ಬೆಂಗಳೂರು: ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ಖಾಸಗಿ ಕೆಲಸಗಳಿಗೆ ಉಪಯೋಗಿಸಿದಾಗ ಪಾವತಿಸಬೇಕಾದ ದರಗಳನ್ನು ಪರಿಷ್ಕರಿಸಲಾಗಿದ್ದು, ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎನ್. ತಿಪ್ಪೇಸ್ವಾಮಿ ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.
ಕರ್ನಾಟಕ ಆರ್ಥಿಕ ಸಂಹಿತೆಯ 174 (4)ನೇ ಅನುಚ್ಛೇದದ ಅಡಿಯಲ್ಲಿನ ಟಿಪ್ಪಣಿ 2 ರನ್ವಯ ನಾಮ ನಿರ್ದಿಷ್ಟ ವಾಹನವನ್ನು ಹೊಂದಿರುವ ಯಾವುದೇ ಅಧಿಕಾರಿಯು ಸರ್ಕಾರಿ ವಾಹನವನ್ನು ಪಾವತಿ ಆಧಾರದ ಮೇಲೆ ಖಾಸಗಿ ಪ್ರವಾಸಕ್ಕೆ ಉಪಯೋಗಿಸಲು ಅನುಮತಿ ನೀಡಲಾಗಿದೆ. ಉಲ್ಲೇಖಿತ ಅಧಿಕೃತ ಜ್ಞಾಪನದಲ್ಲಿ ಸರ್ಕಾರಿ ಅಧಿಕಾರಿಗಳು ನಾಮ ನಿರ್ದಿಷ್ಟ ವಾಹನವನ್ನು ಖಾಸಗಿ ಪ್ರವಾಸಕ್ಕೆ ಉಪಯೋಗಿಸಿದಾಗ ಪಾವತಿಸುವ ದರಗಳನ್ನು ಕುರಿತು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಡೀಸೆಲ್ ದರವು ಹಾಗೂ ಪೆಟ್ರೋಲ್ ದರವು ಶೇ.60ಕ್ಕೂ ಮಿಗಿಲಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಲ್ಲೇಖಿತ ನಿಗದಿಪಡಿಸಿರುವ ದರಗಳನ್ನು ಸರ್ಕಾರಿ ನಾಮ ನಿರ್ದಿಷ್ಟ ವಾಹನಗಳನ್ನು ಸರ್ಕಾರಿ ಅಧಿಕಾರಿಗಳು ಖಾಸಗಿ ಉಪಯೋಗಕ್ಕಾಗಿ ಉಪಯೋಗಿಸಿದಾಗ ಪಾವತಿಸಬೇಕಾದ ದರಗಳನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿದೆ.
ಪರಿಷ್ಕೃತ ದರ
ಖಾಸಗಿ ಪ್ರವಾಸಕ್ಕೆ ಎಲ್ಲಾ ತರಹದ ಸಾಮರ್ಥ ವಾಹನಗಳಿಗೆ ಮಾಸಿಕ ರೂ. 1,600 (ತಿಂಗಳಿಗೆ ಕ್ರಮಿಸುವ ದೂರ 500 ಕಿ.ಮೀ.ವರೆಗೆ ಮಾತ್ರ). 500 ಕಿ.ಮೀ. ಮೀರಿದಲ್ಲಿ ಪ್ರತಿ ಕಿ.ಮೀ.ಗೆ ರೂ. 6 ದರದಂತೆ ಹೆಚ್ಚುವರಿಯಾಗಿ ಪಾವತಿಸಿ, ಖಾಸಗಿ ಪ್ರವಾಸಕ್ಕೆ ಉಪಯೋಗಿಸಲು ಅನುಮತಿಸಿದೆ. ಈ ದರಗಳು ಈ ಅಧಿಕೃತ ಜ್ಞಾಪನೆ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ ಎಂದು ಎನ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.