Bidar ATM robbery: ಬೀದರ್ ಶೂಟೌಟ್ ಪ್ರಕರಣದ ಖದೀಮರ ಗುರುತು ಪತ್ತೆ; ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ಘೋಷಣೆ
Bidar ATM robbery: ಬಿಹಾರ ಮೂಲದ ಇಬ್ಬರು ದರೋಡೆಕೋರರೇ ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದು, ಆರೋಪಿಗಳ ಸುಳಿವು ನೀಡಿದವರಿಗೆ ಭಾರಿ ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ.


ಬೀದರ್: ನಗರದ ಎಟಿಎಂನಲ್ಲಿ ನಡೆದ ಶೂಟೌಟ್ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಘಟನೆ ನಡೆದು ಒಂದು ತಿಂಗಳು ಕಳೆದರೂ ಆರೋಪಿಗಳು ಪತ್ತೆಯಾಗಿಲ್ಲ. ಆರೋಪಿಗಳಿಗಾಗಿ ಎಲ್ಲ ಕಡೆ ಪೊಲೀಸರು ಬಲೆ ಬೀಸಿದ್ದರು. ಈ ನಡುವೆ ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ ಬೀದರ್ ಪೋಲಿಸರು ಯಶಸ್ವಿಯಾಗಿದ್ದು, ಘಟನೆ ಜರುಗಿ ಒಂದು ತಿಂಗಳ ನಂತರ ಆರೋಪಿಗಳ ಫೋಟೊ ಬಿಡುಗಡೆ ಮಾಡಲಾಗಿದೆ. ಬಿಹಾರ ಮೂಲದ ದರೋಡೆಕೋರರಾದ ಅಮನ್ ಕುಮಾರ್ ಹಾಗೂ ಅಲೋಕ್ ಕುಮಾರ್ ಅಲಿಯಾಸ್ ಅಶುತೋಷ್@ಅಂಬಾನಿ ಎಂಬುವವರು ಕೃತ್ಯ ಎಸಗಿದ ಆರೋಪಿಗಳು ಎಂದು ಗುರುತಿಸಲಾಗಿದೆ. ಇವರ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ.
ಈ ಇಬ್ಬರೂ ಆರೋಪಿಗಳು ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನುವ ಮಾಹಿತಿ ಪೋಲಿಸರಿಗೆ ಲಭ್ಯವಾಗಿದೆ. ಆರೋಪಿಗಳಿಬ್ಬರ ಕುಟುಂಬದವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಖಚಿತ ಮೂಲಗಳು ವಿಶ್ವವಾಣಿಗೆ ತಿಳಿಸಿವೆ. ಇಬ್ಬರ ಗುರುತು ಪತ್ತೆಯಾದ ನಂತರ ಬೀದರ್ ಜಿಲ್ಲಾ ಪೋಲಿಸರು, ಬಿಹಾರದ ಹಲವೆಡೆ ಇವರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸಿದ್ದಾರೆ. ಇಬ್ಬರ ಬಗ್ಗೆ ಮಾಹಿತಿ ಕೊಟ್ಟವರಿಗೆ ಐದು ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?
ಜನವರಿ 16 ರಂದು ಬೀದರ್‌ನಲ್ಲಿ ಹಾಡಹಗಲೇ ಸಿನಿಮೀಯ ರೀತಿಯ ದರೋಡೆಯೊಂದು ನಡೆದಿತ್ತು. ಈ ಘಟನೆಯಿಂದ ಗಡಿ ಜಿಲ್ಲೆಯ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಬೀದರ್ ನಗರದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ನ್ಯಾಯಾಲಯದ ಸಮೀಪ ಎಟಿಎಂನಲ್ಲಿ ಹಣ ಹಾಕಲು ಬಂದಿದ್ದ ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಮೇಲೆ ಬೈಕ್ನಲ್ಲಿ ಬಂದಿದ್ದ ಮುಸುಕುದಾರಿ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದರು. ಎಟಿಎಂಗೆ ಹಣ ಹಾಕುತ್ತಿದ್ದ ಸಿಎಂಎಸ್ ಎಜೆನ್ಸಿಯ ಗಿರಿ ವೆಂಕಟೇಶ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಿವಕುಮಾರ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದರು.
ಈ ಸುದ್ದಿಯನ್ನೂ ಓದಿ | Rudrappa Lamani: ರೇಡಿಂಗ್ ಮೂಲಕ ಕಬಡ್ಡಿ ಟೂರ್ನಿಗೆ ಚಾಲನೆ ನೀಡಲು ಹೋಗಿ ಬಿದ್ದ ಉಪ ಸಭಾಪತಿ; ಕಾಲಿಗೆ ಪೆಟ್ಟು
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಪೊಲೀಸರ ತಂಡ, ಬೆರಳಚ್ಚು ತಜ್ಞರು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೀದರ್ ಜಿಲ್ಲಾ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಹಣದ ಪೆಟ್ಟಿಗೆ ತೆಗೆದುಕೊಂಡು ಹೋದ ಇಬ್ಬರು ಖದೀಮರ ಬೆನ್ನು ಬಿದ್ದಿರುವ ಪೊಲೀಸರು, ಆರೋಪಿಗಳ ಚಲನವಲನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.