Turuvekere Prasad Column: ನೀ‘ನ್ಯಾಕೋ’? ನಿನ್ನ ಹಂಗ್ಯಾಕೋ? ನಾಮದ ಬಲವಿದ್ದರೆ ಸಾಕೋ !
ವಿನಯವು ಯೋಗ್ಯತೆ, ಅರ್ಹತೆಯನ್ನು ಕೊಡುತ್ತದೆ. ಆನಂತರ ಧನಾರ್ಜನೆ. ಹಾಗೆ ಸ್ವಂತ ಪರಿಶ್ರಮ ದಿಂದ ಗಳಿಸಿದ ಹಣದಿಂದ ಧರ್ಮಕಾರ್ಯಗಳು ನಡೆಯಬೇಕು, ಇದೇ ಪರಮಸುಖ ಕಂಡುಕೊಳ್ಳುವ ಒಂದು ದಾರಿ. ಹಾಗೇ ವಿವೇಕಾನಂದರು ‘ಮನುಷ್ಯನಲ್ಲಿನ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ’ ಎಂದು ಹೇಳಿದ್ದರು. ಆದರೆ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ವಿದ್ಯೆಯು ವಿನಯ, ಅರ್ಹತೆಯನ್ನು ಕೊಡುತ್ತಿಲ್ಲ
![ನೀ‘ನ್ಯಾಕೋ’? ನಿನ್ನ ಹಂಗ್ಯಾಕೋ? ನಾಮದ ಬಲವಿದ್ದರೆ ಸಾಕೋ !](https://cdn-vishwavani-prod.hindverse.com/media/original_images/Turuvekere_Prasad_Column_0802.jpg)
ಅಂಕಣಕಾರ ತುರುವೇಕೆರೆ ಪ್ರಸಾದ್
![Profile](https://vishwavani.news/static/img/user.png)
ವಿಚಾರ ವೇದಿಕೆ
ತುರುವೇಕೆರೆ ಪ್ರಸಾದ್
‘ಹರ ಕೊಲ್ಲಲ್ ಪರ ಕಾಯ್ವನೇ?’ ಎಂಬಂತೆ, ಬೇಲಿಯೇ ಎದ್ದು ಹೊಲ ಮೇದಂತೆ, ಅಳತೆಕಲ್ಲೇ ಮೋಸ ಮಾಡಿದಂತೆ, ಚಿನ್ನವನ್ನು ಒರೆಗೆ ಹಚ್ಚುವ ಉಜ್ಜುಕಲ್ಲಿಗೇ ಜಿಡ್ಡು ಮೆತ್ತಿಕೊಂಡಂತೆ, ಗುರುವೇ ಶಿಷ್ಯನಿಗೆ ಅಡ್ಡದಾರಿ ತೋರಿದಂತೆ, ಶಿಕ್ಷಣದ ಮೌಲ್ಯ, ಶ್ರೇಷ್ಠತೆ, ಗುಣಮಟ್ಟವನ್ನು ಎತ್ತಿ ಹಿಡಿಯ ಲೆಂದು ರೂಪುಗೊಂಡಿರುವ ‘ನ್ಯಾಕ್’ (ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ) ಎಂಬ ಸಂಸ್ಥೆ ಮೈ ತುಂಬಾ ಮಸಿ ಬಳಿದುಕೊಂಡು ಮುಖ ತೋರಲಾಗದೆ ನಗೆಪಾಟಲಾಗಿ ಬೋರ ಲು ಬಿದ್ದಿದೆ. ಇದು ನಿಜಕ್ಕೂ ವ್ಯವಸ್ಥೆಯ ಒಂದು ಘೋರ ವ್ಯಂಗ್ಯವೋ, ದುರಂತವೊ? ಎಂಬ ಗೊಂದಲ ಕಾಡುತ್ತಿದೆ.‘
ವಿದ್ಯಾ ದದಾತಿ ವಿನಯಂ ವಿನಯಾತ್ ಯಾತಿ ಪಾತ್ರತಾಮ್! ಪಾತ್ರತ್ವಾತ್ ಧನಮಾ ಪ್ನೋತಿ ಧನಾತ್ ಧರ್ಮ ತಥಃ ಸುಖಂ!’ ಅನ್ನೋ ಒಂದು ಸಂಸ್ಕೃತ ಸುಭಾಷಿತವಿದೆ. ವಿದ್ಯೆ ವಿನಯ ವನ್ನು ಕೊಡುತ್ತದೆ.
ಇದನ್ನೂ ಓದಿ: Roopa Gururaj Column: ಕೃಷ್ಣ ಸೇವಿಸಿದ ಕಡಲೆಕಾಯಿಯ ಲೆಕ್ಕ
ವಿನಯವು ಯೋಗ್ಯತೆ, ಅರ್ಹತೆಯನ್ನು ಕೊಡುತ್ತದೆ. ಆನಂತರ ಧನಾರ್ಜನೆ. ಹಾಗೆ ಸ್ವಂತ ಪರಿಶ್ರಮ ದಿಂದ ಗಳಿಸಿದ ಹಣದಿಂದ ಧರ್ಮಕಾರ್ಯಗಳು ನಡೆಯಬೇಕು, ಇದೇ ಪರಮಸುಖ ಕಂಡುಕೊಳ್ಳುವ ಒಂದು ದಾರಿ. ಹಾಗೇ ವಿವೇಕಾನಂದರು ‘ಮನುಷ್ಯನಲ್ಲಿನ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ’ ಎಂದು ಹೇಳಿದ್ದರು. ಆದರೆ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ವಿದ್ಯೆ ಯು ವಿನಯ, ಅರ್ಹತೆಯನ್ನು ಕೊಡುತ್ತಿಲ್ಲ.
ಅದು ಬದುಕಿನ ಮೌಲ್ಯಗಳನ್ನು, ಶಿಕ್ಷಣದ ಶ್ರೇಷ್ಠತೆಯನ್ನು ಕಾಪಾಡುತ್ತಿಲ್ಲ. ಅದು ಕೇವಲ ಉದ್ಯೋ ಗದ, ಉಪಭೋಗದ ಒಂದು ಯಾಂತ್ರಿಕ ಕೌಶಲವನ್ನು ನೀಡುವ ಸಾಧನವಾಗಷ್ಟೇ ಉಳಿದಿದೆ. ಯಾರು ಈ ವ್ಯವಸ್ಥೆಯ ದೌರ್ಬಲ್ಯಗಳನ್ನು, ಕಳ್ಳದಾರಿಗಳನ್ನು ಶೋಧಿಸಬಲ್ಲರೋ ಅವರಿಗೆ ಯಶಸ್ಸಿ ನ ಎಲ್ಲಾ ಮಾರ್ಗಗಳೂ ತೆರೆದುಕೊಳ್ಳುತ್ತವೆ. ನದಿಮೂಲವೇ ಭ್ರಷ್ಟ, ಕೊಳಕು ಎಂದ ಮೇಲೆ ಅದು ವಿವಿಧ ಪಾತ್ರಗಳಲ್ಲಿ ಹರಿವ ನೀರು ಸ್ವಚ್ಛವಾಗಿರಲು ಹೇಗೆ ಸಾಧ್ಯ? ಇಲ್ಲೂ ಹಾಗೇ ಆಗುತ್ತಿದೆ.
ಶಿಕ್ಷಣದ ಶ್ರೇಷ್ಠ ಮಾನದಂಡಗಳನ್ನು ಎತ್ತಿ ಹಿಡಿದು ನಿಯಂತ್ರಣ ಮಾಡಬೇಕಾದ, ಮಾರ್ಗದರ್ಶನ ನೀಡಬೇಕಾದ ಶ್ರೇಷ್ಠ ಸಂಸ್ಥೆಗಳೇ ಎಂಜಲು ಕಾಸಿಗೆ ಕೈ ಒಡ್ಡಿ ನಿಂತ ಮೇಲೆ ಅದರಡಿಯ ವ್ಯವಸ್ಥೆಗಳ ಬಗ್ಗೆ ಹೇಳುವುದೇನಿದೆ? ಅವು ಪಾರದರ್ಶಕವಾಗಿರಬೇಕು, ಸಮರ್ಥವಾಗಿರಬೇಕು, ದಕ್ಷವಾಗಿರಬೇಕು ಎಂದು ನಿರೀಕ್ಷಿಸುವುದಾದರೂ ಹೇಗೆ? ಅದಕ್ಕೇ ಪರೀಕ್ಷೆಗೆ ಮುಂಚೆಯೇ ಪ್ರಶ್ನೆಪತ್ರಿಕೆಗಳು ಲೀಕಾಗು ತ್ತವೆ, ಅಂಕಪಟ್ಟಿಗಳು ಫೇಕಾಗುತ್ತವೆ. ಈ ವಿಷವರ್ತುಲದಲ್ಲಿ ಶಿಕ್ಷಣ ವ್ಯವಸ್ಥೆ ಲಾಕಾಗಿ ವಿಲವಿಲ ಒದ್ದಾಡುತ್ತಿದೆ.
ಶಿಕ್ಷಣದ ಮೌಲ್ಯಗಳು, ಅವುಗಳ ಮೂಲಕ ದಕ್ಕುವ ಕೌಶಲಗಳು, ಜೀವನೋಪಾಯಗಳು, ಜ್ಞಾನ ಶಾಖೆಗಳ ಉಪಯೋಗಗಳು ಎಲ್ಲವೂ ದುಡ್ಡಿಗೆ ಹರಾಜಿಗಿಟ್ಟ ಯಃಕಶ್ಚಿತ್ ಟೂಲ್‌ಕಿಟ್ ಎನ್ನುವಂತಾ ಗಿದೆ. ಈ ರೆಡ್‌ಟೇಪಿಸಂ, ಭ್ರಷ್ಟಾಚಾರ, ಲಂಚಗುಳಿತನ ಕೆಲವು ಸರಕಾರಿ ಇಲಾಖೆಗಳಿಗೆ ಮಾತ್ರ ವೇ ಸೀಮಿತವಾಗಿತ್ತು. ಕಂದಾಯ, ಲೋಕೋಪಯೋಗಿ, ಕೈಗಾರಿಕೆ, ಗಣಿ ಮೊದಲಾದ ಇಲಾಖೆ ಗಳಲ್ಲಷ್ಟೇ ಲಂಚ, ರುಷುವತ್ತುಗಳು ತಾಂಡವವಾಡುತ್ತಿದ್ದವು.
ಈಚೀಚೆಗೆ ಇದು ಆರೋಗ್ಯ ಮತ್ತು ಶಿಕ್ಷಣಕ್ಕೂ ಅಂಟಿಕೊಂಡು, ಮನುಕುಲವನ್ನು ಕಾಡಿದ ಕರೋ ನಾಗೂ ಮೀರಿದ ಭಯಾನಕ ವೈರಸ್ ಆಗಿಬಿಟ್ಟಿದೆ! ಈಚೆಗೆ ಲೋಕಾಯುಕ್ತ ದಾಳಿಯಲ್ಲಿ ಎಂಜಿನಿ ಯರ್, ಸಬ್ ರಿಜಿಸ್ಟ್ರಾರ್, ಗ್ರಾಮಲೆಕ್ಕಿಗರ ಜತೆ ದೊಡ್ಡ ದೊಡ್ಡ ಕಾಲೇಜುಗಳ ಪ್ರಾಧ್ಯಾಪಕರೂ ಸೇರುತ್ತಿದ್ದಾರೆ. ಇವರೆಲ್ಲಾ ಆದಾಯ ಮೀರಿದ ಆಸ್ತಿ ಮಾಡಿದ್ದಾರೆ. ಎಷ್ಟೋ ವಿಶ್ವ ವಿದ್ಯಾಲಯಗಳ ಕುಲಪತಿಗಳ ಮೇಲೆ ಅಧಿಕಾರ ದುರುಪಯೋಗ ಮಾಡಿದ ಆರೋಪವಿದೆ.
ಎಷ್ಟೋ ಜನ ವಿಶ್ವವಿದ್ಯಾಲಯದ ದುಡ್ಡನ್ನೇ ನುಂಗಿ ನೀರು ಕುಡಿದಿದ್ದಾರೆ. ಇವೆಲ್ಲಾ ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಮೀನುಗಳು ಎನ್ನುವಷ್ಟರಲ್ಲೇ ‘ನ್ಯಾಕ್’ ಎಂಬ ತಿಮಿಂಗಲವು ವ್ಯವಸ್ಥೆಯ ಬಲೆ ಹರಿದುಕೊಂಡು ‘ಗಾಡ್‌ಜಿಲ್ಲಾ’ ತರಹ ಶಿಕ್ಷಣದ ಅಂತಃಸತ್ವವನ್ನೇ ನುಂಗಿ ನೊಣೆಯಲು ಹೊರ ಟಿದೆ.
ಇಷ್ಟಕ್ಕೂ ಊರು ಎಂದ ಮೇಲೆ ಹೊಲಸು ಇರುತ್ತದೆ ನಿಜ. ಒಂದು ವ್ಯವಸ್ಥೆ ಅಂದ ಮೇಲೆ ಒಬ್ಬಿ ಬ್ಬರು ಭ್ರಷ್ಟರು ಇರಬಹುದು. ಆದರೆ ನ್ಯಾಕ್ ಪರಿಶೀಲನಾ ಸಮಿತಿಯ ಅಧ್ಯಕ್ಷರಾದಿಯಾಗಿ ಏಳು ಜನರಿಗೆ ಭ್ರಷ್ಟಾಚಾರದ ಆರೋಪ ಸುತ್ತಿಕೊಂಡಿದೆ. ನಿರ್ದೇಶಕರು, ಸಲಹೆಗಾರರು, ಕೋಆರ್ಡಿ ನೇಟರ್ ಸೇರಿ 10 ಜನ ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ.
ಇವರೆಲ್ಲಾ ವಿದ್ಯಾವಂತರು, ಅದಕ್ಕಿಂತ ಹೆಚ್ಚಾಗಿ ಬುದ್ಧಿವಂತರು, ವಿಚಾರವಂತರು. ಒಬ್ಬೊಬ್ಬರೂ ಮೂರು ಮೂರು ಡಿಗ್ರಿ ಪಿಎಚ್‌ಡಿ ಡಾಕ್ಟರೇಟ್ ಮಾಡಿರುವವರೇ. 20 ವರ್ಷದ ಮೇಲೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನುಭವವಿರುವವರು, ವಿಶೇಷ ಜ್ಞಾನಾರ್ಜನೆ ಮಾಡಿ ವಿಷಯ ತಜ್ಞರು ಎನಿಸಿ ಕೊಂಡಿ ರುವವರು. ಹೊಸ ಹೊಸ ಸಂಶೋಧನೆ ಮಾಡಿರುವವರು, ತಮ್ಮ ಕೈಕೆಳಗಿನ ಹಲವು ಮಂದಿಗೆ ಪಿಎಚ್‌ಡಿ ಕೊಡಿಸಿರುವ ಪುಣ್ಯಾತ್ಮರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದವರು. ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೆ ಪಾತ್ರರಾದ ವರು. ಇವರಲ್ಲಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪರಿಣತ ರಿದ್ದಾರೆ. ಕಾನೂನು ಪದವೀಧರರಾಗಿದ್ದು ಹತ್ತಾರು ದೇಶಗಳಲ್ಲಿ ಪಾಠ ಹೇಳಿ ಬಂದವರಿದ್ದಾರೆ. ಒಟ್ಟಾರೆ ಹೇಳುವುದಾದರೆ, ಇವರೆಲ್ಲಾ ಬದುಕಲ್ಲಿ ಶಾಶ್ವತ ನೆಲೆಕಂಡ, ‘ವೈಟ್ ಕಾಲರ್’ ಎನ್ನಬಹು ದಾದ ಹುದ್ದೆಗಳಲ್ಲಿರುವವರೇ!
ಇವರಿಗೆಲ್ಲಾ ಪ್ರತಿತಿಂಗಳು ಲಕ್ಷಾಂತರ ರುಪಾಯಿ ಸಂಬಳ ಬರುತ್ತದೆ. ‘ನಾಳೆ ಹೇಗಪ್ಪಾ?’ ಎಂದು ಯೋಚಿಸುವಂತಿಲ್ಲ. ಮಕ್ಕಳು ಮರಿಮಕ್ಕಳಿಗೂ ಆಗುವಷ್ಟು ಆಸ್ತಿ ಇದೆ. ಜೀವನ ಭದ್ರತೆ ಇದೆ. ಬಂಗಲೆ, ಕಾರು, ಮೋಜು, ಮಸ್ತಿ ಎಂದು ಐಷಾರಾಮಿ ಜೀವನಶೈಲಿಗೂ ಯಾವ ಕೊರತೆಯೂ ಇರಲಾರದು. ಸಂತೃಪ್ತ ಜೀವನದ ಪರಮೋಚ್ಚ ಸ್ಥಿತಿ ತಲುಪಬೇಕಾದ ಇಂಥವರಿಗೂ ದುಡ್ಡಿನ ಮೋಹ ಹೋಗಿಲ್ಲ, ಲಂಚದಾಸೆ ಬಿಟ್ಟಿಲ್ಲ.
ಹಣ, ಒಡವೆ ಎಂದು ತಮ್ಮ ವ್ಯಕ್ತಿತ್ವವನ್ನೇ ಹರಾಜಿಗಿಟ್ಟುಕೊಂಡು ತಮ್ಮ ಜೀವಿತದ ಸಾಧನೆಗೆಲ್ಲಾ ಮಸಿ ಬಳಿದುಕೊಂಡಿದ್ದಾರೆ. ಅಷ್ಟೇ ಅಲ್ಲ, ದೇಶದ ಕೀರ್ತಿಗೂ ಮಸಿ ಬಳಿದಿದ್ದಾರೆ. ಈ ಪ್ರಜ್ಞಾವಂತ ಜನರೇ ಈ ಸ್ಥಿತಿಗೆ ಇಳಿದ ಮೇಲೆ ಸಾಮಾನ್ಯರಿಗೆ ಹೇಳುವುದೇನಿದೆ? ಹಾಗಾದರೆ ಇವರ ಡಾಕ್ಟರೇಟ್, ಎಂಫಿಲ್‌ಗಳು ಇವರಿಗೆ ಕಲಿಸಿದ್ದೇನು? ಇವರು ಇಷ್ಟು ವರ್ಷ ತಮ್ಮ ವಿದ್ಯಾರ್ಥಿಗಳಿಗೆ ಕಲಿಸಿದ್ದೇನು? ಪ್ರಾಮಾಣಿಕತೆ, ದಕ್ಷತೆ, ನಿಸ್ಪೃಹ ಸೇವೆ ಇವನ್ನೆಲ್ಲಾ ಇವರ ಉನ್ನತ ಶಿಕ್ಷಣ ಇವರಿಗೆ ಕಲಿಸಲೇ ಇಲ್ಲವೇ? ಇಂಥ ಮೇಧಾವಿಗಳಿಗೆ, ಘನವಿದ್ವಾಂಸರಿಗೆ ಇವರ ಸಾಲುಸಾಲು ಡಿಗ್ರಿಗಳು ಇಂಥ ಜೀವನ ಮೌಲ್ಯಗಳನ್ನು, ಸಂಸ್ಕಾರಗಳನ್ನು ಕಲಿಸಿಲ್ಲ ಎಂದ ಮೇಲೆ ಅದೆಂಥ ಶಿಕ್ಷಣ?!
ಕ್ಯಾರೆಕ್ಟರ್ರೇ ಇಲ್ಲದ ಇವರ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳು ರದ್ದಿಗೆ ಹಾಕಲೂ ನಾಲಾ ಯಕ್ಕು! ಇಂಥ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿದ್ಯಾರ್ಥಿಗಳಿಗೆ, ತಾವು ಸೇವೆ ಮಾಡುವ ಸಂಸ್ಥೆಯ ತಮ್ಮ ಕೈಕೆಳಗಿನವರಿಗೆ, ತಮ್ಮಲ್ಲೇ ಇಲ್ಲದ ಯಾವ ಮೌಲ್ಯಗಳನ್ನು ಹೇಳಿಕೊಟ್ಟಾರು? ಇವರು ಹೇಳಿಕೊಡುತ್ತಾರೆಂದು ನಿರೀಕ್ಷಿಸುವುದಾದರೂ ಹೇಗೆ? ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ವಿಶ್ವವಿದ್ಯಾಲಯಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ಯಾವ ವ್ಯಕ್ತಿ ‘ರೋಲ್ ಮಾಡೆಲ್’ ಆದಾನು? ಯಾವ ಮೌಲ್ಯ ಅದರ್ಶಮೌಲ್ಯ ಎನಿಸೀತು?
ಶಿಕ್ಷಣವೆಂದರೆ ದ್ವಂದ್ವಾತೀತ ಸಮಗ್ರತೆಯ ಜ್ಞಾನ ಸಂಪಾದನೆ. ಪೂರ್ಣದೃಷ್ಟಿಯ ಸಂತೃಪ್ತಿಯಿಂದ ಬರುವ ಆನಂದವೇ ಶಿಕ್ಷಣದ ಗುರಿ. ನಿಸರ್ಗಾನುಸಂಧಾನವಿಲ್ಲದೆ ಪ್ರಜ್ಞೆಯ ಪೂರ್ಣವಿಕಾಸ ಮತ್ತು ಯಾವುದೇ ವಿಷಯದ ಸಮಗ್ರ ಅರಿವು ಸಾಧ್ಯವಿಲ್ಲ ಎಂದು ಖ್ಯಾತ ಚಿಂತಕ ಜಿಡ್ಡು ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.
ಶಿಕ್ಷಣ ಕೇವಲ ಒಂದು ಪುಸ್ತಕದ ಓದು ಅಲ್ಲ, ಮಾಹಿತಿಯನ್ನು ಗಿಳಿಪಾಠ ಮಾಡುವುದೂ ಅಲ್ಲ, ಅದು ಜಗತ್ತನ್ನು ಹೇಗೆ ನೋಡಬೇಕು, ಪುಸ್ತಕ ಹೇಳುವುದನ್ನು ಹೇಗೆ ಆಲಿಸಬೇಕು? ಮತ್ತು ಅಲ್ಲಿ ಬರೆದದ್ದು ಎಷ್ಟು ಸತ್ಯ ಎಂದು ವಿವೇಚಿಸುವ ಆಲೋಚನಾ ಕ್ರಮವನ್ನು ರೂಢಿಸಬೇಕು. ಪರೀಕ್ಷೆ ಯಲ್ಲಿ ಪಾಸು ಮಾಡುವುದು, ಪದವಿಗಳನ್ನು ಪಡೆಯುವುದು, ಕೆಲಸ ಗಿಟ್ಟಿಸುವುದು ಮತ್ತು ಐಷಾ ರಾಮಿ ಜೀವನದ ಖಾತರಿ ಗಳಿಸುವುದು ಇಷ್ಟೇ ಶಿಕ್ಷಣದ ಗುರಿಯಲ್ಲ.
ನಾವು ಬೆಳೆದಂತೆಲ್ಲಾ ಎಲ್ಲವನ್ನೂ ಆಲಿಸುವ, ಕುತೂಹಲದಿಂದ ಕಾಣುವ ಮನೋಧರ್ಮ ಮಾಯ ವಾಗುವುದು ದುರ್ದೈವವೇ ಸರಿ! ನಮ್ಮನ್ನು ಮುಂದೆ ಹಲವು ಚಿಂತೆಗಳು ಆವರಿಸುತ್ತವೆ. ಹೆಚ್ಚು ಹೆಚ್ಚು ಹಣ ಗಳಿಸಬೇಕು, ಹೊಸ ನಮೂನೆಯ ಕಾರು ಬೇಕು, ಮನೆ, ಮಕ್ಕಳು ಎಲ್ಲವೂ ಬೇಕು ಇತ್ಯಾದಿ ಮಿತಿ ಇಲ್ಲದ ವಾಂಛೆಗಳು ಮುತ್ತಿಗೆ ಹಾಕುತ್ತವೆ. ನಾವು ಈರ್ಷ್ಯೆಯ, ಮಹತ್ವಾಕಾಂಕ್ಷೆಯ, ದುರಾಸೆಯ ಮತ್ತು ದ್ವೇಷದ ಸಾಕಾರಮೂರ್ತಿಯಾಗುತ್ತೇವೆ.
ಶಿಕ್ಷಣ ಎಂಬ ಹೆಸರಿನಲ್ಲಿ ನಾವು ಈ ವಿಕಾರ ಹಂತವನ್ನು ತಲುಪುವುದಾರೆ ಶಿಕ್ಷಣದ ಸಾರ್ಥಕ್ಯ ವಾದರೂ ಏನು? ಈ ಮಹಾನುಭಾವರ ಮನಸ್ಸಾಕ್ಷಿ ಎಂದೂ ಇಂಥ ಪ್ರಶ್ನೆ ಕೇಳಲೇ ಇಲ್ಲವಾ?ಇನ್ನೊಂದೆಡೆ ವಿದ್ಯಾಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ವಿದ್ಯಾಲಯದ ಕುಲಸಚಿವರು, ನಿರ್ದೇ ಶಕರು ಕೋಟಿ ಕೋಟಿ ಹಣದ ಥೈಲಿ ಹಿಡಿದುಕೊಂಡು ಗ್ರೇಡ್ ಖರೀದಿಗೆ ಹೊರಡುತ್ತಾರೆ.
ಇವರದ್ದು ಡಿಗ್ರಿ ಮಾರುವ ಮೀಡಿಯೇಟರ್‌ಗಳ ಕೆಲಸ. ಇವರ ದೃಷ್ಟಿಯಲ್ಲಿ ವಿದ್ಯಾರ್ಥಿಗಳು ಪೋಷ ಕರು ಕೇವಲ ಇವರ ಬ್ರಾಂಡ್ ಡಿಗ್ರಿ ಕೊಳ್ಳುವ ಖರೀದಿದಾರರು ಅಷ್ಟೇ! ಇವರಿಗೂ ಮಾರು ಕಟ್ಟೆ ದಳ್ಳಾಳಿಗಳಿಗೂ ಏನು ವ್ಯತ್ಯಾಸ? ಒಂದೆಡೆ ಶಿಕ್ಷಣದಲ್ಲಿನ ತರತಮ ನೀತಿಯ ಕಂದಕ ಹೆಚ್ಚಾಗುತ್ತಿದೆ. ದುಡ್ಡಿಲ್ಲದವರು ಸರಕಾರಿ ಕಾಲೇಜು ಸೇರಿ ಅಷ್ಟೋ ಇಷ್ಟೋ ಓದಿ ಫ್ಯಾಕ್ಟರಿ, ಗಾರ್ಮೆಂಟು ಎಂದು ಜೀವನ ಸವೆಸುತ್ತಿದ್ದಾರೆ.
ಕೆಲವರಷ್ಟೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸಿಕ್ಕಷ್ಟೇ ಸೀರುಂಡೆ ಎಂದು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ದುಡ್ಡಿದ್ದವರು ಡಿಗ್ರಿ, ಉದ್ಯೋಗ ಎಲ್ಲವನ್ನೂ ಕೊಳ್ಳುತ್ತಿದ್ದಾರೆ. ವಿಶ್ವವಿದ್ಯಾಲಯಗಳು ಇಂಥ ಅನೈ ತಿಕ ಕೆಲಸಕ್ಕೆ ಮಣೆ ಹಾಕಿ ನಿಂತುಬಿಟ್ಟರೆ ಶಿಕ್ಷಣದ ಶ್ರೇಷ್ಠತೆಯ ಗತಿ ಏನು? ಎಲ್ಲಕ್ಕಿಂತ ಗಾಬರಿ ಪಡಿ ಸುವ ಸಂಗತಿ ಎಂದರೆ ಲಂಚ, ಭ್ರಷ್ಟಾಚಾರ ಸಮೂಹ ಸನ್ನಿಯಾಗುತ್ತಿರುವುದು, ಅಥವಾ ವ್ಯಕ್ತಿಗತ ಧೋರಣೆಯಿಂದ ಸಾಂಸ್ಥಿಕ ಧೋರಣೆಗೆ ರೂಪಾಂತರ ಹೊಂದುತ್ತಿರುವುದು.
ಇದು ತುಂಬಾ ಅಪಾಯಕಾರಿ ಪ್ರವೃತ್ತಿ. ಒಬ್ಬರೋ, ಇಬ್ಬರೋ ಲಂಚಕೋರರಿದ್ದರೆ ನಿಯಂತ್ರಿಸ ಬಹುದು. ಇಡೀ ಸಂಸ್ಥೆ, ವ್ಯಕ್ತಿಗಳ ಸಮೂಹವೇ ಕುಲಗೆಟ್ಟು ಹೋದರೆ ಅದನ್ನು ರಿಪೇರಿ ಮಾಡು ವುದು ಹೇಗೆ? ಇದು ವ್ಯವಸ್ಥೆಗೆ ಅಂಟಿದ ಗ್ಯಾಂಗ್ರಿನ್! ಕೊಳೆತ ಬೆರಳ ಬದಲು ಕಾಲನ್ನೇ ಕತ್ತರಿಸಿ ಹಾಕಬೇಕಾದ ಕರ್ಮ ಕಾಂಡ! ಇದಕ್ಕೆ ಕಾನೂನು, ಶಿಕ್ಷೆ ಏನು ಮಾಡೀತು? ಇಂಥ ಭ್ರಷ್ಟರು ರಕ್ತ ಬೀಜಾಸುರರಂತೆ ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರುತ್ತಾರೆ.
ಬದುಕೆಂಬುದು ಮೆಕಾಲೆ ಶಿಕ್ಷಣದಿಂದ ಗುರುಕುಲ ಶಿಕ್ಷಣಕ್ಕೆ, ಸಂಸ್ಕಾರದ ಮಾರ್ಗಕ್ಕೆ, ಸ್ವಯಂ ನಿಯಂತ್ರಣದ ಪರಿಧಿಗೆ ಮತ್ತೆ ಹೊರಳಿದರಷ್ಟೇ ಭಾರತಕ್ಕೊಂದು ಭವ್ಯ ಭವಿಷ್ಯದ ಹೊಳಹು ಕಂಡೀತು. ಕಾಲಾಯ ತಸ್ಮೈ ನಮಃ!
(ಲೇಖಕರು ಹವ್ಯಾಸಿ ಪತ್ರಕರ್ತರು ಮತ್ತು ಕಿರುತೆರೆ ಸಂಭಾಷಣೆಗಾರರು)