಂದಿಲ್ಲದ ಕಾರಣ ಕನಿಷ್ಠ ಒಂದು ಬಿಲಿಯನ್ ಜನರು ಆರ್ಥಿಕ ಮತ್ತು ಸಾಮಾಜಿಕ ಮುಖ್ಯವಾಹಿನಿಯಿಂದ ಬೇರ್ಪಟ್ಟರು. ಸಮಾನತೆಯ ಬಗ್ಗೆ ಮಾತಾಡುವುದೇ ಆದರೆ, ಈ ಬೇರ್ಪಟ್ಟ ಜನರನ್ನು ಮುಖ್ಯವಾಹಿನಿಯಲ್ಲಿ ಮತ್ತೆ ಸೇರಿಸಿ ಕೊಳ್ಳುವ ಮತ್ತು ಅವರ ಪ್ರಾಥಮಿಕ, ಮೂಲಭೂತ ಅಗತ್ಯಗಳನ್ನು ನೆರವೇರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು. ಇಂದಿಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಇದೊಂದು ಸವಾಲೇ!

ಈ ಸಂದರ್ಭದಲ್ಲಿಯೂ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೌಶಲವಿಲ್ಲದ ಜನ ಸಮೂಹ ಹಳ್ಳಿಗಳಲ್ಲಿ ವಾಸಿಸುತ್ತದೆ. ಆದ್ದರಿಂದ ಅವರ ಕೃಷಿ, ಹೈನುಗಾರಿಕೆ ಇತ್ಯಾದಿ ಚಟುವಟಿಕೆಗಳು ಮತ್ತು ಅತಿ ಮುಖ್ಯವಾದ ಆರ್ಥಿಕ ಆದಾಯ ಅವರ ಜಮೀನಿನ ಉತ್ಪಾ ದನಾ ಮಟ್ಟವನ್ನೇ ಅವಲಂಬಿಸಿರುತ್ತದೆ. ಕೃಷಿ ಉತ್ಪಾದನೆ ಕುಸಿದರೆ ಅವರ ಬದುಕೇ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ರೈತರ ಭೂಮಿ ಸಂರಕ್ಷಣೆ ಅತೀ ಮುಖ್ಯ.

ಮೂರನೆಯ ಸವಾಲೆಂದರೆ ಪರಿಸರ ಜಾಗತೀಕರಣ. ಈ ಪರಿಸರ ಜಾಗತೀಕರಣವೂ ಅಪಾರ ಪ್ರಮಾಣದ ಸಂಪತ್ತನ್ನು ಸೃಷ್ಟಿಸುತ್ತದೆ. ಸಂಪತ್ತು ಸೃಷ್ಟಿಯ ಭರದಲ್ಲಿ ನಾವು ಯಾವ ಒಂದು ದೇಶದಲ್ಲಿ ಪರಿಸರಕ್ಕೆ ಹಾನಿಕರವಾದುದ್ದನ್ನು ಏನೇ ಮಾಡಿದರೂ, ಅದು ಮತ್ತೊಂದು ದೇಶದ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಒಂದೇ ದೇಶದ ಪರಿಸರ ನಿರ್ವ ಹಣೆಯ ಮೂಲಕ ನಾವು ಇಡೀ ಭೂಮಿಯನ್ನು ಸುಸ್ಥಿತಿಯಲ್ಲಿ ಇಡಲು ಸಾಧ್ಯವಿಲ್ಲ.

ನಾವು ಇಡೀ ವಿಶ್ವವನ್ನು ನಿರ್ವಹಿಸಬೇಕು, ಇದನ್ನೇ ಎಕಾಲಾಜಿಕಲ್ ಗ್ಲೋಬಲೈಸೇಶನ್ ಎನ್ನುವುದು. ಇದರ ಜೊತೆಗೇ ಕಾರ್ಮಿಕರಿಗೆ, ಶೋಷಿತ ತಳ ಸಮುದಾಯಗಳಿಗೆ ಕೌಶಲ ತರಬೇತಿ ನೀಡುವುದು, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆ ನೀಡುವತ್ತ ಕೂಡಾ ಗಮನ ಹರಿಸಬೇಕು. ಒಂದು ದೇಶದಲ್ಲಿ ಶಾಂತಿ ಮತ್ತು ಸಾಮಾಜಿಕ ಭದ್ರತೆ ಇಲ್ಲದೆಯೇ ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯವೇ ಇಲ್ಲ. ಹಾಗೇ ವ್ಯಕ್ತಿತ್ವದ ಘನತೆ, ಮಾನವ ಹಕ್ಕುಗಳು ಹಾಗೂ ಸ್ವಾತಂತ್ರದ ಖಾತರಿಯನ್ನೂ ಸಹ ಅಲ್ಲಿನ ಆಡಳಿತಗಳು ಜನರಿಗೆ ನೀಡಬೇಕಾಗುತ್ತದೆ.

ಜನರ ಜೀವನಮಟ್ಟ ಸುಧಾರಣೆ, ಬಡತನ ನಿರ್ಮೂಲನ, ಆಧುನಿಕ ದಾಸ್ಯ-ಜೀತ ಪದ್ಧತಿ ಯ ನಿರ್ಮೂಲನ ಮುಂತಾದವುಗಳ ಮೂಲಕ ಆರ್ಥಿಕ ಪತನವನ್ನು ತಡೆದು ಸಾಮಾಜಿಕ ನ್ಯಾಯದತ್ತ ಮುನ್ನಡೆಸಬೇಕಾಗುತ್ತದೆ.

(ಹವ್ಯಾಸಿ ಪತ್ರಕರ್ತ ಮತ್ತು ಬರಹಗಾರ)